;Resize=(412,232))
ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಪ್ರಚಾರವೇ ಎಲ್ಲಾ ಎಂಬ ಭ್ರಮೆ ಇದೆ. ಆದರೆ ಶಾಶ್ವತವಾಗಿ ಉಳಿಯುವುದು ವ್ಯಕ್ತಿತ್ವ ಮಾತ್ರ. ಅದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟವರು ಡಾ.ರಾಜ್‌ಕುಮಾರ್. ಅವರ 97ನೇ ಹುಟ್ಟುಹಬ್ಬ ಇಂದು. (ಏಪ್ರಿಲ್ 24) ಈ ಸಂದರ್ಭದಲ್ಲಿ ಅವರ ವ್ಯಕ್ತಿತ್ವ, ಸಿನಿಮಾಗಳಿಂದ ಈ ಪೀಳಿಗೆಯ ಚಿತ್ರರಂಗ ಏನೇನು ಕಲಿಯಬಹುದು ಎಂಬುದನ್ನು ನೋಡೋಣ. ಈ ಗುಣಗಳಲ್ಲಿ ಕೆಲವು ಅಂಶಗಳನ್ನು ರೂಢಿಸಿಕೊಂಡರೂ ಸಾಕು, ಉನ್ನತಿಯ ಹಾದಿಯಲ್ಲಿ ನಡೆಯಬಹುದು. ಯಾಕೆಂದರೆ ಅಣ್ಣಾವ್ರು ಕೇವಲ ಒಬ್ಬ ನಟನಷ್ಟೇ ಅಲ್ಲ, ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ಕಲಿಸಿದ ಮಹಾಗುರು.
ಯಾರಿಗೂ ನೋವು ಕೊಡುವಂತಹ ಕತೆಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿರಲಿಲ್ಲ. ತಮ್ಮ ಚಿತ್ರಗಳು ಸಮಾಜಕ್ಕೆ ತಪ್ಪು ಸಂದೇಶ ನೀಡಬಾರದು ಎಂಬ ಬಗ್ಗೆ ಅತೀವ ಎಚ್ಚರ ವಹಿಸುತ್ತಿದ್ದರು. ಧೂಮಪಾನ ಅಥವಾ ಮದ್ಯಪಾನದ ದೃಶ್ಯಗಳಲ್ಲಿ ನಟಿಸದಿರಲು ನಿರ್ಧರಿಸಿದ್ದರು. ಕೌಟುಂಬಿಕ ಮೌಲ್ಯಗಳನ್ನು ಎತ್ತಿಹಿಡಿದರು. ಈಗಿನ ಸ್ಟಾರ್‌ಗಳಲ್ಲಿ, ಸಿನಿಮಾಗಳಲ್ಲಿ ಅಂಥಾ ಮೌಲ್ಯ ಕಾಣುವುದೇ ಅಪರೂಪ.
ನಿರ್ದೇಶಕರಿಗೆ, ಬರಹಗಾರರಿಗೆ ಅಗಾಧ ಗೌರವ ನೀಡುತ್ತಿದ್ದರು. ಸರಸ್ವತಿ ಪುತ್ರರು ಎಂದೇ ಕರೆಯುತ್ತಿದ್ದರು. ಸಲಹೆ ಸೂಚನೆ ನೀಡಿರಬಹುದು. ಆದರೆ ಯಾವತ್ತೂ ನಿರ್ದೇಶಕರಿಗಿಂತ ತಾವೇ ಮೇಲು ಎಂದು ಹೇಳಿಕೊಳ್ಳಲಿಲ್ಲ. ಆಥರ ನಡೆಯಲಿಲ್ಲ. ಆದರೆ ಈಗಿನ ಕೆಲವು ಸ್ಟಾರ್‌ಗಳಲ್ಲಿ ಈ ಗುಣ ಕಾಣುವುದಿಲ್ಲ. ನಿರ್ದೇಶಕರು ಕಾಲಿಗೆ ಬಿದ್ದರೂ ಹೆಮ್ಮೆಯಿಂದ ನಿಂತಿರುತ್ತಾರೆ.
3. ನಿರ್ಮಾಪಕರ ಹಿತರಕ್ಷಣೆ
ಚಿತ್ರರಂಗ ನಿಂತಿರುವುದೇ ನಿರ್ಮಾಪಕರ ಮೇಲೆ ಎಂಬ ಸತ್ಯ ಅಣ್ಣಾವ್ರಿಗೆ ತಿಳಿದಿತ್ತು. ಮಿತಿಮೀರಿದ ಸಂಭಾವನೆ ಬೇಡದೆ, ಚಿತ್ರದ ಬಜೆಟ್ ಮೀರದಂತೆ ಸಹಕರಿಸುತ್ತಿದ್ದ ಅವರು, ನಿರ್ಮಾಪಕರಿಗೆ ಎಂದೂ ಹೊರೆಯಾಗಲಿಲ್ಲ. ಇಂದಿನ ಕಾಲದಲ್ಲಿ ಕಲಾವಿದರ ಸಂಭಾವನೆಯೇ ಚಿತ್ರದ ಅರ್ಧ ಬಜೆಟ್ ನುಂಗುತ್ತಿರುವಾಗ, ಅಣ್ಣಾವ್ರ ಈ ಕಾಳಜಿ ಅತ್ಯಂತ ಪ್ರಸ್ತುತ.
