ಮನೆಯಲ್ಲಿ ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಮಹಿಳೆ

KannadaprabhaNewsNetwork |  
Published : Jun 29, 2025, 01:33 AM ISTUpdated : Jun 29, 2025, 06:14 AM IST
DOG 1 | Kannada Prabha

ಸಾರಾಂಶ

ತನ್ನ ಫ್ಲ್ಯಾಟ್‌ನಲ್ಲಿ ಸಾಕು ನಾಯಿ ಮೃತದೇಹದ ಜತೆ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯೊಬ್ಬಳು ಮೂರು ದಿನಗಳ ಕಾಲ ಕಳೆದಿರುವ ದಾರುಣ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

 ಬೆಂಗಳೂರು :  ತನ್ನ ಫ್ಲ್ಯಾಟ್‌ನಲ್ಲಿ ಸಾಕು ನಾಯಿ ಮೃತದೇಹದ ಜತೆ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯೊಬ್ಬಳು ಮೂರು ದಿನಗಳ ಕಾಲ ಕಳೆದಿರುವ ದಾರುಣ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ದೊಡ್ಡನಕ್ಕುಂದಿಯ ಅಕ್ಮೆ ಬಾಲ್ಲೇಟ್‌ ಅಪಾರ್ಟ್‌ಮೆಂಟ್‌ ನಿವಾಸಿ ತ್ರಿಪರ್ಣಾ ಪಾಯಿಕ್‌ ಮೇಲೆ ಈ ಆರೋಪ ಬಂದಿದ್ದು, ಆಕೆಯ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ಸಹಿಸಲಾರದೆ ಬಿಬಿಎಂಪಿ ಪಶುಸಂಗೋಪಾನಾ ಇಲಾಖೆಗೆ ಅಪಾರ್ಟ್‌ಮೆಂಟ್ ನಿವಾಸಿಗಳು ದೂರು ನೀಡಿದ್ದರು. ಅದರನ್ವಯ ಆಕೆ ಫ್ಲ್ಯಾಟ್‌ಗೆ ಅಧಿಕಾರಿಗಳು ತೆರಳಿದಾಗ ನಾಯಿ ಮೃತದೇಹ ಪತ್ತೆಯಾಗಿದೆ.

ಅಧಿಕಾರಿಗಳ ಜತೆ ಜಟಾಪಟಿ:

ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ ಪಶ್ಚಿಮ ಬಂಗಾಳ ಮೂಲದ ತ್ರಿಪರ್ಣಾ ಅವರು, ಐದು ವರ್ಷಗಳಿಂದ ಅಕ್ಮೆ ಅಪಾರ್ಟ್‌ಮೆಂಟ್‌ನಲ್ಲಿ ಏಕಾಂಗಿಯಾಗಿ ನೆಲೆಸಿದ್ದಾರೆ. ಆದರೆ ತಮ್ಮ ಫ್ಲ್ಯಾಟ್‌ನಲ್ಲಿ ಆಕೆ ಮೂರು ನಾಯಿಗಳನ್ನು ಸಾಕಿದ್ದರು. ಅಲ್ಲದೆ ನೆರೆಹೊರೆಯವರ ಜತೆ ಆಕೆ ಅನ್ಯೋನ್ಯವಾಗಿರಲಿಲ್ಲ. ಯಾರೊಂದಿಗೆ ಮಾತುಕತೆ ಸಹ ಇರಲಿಲ್ಲ ಎನ್ನಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ತ್ರಿಪರ್ಣಾ ಅವರ ಫ್ಲ್ಯಾಟ್‌ನಿಂದ ಸತ್ತ ಪ್ರಾಣಿಯ ದುರ್ವಾಸನೆ ಬಂದಿದೆ. ಈ ಬಗ್ಗೆ ಆಕೆಯನ್ನು ಅಪಾರ್ಟ್‌ಮೆಂಟ್‌ ನಿವಾಸಿಗಳು ಪ್ರಶ್ನಿಸಿದಾಗ ಜಗಳವಾಗಿದೆ. ಕೊನೆಗೆ ಬಿಬಿಎಂಪಿ ಕಚೇರಿಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅದರನ್ವಯ ತ್ರಿಪರ್ಣಾ ಅವರ ಫ್ಲ್ಯಾಟ್‌ಗೆ ಜೂ.26 ರಂದು ಮಂಗಳವಾರ ಪ್ರಶುಸಂಗೋಪನಾ ವಿಭಾಗದ ಸಹಾಯಕ ನಿರ್ದೇಶಕ ಡಾ.ಕೆ.ಎಲ್‌.ರುದ್ರೇಶ್ ಕುಮಾರ್ ತಂಡವು ತೆರಳಿದೆ. ಆಗ ತನ್ನ ಫ್ಲ್ಯಾಟ್‌ ಒಳಗೆ ಅಧಿಕಾರಿಗಳು ಪ್ರವೇಶಿಸಲು ಆಕೆ ನಿರ್ಬಂಧಿಸಿದ್ದಾಳೆ. ಈ ವೇಳೆ ಅಧಿಕಾರಿ ಮತ್ತು ತ್ರಿಪರ್ಣಾ ಮಧ್ಯೆ ಬಿರುಸಿನ ಮಾತುಕತೆ ನಡೆದಿದೆ. ಆಗ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-122)ಗೆ ಕರೆ ಮಾಡಿ ಆಕೆ ದೂರು ನೀಡಿದ್ದಾಳೆ. ಕೂಡಲೇ ಘಟನಾ ಸ್ಥಳಕ್ಕೆ ಮಹದೇವಪುರ ಠಾಣೆ ಪೊಲೀಸರು ತೆರಳಿದ್ದಾರೆ. ಅಂತಿಮವಾಗಿ ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆದು ಅಧಿಕಾರಿಗಳನ್ನು ಆಕೆ ಒಳ ಬಿಟ್ಟಿದ್ದಾಳೆ. 

