ಮದ್ದೂರು : ದ್ವೇಷದ ಹಿನ್ನೆಲೆಯಲ್ಲಿ ಗಾಂಜಾ ನಿಶೆಯಲ್ಲಿದ್ದ 7 ಮಂದಿ ಯುವಕರ ಗುಂಪು ವ್ಯಕ್ತಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಚಾಮನಹಳ್ಳಿಯಲ್ಲಿ ಜರುಗಿದೆ.
ಗ್ರಾಮದ ಕೂಲಿ ಕಾರ್ಮಿಕ ಸಿದ್ದರಾಜು (57) ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿಡವರು. ಮದ್ದೂರು ಆಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ಚಾಮನಹಳ್ಳಿಯ ಅಪೂರ್ವ ಅಲಿಯಾಸ್ ಅಪ್ಪಾಡಿ, ರಘು ಅಲಿಯಾಸ್ ಗೂಳಿ, ಅನಿಲ್, ಮುನ್ನಾ, ಮದ್ದೂರು ಪಟ್ಟಣದ ಹೊಳೇ ಬೀದಿಯ ನಂದನ್, ವಿಶ್ವಾಸ್, ದೇಶ ಹಳ್ಳಿಯ ನಂದನ್ ಎಂಬುವವರುಗಳ ವಿರುದ್ಧ ಹಲ್ಲೆಗೊಳಗಾಗಿರುವ ಸಿದ್ದರಾಜು ಪುತ್ರ ಸತೀಶ್ ನೀಡಿರುವ ದೂರಿನ ಆಧಾರದ ಮೇಲೆ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕಳೆದ ಶನಿವಾರ ಸಿದ್ದರಾಜು ಹಾಗೂ ಕೆಲ ಯುವಕರ ನಡುವೆ ಸಣ್ಣ ಪ್ರಮಾಣದಲ್ಲಿ ಗಲಾಟೆಯಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ 5.30ರ ಸಮಯದಲ್ಲಿ ಬೈಕ್‌ಗಳಲ್ಲಿ ಬಂದ ಗಾಂಜಾ ನಿಷೆಯಲ್ಲಿದ್ದ ಏಳು ಮಂದಿ ಯುವಕರ ಗುಂಪು ಹಳೇದ್ವೇಷದ ಹಿನ್ನೆಲೆಯಲ್ಲಿ ತಮ್ಮ ತಂದೆ ಸಿದ್ದರಾಜು ಅವರ ಮೇಲೆ ಲಾಂಗ್, ಮಚ್ಚು ಹಾಗೂ ಚಾಕುಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೌಟುಂಬಿಕ ಕಲಹದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ
ಶ್ರೀರಂಗಪಟ್ಟಣ: ಕೌಟುಂಬಿಕ ಕಲಹದಿಂದ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕುಮಾರ್ ಪತ್ನಿ ಲಕ್ಷ್ಮಿ (23) ಆತ್ಮಹತ್ಯೆ ಮಾಡಿಕೊಂಡವರು. ಕಳೆದ 3 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿ ಗಂಡನ ಮನೆಯಲ್ಲಿ ವಾಸವಿದ್ದಳು. ಕುಮಾರ್ ಮತ್ತು ಲಕ್ಷ್ಮಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ.
ಕೌಟುಂಬಿಕ ಕಲಹದಿಂದ ನಮ್ಮ ಮಗಳು ಲಕ್ಷ್ಮಿ ಹಾಗೂ ಪತಿ ಕುಮಾರ್ ನಡುವೆ ಮೇಲಿಂದ ಮೇಲೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ತನ್ನ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತಳ ಪೋಷಕರು ಕೆಆರ್‌ಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತಳ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಪೋಷಕರಿಗೆ ನೀಡಲಾಗಿದೆ.