ಲಗ್ನ ಪತ್ರಿಕೆ ಕೊಡೋ ನೆಪದಲ್ಲಿ ಮನೆಗೆ ಬಂದು ಮಹಿಳೆ ಕೈ-ಕಾಲು ಕಟ್ಟಿ ದರೋಡೆ

KannadaprabhaNewsNetwork |  
Published : Nov 07, 2025, 03:45 AM IST
Crime News

ಸಾರಾಂಶ

ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ಮನೆ ಒಳಗೆ ಬಂದ ಅಪರಿಚಿತ ಮೂವರು ದುಷ್ಕರ್ಮಿಗಳ ತಂಡವೊಂದು ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ-ಕಾಲುಗಳನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಅತ್ತಿಬೆಲೆ ಪೊಲೀಸ್‌ ಠಾಣೆ ವ್ಯಾಪ್ತಿಯ ನೆರಳೂರಿನಲ್ಲಿ ಹಾಡಹಗಲೇ ನಡೆದಿದೆ.

 ಆನೇಕಲ್ :  ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ಮನೆ ಒಳಗೆ ಬಂದ ಅಪರಿಚಿತ ಮೂವರು ದುಷ್ಕರ್ಮಿಗಳ ತಂಡವೊಂದು ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ-ಕಾಲುಗಳನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಅತ್ತಿಬೆಲೆ ಪೊಲೀಸ್‌ ಠಾಣೆ ವ್ಯಾಪ್ತಿಯ ನೆರಳೂರಿನಲ್ಲಿ ಹಾಡಹಗಲೇ ನಡೆದಿದೆ.

ನೆರಳೂರು ನಿವಾಸಿ ರವಿಕುಮಾರ್ ಹಾಗೂ ನಾಗವೇಣಿ ದಂಪತಿ ಮನೆಗೆ ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ನುಗ್ಗಿದ್ದ ಖತರ್ನಾಕ್ ಗ್ಯಾಂಗ್‌ 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದೆ. ಈ ಸಂಬಂಧ ನಾಗವೇಣಿ ಅವರು ಅತ್ತಿಬೆಲೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನೆ ವಿವರ:

 ನೆರಳೂರು ನಿವಾಸಿ ರವಿಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ಬ್ಯಾಂಕಿನಲ್ಲಿ ಅಡವಿಟ್ಟಿದ್ದ ಆಭರಣಗಳನ್ನು ಬಿಡಿಸಿಕೊಂಡು ಮನೆಯಲ್ಲಿಟ್ಟಿದ್ದರು. ಎಂದಿನಂತೆ ರವಿಕುಮಾರ್ ಬುಧವಾರ ಮದ್ಯಾಹ್ನ 2 ಗಂಟೆಗೆ ಕಂಪನಿ ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗಿದ್ದಾರೆ. ಅರ್ಧಗಂಟೆ ಬಳಿಕ ಮನೆಯಲ್ಲಿ ನಾಗವೇಣಿ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡು ಮೂವರು ದುಷ್ಕರ್ಮಿಗಳು ಮನೆಯ ಬೆಲ್ ರಿಂಗ್ ಮಾಡಿದ್ದಾರೆ. ನಾಗವೇಣಿ ಮನೆ ಬಾಗಿಲು ತೆರೆದಾಗ ಆಗಂತುಕರು ತೆಲುಗು ಭಾಷೆಯಲ್ಲಿ ಮಾತನಾಡಿದ್ದು, ಲಗ್ನ ಪತ್ರಿಕೆ ನೀಡಲು ಬಂದಿರುವುದಾಗಿ ತಿಳಿಸಿದ್ದಾರೆ. ಆಗ ಅವರನ್ನು ಒಳಗೆ ಕರೆದುಕೊಂಡು ಹೋಗಿ ಸೋಫಾದ ಮೇಲೆ ಕುಳ್ಳಿರಿಸಿದ್ದಾಳೆ.

