ಮಹಿಳೆ ಕೊಲೆ: ಮಗನ ಮೇಲೆ ಶಂಕೆ

KannadaprabhaNewsNetwork | Published : Oct 26, 2023 1:00 AM

ಸಾರಾಂಶ

ಮಹಿಳೆ ಕೊಲೆ: ಮಗನ ಮೇಲೆ ಶಂಕೆಚಿಕೋರಿ ಕಾರ್ಖಾನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ನಳಿನಿಕಾರ್ಖಾನೆ ಮಾರಿ ಮನೆ ಉಳಿಸಿಕೊಳ್ಳುವ ಆಸೆಪಟ್ಟಿದ್ದರು
- ಚಿಕೋರಿ ಕಾರ್ಖಾನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ನಳಿನಿ - ಕಾರ್ಖಾನೆ ಮಾರಿ ಮನೆ ಉಳಿಸಿಕೊಳ್ಳುವ ಆಸೆಪಟ್ಟಿದ್ದರು ಕನ್ನಡಪ್ರಭ ವಾರ್ತೆ ಮಂಡ್ಯ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಕೊಲೆಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಪುತ್ರನ ಮೇಲೆ ಶಂಕೆ ವ್ಯಕ್ತಪಡಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಹೊರವಲಯದ ಹೆಬ್ಬಳ್ಳ ಸಮೀಪವಿರುವ ಚಿಕೋರಿ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ನಳಿನಿ ರಮೇಶ್ (೬೨) ಕೊಲೆಯಾಗಿದ್ದಾರೆ. ಟವಲ್‌ನಿಂದ ಬಿಗಿದು ಮಹಿಳೆಯನ್ನು ಹತ್ಯೆ ಮಾಡಲಾಗಿದ್ದು, ಪುತ್ರ ನಿತಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸುಭಾಷ್‌ ನಗರ ನಿವಾಸಿಯಾಗಿರುವ ರಮೇಶ್ ಅವರು ಕಾಫಿಪುಡಿ ಅಂಗಡಿ ಇಟ್ಟುಕೊಂಡಿದ್ದು, ಹೆಬ್ಬಳ್ಳ ಸಮೀಪ ಚಿಕೋರಿ ಕಾರ್ಖಾನೆಯನ್ನೂ ನಡೆಸುತ್ತಿದ್ದರು. ಉದ್ಯಮ ಮಾಡಲು ಮನೆ ಮತ್ತು ಚಿಕೋರಿ ಕಾರ್ಖಾನೆಯನ್ನು ಒತ್ತೆ ಇಟ್ಟು ಖಾಸಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಸಾಲ ತೀರಿಸಲಾಗದ ಕಾರಣ ಬ್ಯಾಂಕ್‌ನವರು ಮನೆ ಮತ್ತು ಚಿಕೋರಿ ಕಾರ್ಖಾನೆಯನ್ನು ನ್ಯಾಯಾಲಯದ ಮೂಲಕ ತಮ್ಮ ಸುಪರ್ದಿಗೆ ಪಡೆದಿದ್ದರು. ಇದರಿಂದ ನೊಂದಿದ್ದ ದಂಪತಿ ಮಂಡ್ಯ ತೊರೆದು ಮೈಸೂರಿನ ವೃದ್ಧಾಶ್ರಮ ಸೇರಿದ್ದರು. ವೃದ್ಧಾಶ್ರಮದಲ್ಲಿದ್ದುಕೊಂಡೇ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ದಂಪತಿಗೆ ನ್ಯಾಯಾಲಯ ಮಾನವೀಯ ನೆಲೆಗಟ್ಟಿನಲ್ಲಿ ಹೆಬ್ಬಳ್ಳದ ಸಮೀಪವಿರುವ ಕಾರ್ಖಾನೆಯಲ್ಲಿ ವಾಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಅನಾರೋಗ್ಯಕ್ಕೊಳಗಾಗಿ ಹಾಸಿಗೆ ಹಿಡಿದಿರುವ ರಮೇಶ್ ಬೇರೆಡೆ ನೆಲೆಸಿದ್ದರು. ಚಿಕೋರಿ ಕಾರ್ಖಾನೆಯಲ್ಲಿ ಒಬ್ಬರೇ ಇರಬೇಕಾದ ಪರಿಸ್ಥಿತಿಯ ಬಗ್ಗೆ ನ್ಯಾಯಾಲಯ ನಳಿನಿ ರಮೇಶ್‌ಗೆ ಎಚ್ಚರಿಕೆಯನ್ನೂ ನೀಡಿತ್ತು ಎನ್ನಲಾಗಿದೆ. ಆದರೂ ನಳಿನಿ ರಮೇಶ್ ಅಲ್ಲಿ ಒಂಟಿಯಾಗಿರುವುದಕ್ಕೆ ಒಪ್ಪಿಕೊಂಡಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ಅಲ್ಲಿಯೇ ನೆಲೆಸಿದ್ದರು. ಚಿಕೋರಿ ಕಾರ್ಖಾನೆಯನ್ನು ಮಾರಾಟ ಮಾಡಿ ಅದರಿಂದ ಬರುವ ಹಣದಿಂದ ಬ್ಯಾಂಕ್ ಸಾಲ ತೀರಿಸಿ ಸುಭಾಷ್‌ ನಗರದ ಮನೆಯನ್ನು ಉಳಿಸಿಕೊಳ್ಳಬೇಕೆನ್ನುವುದು ನಳಿನಿ ಅವರ ಆಸೆಯಾಗಿತ್ತು. ಗೋದಾಮು ಕೊಳ್ಳಲು ಬರುವವರಿಗೆ ಜಾಗ ತೋರಿಸುವ ಉದ್ದೇಶದಿಂದಲೇ ಅಲ್ಲೇ ಉಳಿದುಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ನಳಿನಿ ರಮೇಶ್ ಅವರ ಮಗ ನಿತಿನ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಆತನನ್ನು ವಿವಾಹವಾಗಿದ್ದ ಪತ್ನಿ ಕೂಡ ತವರುಮನೆ ಸೇರಿಕೊಂಡಿದ್ದರು. ಆಸ್ತಿ ವಿಚಾರವಾಗಿ ನಳಿನಿ ಮತ್ತು ಪುತ್ರ ನಿತಿನ್ ನಡುವೆ ವಿರಸವಿತ್ತು. ಇದೇ ಕಾರಣಕ್ಕೆ ನಳಿನಿ ಅವರು ನೆಲೆಸಿದ್ದ ಚಿಕೋರಿ ಕಾರ್ಖಾನೆಗೆ ಹೋಗದಂತೆ ನಿತಿನ್‌ಗೆ ಉಪವಿಭಾಗಾಧಿಕಾರಿ ನ್ಯಾಯಾಲಯ ನಿರ್ಬಂಧವನ್ನೂ ವಿಧಿಸಿತ್ತು ಎನ್ನಲಾಗಿದೆ. ಹೀಗಿರುವಾಗಿ ಗೋದಾಮಿನಲ್ಲಿ ಮಲಗಿದ್ದ ನಳಿನಿ ಅವರ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಮಂಗಳವಾರ ರಾತ್ರಿ ಯಾರೋ ಹತ್ಯೆ ಮಾಡಿದ್ದಾರೆ. ಗೋದಾಮಿನಲ್ಲಿ ಮಹಿಳೆ ಸಾವನ್ನಪ್ಪಿರುವ ಬಗ್ಗೆ ಸ್ಥಳೀಯರು ೧೧೨ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಡಿವೈಎಸ್ಪಿ ಶಿವಮೂರ್ತಿ, ಗ್ರಾಮಾಂತರ ಠಾಣೆಯ ಸಿಪಿಐ ಶಿವಪ್ರಸಾದ್‌ರಾವ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಮತ್ತು ತಾಯಿಯ ನಡುವೆ ವಿವಾದವಿದ್ದ ಕಾರಣ ಸೊಸೆ ನೀಡಿರುವ ದೂರಿನ ಆಧಾರದ ಮೇಲೆ ನಿತಿನ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

Share this article