4. ವೃತ್ತಿಪರ ಶಿಸ್ತು ಮತ್ತು ಸಮಯಪಾಲನೆ
ಅಣ್ಣಾವ್ರು ಮುಂಜಾನೆ ನಾಲ್ಕು ಗಂಟೆಗೆ ಎದ್ದು ಯೋಗಾಭ್ಯಾಸ ಮುಗಿಸಿ, ಚಿತ್ರೀಕರಣದ ಸಮಯಕ್ಕಿಂತ ಮೊದಲೇ ಸೆಟ್‌ನಲ್ಲಿರುತ್ತಿದ್ದರು. ಅವರ ಈ ಶಿಸ್ತು ಕೇವಲ ಒಬ್ಬ ನಟನದ್ದಾಗಿರದೆ, ಇಡೀ ತಂಡಕ್ಕೆ ಮಾದರಿಯಾಗುತ್ತಿತ್ತು. ಕೆಲಸದ ಬಗ್ಗೆ ಅವರಿಗಿದ್ದ ಈ ಅಪಾರ ಗೌರವವನ್ನೇ ಇಂದಿನ ಕಲಾವಿದರು ಮೊದಲು ಕಲಿಯಬೇಕಿದೆ. ಆಗ ಸಿನಿಮಾಗಳು ಬೇಗಬೇಗನೇ ಮುಗಿಯುತ್ತವೆ.
5. ಅಹಂಕಾರವಿಲ್ಲದ ನಡತೆ ಮತ್ತು ವಿನಯ
ಒಬ್ಬ ನಟನ ಯಶಸ್ಸು ಹೆಚ್ಚಾದಂತೆ ಅಹಂಕಾರವೂ ಬೆಳೆಯುವುದು ಸಹಜ. ಆದರೆ, ದಶಕಗಳ ಕಾಲ ಚಿತ್ರರಂಗದ ಸಾಮ್ರಾಟನಾಗಿದ್ದರೂ ಅಣ್ಣಾವ್ರು ತೋರಿದ ವಿನಯ ಅಪ್ರತಿಮ. ‘ಅಭಿಮಾನಿಗಳೇ ದೇವರು’ ಎಂಬ ಮಾತು ಅವರಿಗೆ ಕೇವಲ ಘೋಷಣೆಯಾಗಿರಲಿಲ್ಲ, ಅದು ಅವರ ಜೀವನದ ಮಂತ್ರವಾಗಿತ್ತು. ಎಷ್ಟೇ ದೊಡ್ಡ ಎತ್ತರಕ್ಕೆ ಬೆಳೆದರೂ ನೆಲದ ಮೇಲಿರುವ ಅವರ ಗುಣ ಇಂದಿನ ‘ಇನ್ಸ್ಟಂಟ್ ಸ್ಟಾರ್’ಗಳಿಗೆ ದೊಡ್ಡ ಪಾಠ.
6. ಪಾತ್ರಕ್ಕೆ ನ್ಯಾಯ
ಅಣ್ಣಾವ್ರು ಕೇವಲ ತಮ್ಮ ‘ಇಮೇಜ್’ಗೆ ಸೀಮಿತರಾಗಲಿಲ್ಲ. ‘ಜೀವನ ಚೈತ್ರ’ದಲ್ಲಿ ಮುಪ್ಪಿನ ತಂದೆಯಾಗಿ, ‘ಕಸ್ತೂರಿ ನಿವಾಸ’ದಲ್ಲಿ ತ್ಯಾಗದ ಪ್ರತೀಕವಾಗಿ ನಟಿಸಿದರು. ಇಂದಿನ ನಟರು ಕೇವಲ ಹೀರೋಗಿರಿ ಅಥವಾ ಮಾಸ್ ಪಾತ್ರಗಳ ಹಿಂದೆ ಬೀಳದೆ, ಕಥೆಯ ಬೇಡಿಕೆಗೆ ಅನುಗುಣವಾಗಿ ತಮ್ಮನ್ನು ತಾವು ಒಡ್ಡಿಕೊಳ್ಳುವ ಧೈರ್ಯ ತೋರಬೇಕಿದೆ.