ಫ್ಲ್ಯಾಟ್‌ನಲ್ಲಿ ಗಬ್ಬು ವಾಸನೆ ಪರಿಶೀಲಿಸಿದಾಗ ಕೋಣೆಯಲ್ಲಿ ಬೆಡ್‌ಶೀಟ್‌ ಸುತ್ತಿ ಬ್ಯಾಗ್‌ನಲ್ಲಿಟ್ಟ ಸಾಕು ನಾಯಿ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಎರಡು ನಾಯಿಗಳು ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೊದ ಮೊದಲು ಎರಡು ನಾಯಿ ಕಂಡು ಮತ್ತೊಂದು ನಾಯಿ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ ಆಕೆ ಸರಿಯಾಗಿ ಉತ್ತರ ನೀಡಿಲ್ಲ. ಕೊನೆಗೆ ಕೋಣೆಯಲ್ಲಿ ತಪಾಸಣೆ ನಡೆಸಿದಾಗ ನಾಯಿ ಮೃತದೇಹ ಸಿಕ್ಕಿದೆ.

ಚಿತ್ರ ಹಿಂಸೆ ನೀಡಿ ನಾಯಿ ಕೊಂದಳೇ?:

ತನ್ನ ಸಾಕು ನಾಯಿಗೆ ಚಿತ್ರ ಹಿಂಸೆ ನೀಡಿ ತ್ರಿಪರ್ಣಾ ಕೊಂದಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಪಶುಪಾಲನಾ ಇಲಾಖೆ ಅಧಿಕಾರಿ ರುದ್ರೇಶ್ ಅವರು ನೀಡಿರುವ ದೂರಿನಲ್ಲಿ ಸಹ ನಾಯಿಗೆ ಚಿತ್ರ ಹಿಂಸೆ ನೀಡಿದ ಬಗ್ಗೆ ಉಲ್ಲೇಖವಾಗಿದೆ. ಆದರೆ ಹಸಿವಿನಿಂದ ನಾಯಿ ಸತ್ತಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಖಿನ್ನತೆಯಿಂದ ಬಳಲುತ್ತಿದ್ದ ತ್ರಿಪರ್ಣಾ? : ವೈಯಕ್ತಿಕ ಕಾರಣಗಳಿಂದ ತ್ರಿಪರ್ಣಾ ಖಿನ್ನತೆಗೊಳಗಾಗಿದ್ದಾಳೆ. ಇದೇ ಕಾರಣಕ್ಕೆ ಜನ ಸಂಪರ್ಕದಿಂದ ದೂರವಾಗಿ ಏಕಾಂಗಿಯಾಗಿದ್ದಳು. ಅಲ್ಲದೆ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ತ್ರಿಪರ್ಣಾಳಿಗೆ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಇನ್ನು ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘ ಹಾಗೂ ಅಲ್ಲಿರುವ ಪ್ರಾಣಿ ದಯಾ ಸಂಘದ ಸದಸ್ಯರ ಜತೆ ಆಕೆಗೆ ಮನಸ್ತಾಪವಾಗಿತ್ತು. ಸಣ್ಣಪುಟ್ಟ ವಿಷಯಗಳಿಗೆ ಆಕೆ ಮೇಲೆ ಸ್ಥಳೀಯ ನಿವಾಸಿಗಳು ಜಗಳ ಸಹ ಮಾಡಿದ್ದರು. ಈ ಖಿನ್ನತೆಯಿಂದ ನಾಯಿಗಳಿಗೆ ಆಕೆ ಆಹಾರ ನೀಡಿಲ್ಲ. ಇದರಿಂದ ಅವುಗಳು ಅಸ್ವಸ್ಥಗೊಂಡಿದ್ದವು ಎಂದು ಮೂಲಗಳು ತಿಳಿಸಿವೆ.

ಸ್ಥಳೀಯರ ಮೇಲೆ ದೂರು ನೀಡಿದ್ದ ತ್ರಿಪರ್ಣಾ:

ಕಳೆದ ವಾರ ತನ್ನ ಮೇಲೆ ನೆರೆಹೊರೆಯವರು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿ ಮಹದೇವಪುರ ಠಾಣೆಗೆ ತ್ರಿಪರ್ಣಾ ದೂರು ನೀಡಿದ್ದಳು. ಆಗ ಅಪಾರ್ಟ್‌ಮೆಂಟ್‌ಗೆ ತೆರಳಿ ಸ್ಥಳೀಯರ ಜತೆ ಪೊಲೀಸರು ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. 

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ಕಲಹ: ಕೊಲೆ ಅಂತ್ಯ
ಪೊಲೀಸ್‌ ಠಾಣೆ ಸಮೀಪ ಪಾನಮತ್ತ ದಂಪತಿಯ ರಂಪಾಟ