ಅಡುಗೆ ಮನೆಯಲ್ಲಿ ಬಂಧನ:

ದುಷ್ಕರ್ಮಿಗಳ ತಂಡದಲ್ಲಿದ್ದ ಓರ್ವ ಮಹಿಳೆ ಕುಡಿಯಲು ನೀರು ಕೇಳಿದ್ದರಿಂದ ನಾಗವೇಣಿ ನೀರು ತರಲು ಅಡುಗೆ ಮನೆಗೆ ಹೋಗಿದ್ದು, ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಕುತ್ತಿಗೆಗೆ ಉದ್ದನೆಯ ಕತ್ತಿ ಇಟ್ಟು, ‘ಕಿರುಚಬೇಡ ನಾವು ಹೇಳಿದಂತೆ ಕೇಳಿದರೆ ತೊಂದರೆ ಮಾಡುವುದಿಲ್ಲ’ ಎಂದು ಬೆದರಿಸಿದ್ದಾನೆ. ಆಗ ಇನ್ನೊಬ್ಬ ನಾಗವೇಣಿ ಬಾಯಿಗೆ ಬಟ್ಟೆ ತುರುಕಿದ್ದು, ಕೋಣೆಗೆ ಕರೆದೊಯ್ದು ಕುರ್ಚಿ ಮೇಲೆ ಕೂರಿಸಿ ಹಿಂದಿನಿಂದ ಕೈಕಾಲು ಕಟ್ಟಿದ್ದಾರೆ. ಬಳಿಕ ಹಿಂಸೆ ಮಾಡಿ ಬೀರುವಿನ ಕೀಲಿ ಪಡೆದು ಲಾಕರ್‌ನಲ್ಲಿದ್ದ ಸುಮಾರು 200 ಗ್ರಾಂ ತೂಕದ ಚಿನ್ನಾಭರಣ, ನಾಗವೇಣಿ ಕತ್ತಿನಲ್ಲಿದ್ದ 50ಗ್ರಾಂ ತಾಳಿ ದೋಚಿದ್ದಾರೆ.

ನೆರೆಯವರ ಸಹಾಯ: 

ದರೋಡೆ ಬಳಿಕ ನಾಗವೇಣಿ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಮನೆ ಬಾಗಿಲು ಮುಂದೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಕೆಲ ಹೊತ್ತಿನ ನಂತರ ನಾಗವೇಣಿ ಅವರು ಕಾಲಿನಿಂದ ಸಮೀಪದಲ್ಲಿದ್ದ ಮೊಬೈಲ್ ಎಳೆದುಕೊಂಡು ನೆರೆಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಆಗಮಿಸಿದ ಅಕ್ಕಪಕ್ಕದ ಮನೆಯವರು ಬಾಗಿಲು ತೆರೆದು ನಾಗವೇಣಿಯವರ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿದ್ದಾರೆ. ಆ ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಮೋಹನ್ ಕುಮಾರ್, ಇನ್‌ಸ್ಪೆಕ್ಟರ್ ಮಂಜುನಾಥ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದು, ಶ್ವಾನದಳ, ಬೆರಳಚ್ಚು ತಜ್ಞರು ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಮನೆ ಸಮೀಪದ ಶಾಲೆಯ ಬಳಿ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಮೂವರ ಚಹರೆ ಪತ್ತೆಯಾಗಿದೆ.

ದುಷ್ಕರ್ಮಿಗಳು ಹೊಸ ಹೊಸ ಮಾರ್ಗಗಳನ್ನು ಅನುಸರಿಸಿ ನಗರ ಮತ್ತು ಗ್ರಾಮೀಣ ಪ್ರದೇಶದ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡ ದರೋಡೆ ಮಾಡುತ್ತಿದ್ದು, ನಾಗರಿಕರು ಎಚ್ಚರಿಕೆಯಿಂದ ಇರಬೇಕು. ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ, ಮಾಹಿತಿ ಕೆಳುವ ನೆಪದಲ್ಲಿ ಅಪರಿಚಿತರು ಮನೆಗಳಿಗೆ ಪ್ರವೇಶಿಸುವ ಸಾಧ್ಯತೆಗಳಿವೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.

- ವೆಂಕಟೇಶ್ ಪ್ರಸನ್ನ, ಎಎಸ್ಪಿ, ಅತ್ತಿಬೆಲೆ ಪೊಲೀಸ್‌ ಠಾಣೆ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಬೇಲ್‌ಗಾಗಿ ಮತ್ತೆ ಹೈಕೋರ್ಟ್‌ಗೆ ಬೈರತಿ
ಕರ್ತವ್ಯ ಲೋಪ, ಭ್ರಷ್ಟಾಚಾರದ ಆರೋಪ; ವಿಚಾರಣೆಗೆ ಅಧಿಕಾರಿಗಳ ನೇಮಕ