ಪ್ಯಾನ್‌ ಇಂಡಿಯಾ ಸಿನಿಮಾ ಮಹಾಕಾಳಿ ನಾಯಕಿ ಭೂಮಿ ಶೆಟ್ಟಿ

| N/A | Published : Oct 31 2025, 01:10 PM IST

Bhoomi Shetty
ಪ್ಯಾನ್‌ ಇಂಡಿಯಾ ಸಿನಿಮಾ ಮಹಾಕಾಳಿ ನಾಯಕಿ ಭೂಮಿ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ಪ್ರಧಾನ ಪ್ಯಾನ್‌ ಇಂಡಿಯಾ ಸಿನಿಮಾದ ನಾಯಕಿಯಾಗಿ ಕನ್ನಡತಿಯೊಬ್ಬರು ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಹೆಸರು ‘ಮಹಾಕಾಳಿ’. ಮಹಾಕಾಳಿ ಪಾತ್ರದಲ್ಲಿ ನಟಿಸುತ್ತಿರುವುದು ಭೂಮಿ ಶೆಟ್ಟಿ. ಪ್ರಶಾಂತ್‌ ವರ್ಮಾ ಬರೆದಿರುವ ಕತೆ ಇರುವ ಸಿನಿಮಾ ಇದು

 ಮಹಿಳಾ ಪ್ರಧಾನ ಪ್ಯಾನ್‌ ಇಂಡಿಯಾ ಸಿನಿಮಾದ ನಾಯಕಿಯಾಗಿ ಕನ್ನಡತಿಯೊಬ್ಬರು ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಹೆಸರು ‘ಮಹಾಕಾಳಿ’. ಮಹಾಕಾಳಿ ಪಾತ್ರದಲ್ಲಿ ನಟಿಸುತ್ತಿರುವುದು ಭೂಮಿ ಶೆಟ್ಟಿ.

ಈ ಹಿಂದೆ ‘ಹನುಮಾನ್‌’ ಚಿತ್ರ ನಿರ್ದೇಶಿಸಿ ತೆಲುಗಿನ ಯುವ ನಟ ತೇಜ ಸಜ್ಜಾಗೆ ಪ್ಯಾನ್‌ ಇಂಡಿಯಾ ಇಮೇಜ್‌ ಕೊಟ್ಟ, ಇದೀಗ ರಿಷಬ್‌ ಶೆಟ್ಟಿ ನಟನೆಯ ‘ಜೈ ಹನುಮಾನ್‌’ ಸಿನಿಮಾ ನಿರ್ದೇಶಿಸುತ್ತಿರುವ ಪ್ರಶಾಂತ್‌ ವರ್ಮಾ ಬರೆದಿರುವ ಕತೆ ಇರುವ ಸಿನಿಮಾ ಇದು. ಪೂಜಾ ಅಪರ್ಣಾ ಕೊಲ್ಲೂರು ನಿರ್ದೇಶನದ, ರಿಜ್ವಾನ್‌ ರಮೇಶ್‌ ದುಗ್ಗಲ್‌ ನಿರ್ಮಾಣದ ಈ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಈ ಸಿನಿಮಾ ಭಾರತೀಯ ಭಾಷೆಗಳಲ್ಲದೆ, ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.

ಈ ಕುರಿತು ಭೂಮಿ ಶೆಟ್ಟಿಯವರ ಮಾತುಗಳು ಇಲ್ಲಿವೆ-

- ಒಂದು ವರ್ಷದ ಹಿಂದೆಯೇ ಈ ಪ್ರಾಜೆಕ್ಟ್‌ ಆರಂಭಗೊಂಡಿದೆ. ಈ ಸೀಕ್ರೆಟ್‌ ಅನ್ನು ಇಲ್ಲಿಯವರೆಗೆ ನಾನು ತಡೆದುಕೊಂಡಿದ್ದೇ ದೊಡ್ಡ ವಿಷಯ. ಇದೀಗ ಫಸ್ಟ್‌ ಲುಕ್‌ಗೆ ದೊರೆತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗಿದೆ. ಈ ಪಾತ್ರಕ್ಕಾಗಿ ನಾನು ಆಡಿಷನ್‌ ಕೊಟ್ಟಿದ್ದೆ. ಆಯ್ಕೆಯಾದಾಗ ಖುಷಿಯಾಗಿತ್ತು. ಈಗಾಗಲೇ ಸುಮಾರು ಶೇ.50ರಷ್ಟು ಚಿತ್ರೀಕರಣ ಮುಗಿದಿದೆ.

- ಈ ಚಿತ್ರದ ಕುರಿತು ಏನೂ ಹೇಳಬಾರದು ಎಂದು ಚಿತ್ರತಂಡ ತಿಳಿಸಿದೆ. ಇದೊಂದು ಬಹಳ ದೊಡ್ಡ ಸಿನಿಮಾ ಆಗಿರುವುದರಿಂದ ನನಗೂ ಹೆಚ್ಚಿಗೆ ಹೇಳಲು ಆಗುತ್ತಿಲ್ಲ. ಆದರೆ ಈ ಕುರಿತು ಹೇಳಲು ನನಗೆ ತುಂಬಾ ಇದೆ.

- ಕೆಲವು ಪಾತ್ರಗಳು ನಮಗೆ ಸಿಕ್ಕಿದೆ ಅನ್ನುವುದಕ್ಕಿಂತ ಆ ಪಾತ್ರವೇ ನಮ್ಮನ್ನು ಅರಸಿಕೊಂಡು ಬಂದಿದೆ ಅಂತ ಹೇಳುವುದೇ ಸೂಕ್ತ. ಇದು ಅಂಥದ್ದೊಂದು ಪಾತ್ರ. ನಮ್ಮ ಮನಸ್ಸಲ್ಲಿ ಇರುವ ಮಹಾಕಾಳಿಯ ಪಾತ್ರ. ಈ ಪಾತ್ರ ನನ್ನ ನಟನಾ ಬದುಕನ್ನೇ ಬದಲಿಸುತ್ತದೆ ಎಂಬ ನಂಬಿಕೆ ನನಗಿದೆ.

ಎಲ್ಲವನ್ನೂ ಬದಲಿಸಬಲ್ಲ ಒಂದು ಪಾತ್ರಕ್ಕಾಗಿ ನಾನು ಕಾಯುತ್ತಿದ್ದೆ

- ಎಲ್ಲವನ್ನೂ ಬದಲಿಸಬಲ್ಲ ಒಂದು ಪಾತ್ರಕ್ಕಾಗಿ ನಾನು ಕಾಯುತ್ತಿದ್ದೆ. ನನ್ನ ನಟನೆ ತೋರಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಆ ಕ್ಷಣ ಈಗ ಬಂದಿದೆ ಅನ್ನಿಸುತ್ತದೆ. ಅದಕ್ಕಾಗಿ ಸಂತೋಷ ಇದೆ.

- ನಟನೆಯನ್ನು ಬಹಳ ಇಷ್ಟ ಪಡುತ್ತೇನೆ. ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಂಥದ್ದೊಂದು ಪ್ರಯತ್ನಕ್ಕೆ ಸಿಕ್ಕ ಗೆಲುವು ಈ ಸಿನಿಮಾ. ಈ ಅವಕಾಶ ಜೀವನದಲ್ಲಿ ನನಗೆ ಸಿಕ್ಕ ಬಹುದೊಡ್ಡ ಅವಕಾಶ. ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಭಾವಿಸುತ್ತೇನೆ.

Read more Articles on