‘ಪೆಪೆ ಸಿನಿಮಾ ಟ್ರೇಲರ್ ನೋಡಿ, ಆಹ್ ಏನ್ ಚೆನ್ನಾಗಿದೆ ಅನಿಸಿತ್ತಲ್ವಾ.. ಇದೇ ಸಿನಿಮಾ ಗೆಲುವಿನ ಲಕ್ಷಣ. ಈ ಸಿನಿಮಾವನ್ನು ಕರ್ನಾಟಕದ ಜನತೆ ಅದ್ಭುತವಾಗಿ ಸ್ವಾಗತಿಸುವ ನಿರೀಕ್ಷೆ ಇದೆ. ಇಲ್ಲಿ ನಮ್ಮ ಸಿನಿಮಾ ಗೆಲ್ಲಿಸಿ ಅಂತ ಕೇಳೋದೇ ದೊಡ್ಡ ತಪ್ಪು. ನಮ್ಮ ಭಾಷೆಯನ್ನು ನಂಬಿ, ಜನರನ್ನು ನಂಬಿ ಕೆಲಸ ಮಾಡಿ. ಸಿನಿಮಾ ನೋಡಲ್ಲ ಅನ್ನೋರನ್ನು ಬಿಟ್ಟುಬಿಡಿ, ನೋಡ್ತೀವಿ ಅನ್ನುವವರಿಗಾಗಿ ಸಿನಿಮಾ ಮಾಡಿ’.
- ಕಿಚ್ಚ ಸುದೀಪ್ ಕಂಚಿನ ಕಂಠದಲ್ಲಿ ಹೇಳುತ್ತಿದ್ದರೆ ಜನ ಮರುಳಾಗಿ ಕೇಳುತ್ತಿದ್ದರು. ಆಗತಾನೇ ವಿನಯ್ ರಾಜ್‌ಕುಮಾರ್ ನಟನೆಯ ‘ಪೆಪೆ’ ಟ್ರೇಲರ್ ನೋಡಿ ಜನ ದಂಗಾಗಿದ್ದರು. ಆ ಕ್ಷಣದಲ್ಲಿ ಮಾತನಾಡಿದ ಸುದೀಪ್, ‘ಸಣ್ಣ ಕುಡಿಯಂತಿದ್ದ ಕನ್ನಡ ಸಿನಿಮಾರಂಗ ಈಗ ಬೃಹತ್ ಆಲದ ಮರವಾಗಿ ಬೆಳೆದು ದೃಢವಾಗಿ ನಿಂತಿದೆ. ಚಿತ್ರಗಳ ಸೋಲು, ಗೆಲುವು, ಹೊಯ್ದಾಟಗಳೆಲ್ಲ ಈ ದೃಢತೆಯನ್ನು ಅಲುಗಾಡಿಸಲಾಗದು’ ಎಂದರು.‘ಪೆಪೆ’ ಸಿನಿಮಾದ ಟ್ರೇಲರ್ ಸೂಪರ್‌ಹಿಟ್ ಆಗಿದೆ. ಈಗಾಗಲೇ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ವಿನಯ್ ರಾಜ್‌ಕುಮಾರ್ ಅವರ ಹೊಸ ಅವತಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಶ್ರೀಲೇಶ್ ಎಸ್ ನಾಯರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್ ಅಭಿನಯಿಸಿದ್ದಾರೆ. ಉದಯ್ ಶಂಕರ್ ಎಸ್, ಬಿ ಎಮ್ ಶ್ರೀರಾಮ್ ನಿರ್ಮಾಣದ ಈ ಸಿನಿಮಾ ಆ.30ಕ್ಕೆ ಬಿಡುಗಡೆ ಆಗುತ್ತಿದೆ.