7. ನಿಜವಾದ ಅಭಿಮಾನಿ ಬಾಂಧವ್ಯ
ಅಣ್ಣಾವ್ರು ಅಭಿಮಾನಿಗಳನ್ನು ಕೇವಲ ‘ಫಾಲೋವರ್ಸ್ ಬ್ಯಾಂಕ್’ ಅಥವಾ ‘ಬಾಕ್ಸ್ ಆಫೀಸ್’ ಸಂಖ್ಯೆಗಳಾಗಿ ನೋಡಲಿಲ್ಲ. ಅವರ ಭೇಟಿಗೆ ಬಂದ ಪ್ರತಿಯೊಬ್ಬರಿಗೂ ಗೌರವ ನೀಡಿ, ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇಂದಿನ ಸೋಷಿಯಲ್ ಮೀಡಿಯಾ ಕಾಲದಲ್ಲಿ ಸೋಷಿಯಲ್ ಮೀಡಿಯಾದ ಕೃತಕವಾಗಿ ಅಭಿಮಾನ ಸಂಪಾದಿಸುವ ಬದಲು, ಅಣ್ಣಾವ್ರಂತೆ ಹೃದಯದಿಂದ ಜನರನ್ನ ತಲುಪುವುದು ಮುಖ್ಯ.
8. ಇತರ ಕಲೆಗಳ ಮೇಲೆ ಆಸಕ್ತಿ
ಒಬ್ಬ ಪರಿಪೂರ್ಣ ನಟನಾಗಲು ಕೇವಲ ನಟನೆ ಮಾತ್ರವೇ ಸಾಕಾಗುವುದಿಲ್ಲ. ಅಣ್ಣಾವ್ರು ಸಂಗೀತವನ್ನು ಕಲಿತು ಸ್ವತಃ ಹಾಡಿದರು. ಸಾಹಿತ್ಯದ ಬಗ್ಗೆ ಅವರಿಗೆ ಅಪಾರ ಗೌರವವಿತ್ತು. ಇಂದಿನ ಕಲಾವಿದರು ತಾಂತ್ರಿಕತೆಯ ಜೊತೆಗೆ ಸಾಹಿತ್ಯ ಮತ್ತು ಕಲೆಯ ಇತರ ಮಜಲುಗಳನ್ನು ಅರಿಯಬೇಕಿದೆ. ಆಗ ಮಾತ್ರವೇ ಒಳ್ಳೆಯ ವ್ಯಕ್ತಿತ್ವವಾಗಿ ರೂಪುಗೊಳ್ಳಲು ಸಾಧ್ಯ.
9. ಭಾವುಕತೆಗೆ ಒತ್ತು
ಅವರ ಯಾವುದೇ ಸಿನಿಮಾಗಳನ್ನು ನೋಡಿದರೂ ಕತೆ ಪ್ರಧಾನ, ಭಾವುಕತೆ ಪ್ರಧಾನವಾಗಿರುತ್ತಿತ್ತು. ಒಳ್ಳೆಯ ಕತೆ ನೋಡಿದ ಸಮಾಧಾನ ಇರುತ್ತಿತ್ತು. ಅದರಿಂದಾಗಿಯೇ ಅವರ ಎಷ್ಟೋ ಸಿನಿಮಾಗಳು, ಪಾತ್ರಗಳು ಇವತ್ತಿಗೂ ಜೀವಂತವಾಗಿ ಉಳಿದಿವೆ. ಆದರೆ ಈಗ ಭಾವುಕತೆ ಮರೆಯಾಗಿವೆ. ಅದರಿಂದಲೇ ಕತೆಗಳು ಸಪ್ಪೆಯಾಗಿ ಮರೆಗೆ ಸರಿಯುತ್ತಿವೆ.
10. ಸಹಕಲಾವಿದರಿಗೆ, ತಂತ್ರಜ್ಞರಿಗೆ ಗೌರವ
ಸೆಟ್‌ನಲ್ಲಿ ಸಣ್ಣ ಕೆಲಸಗಾರನಿಂದ ಹಿಡಿದು ಹಿರಿಯ ಕಲಾವಿದರವರೆಗೆ ಎಲ್ಲರಿಗೂ ಗೌರವ ನೀಡುವುದು ಅವರ ಸ್ವಭಾವವಾಗಿತ್ತು. ಸ್ಟಾರ್‌ಡಮ್ ಎಂಬ ಗಡಿಯನ್ನು ಮೀರಿ ಸಹೋದ್ಯೋಗಿಗಳೊಂದಿಗೆ ಬೆರೆಯುವ ಅವರ ರೀತಿ, ಚಿತ್ರೀಕರಣದ ಸ್ಥಳದಲ್ಲಿ ಒಂದು ಸುಂದರ ವಾತಾವರಣ ನಿರ್ಮಿಸುತ್ತಿತ್ತು. ಈ ಕ್ಯಾರವಾನ್ ಕಾಲದಲ್ಲಿ ಜೊತೆಗೆ ಕುಳಿತು ಊಟ ಮಾಡುತ್ತಿದ್ದ ಅಣ್ಣಾವ್ರ ಗುಣ, ವ್ಯಕ್ತಿತ್ವ ನೆನೆಯದೇ ಇರುವುದಾದರೂ ಹೇಗೆ!