ಪ್ರಿಯಾ ಕೆರ್ವಾಶೆ
- ಊರು?
ದ.ಕ ಜಿಲ್ಲೆಯ ಸುಳ್ಯ. ಓದಿದ್ದು ಕುಶಾಲನಗರ. ಅಗ್ರಿಕಲ್ಚರಲ್ ಸೈನ್ಸ್‌ನಲ್ಲಿ ಪದವಿ ಮಾಡಿ, ನನ್ನಿಷ್ಟದ ನಟನೆಯಲ್ಲಿ ತೊಡಗಿಸಿಕೊಂಡೆ.
- ನಟನೆಯ ವ್ಯಾಮೋಹದ ಬಗ್ಗೆ?
ರಂಗಭೂಮಿ ಅಥವಾ ಆಕ್ಟಿಂಗ್ ಕೋರ್ಸ್ ಮಾಡಿದವನಲ್ಲ. ಆದರೆ ಆ್ಯಕಿಂಗ್ ಬಗ್ಗೆ ಅದಮ್ಯ ಪ್ರೀತಿ. ಈ ಪ್ರೀತಿಯಲ್ಲೇ ಸ್ವಂತ ಕಲಿಕೆಯಲ್ಲಿ ತೊಡಗಿಸಿಕೊಂಡೆ. ಆರಂಭದಲ್ಲಿ ಒಂದಿಷ್ಟು ಶಾರ್ಟ್ ಫಿಲಂಗಳನ್ನು ಮಾಡಿದೆ. ನನಗೆ ಸಿದ್ಧಸೂತ್ರಗಳನ್ನು ಫಾಲೋ ಮಾಡೋದಕ್ಕಿಂತ, ಅವುಗಳನ್ನು ಮುರಿದು ಹೊಸ ಸೂತ್ರ ರೂಪಿಸುವುದರಲ್ಲಿ ಖುಷಿ.
- ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು?
ಧನಂಜಯ ನಟನೆಯ ಗುರುದೇವ್ ಹೊಯ್ಸಳ ಸಿನಿಮಾ ಮೂಲಕ. ಅದರಲ್ಲಿ ಯುವ ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದೆ. ರಾಜ್ ಬಿ ಶೆಟ್ಟಿ ಅವರ ‘ಸ್ವಾತಿ ಮುತ್ತಿನ ಮಳೆ ಹನಿಯೇ’ಯಲ್ಲಿ ಚಿಕ್ಕ ಪಾತ್ರ ಮಾಡಿದ್ದೆ. ಇತ್ತೀಚೆಗೆ ರಿಲೀಸ್ ಆದ ಸುದೀಪ್ ಅವರ ‘ಮ್ಯಾಕ್ಸ್’ ನಲ್ಲೂ ಒಂದು ಪಾತ್ರ ಮಾಡಿದ್ದೇನೆ. ‘ರಕ್ಕಸಪುರದೋಳ್’ ನನ್ನ ನಾಲ್ಕನೆಯ ಚಿತ್ರ.
- ರಕ್ಕಸಪುರದೋಳ್ ಸೈಕೋ ವಿಲನ್ ನಿಮ್ಮೊಳಗೆ ರೂಪುಗೊಂಡ ಬಗೆ?
ಇದಕ್ಕೂ ಮೊದಲು ಸೈಕೋ ಸಬ್ಜೆಕ್ಟ್ ಇಟ್ಟುಕೊಂಡು ಶಾರ್ಟ್ ಸಿನಿಮಾ ಮಾಡಲು ಹೊರಟಿದ್ದೆ. ಅದರಲ್ಲಿ ಕಲಿತದ್ದು ಈ ಪಾತ್ರ ನಿರ್ವಹಿಸಲು ಸಹಕಾರಿಯಾಯ್ತು. ಇದರಲ್ಲಿ ನಾನು ನಿರ್ವಹಿಸಿದ ಅಣ್ಣ- ತಮ್ಮ ಪಾತ್ರದಲ್ಲಿ ಅಣ್ಣನ ಪಾತ್ರ ಇಡೀ ಸಿನಿಮಾದಲ್ಲಿ ಕಣ್ಣು ಬ್ಲಿಂಕ್ ಮಾಡಲ್ಲ. ತಮ್ಮನ ಪಾತ್ರಕ್ಕೂ ಕಂಪ್ಲೀಟ್ ಭಿನ್ನ ಬಗೆಯ ಮ್ಯಾನರಿಸಂ ಇದೆ. ಒಬ್ಬನೇ ಎರಡೂ ಪಾತ್ರ ಮಾಡಿದರೂ ಎರಡೂ ಕಂಪ್ಲೀಟ್ ಬೇರೆಯೇ ಬಗೆಯ ಪಾತ್ರಗಳು. ಇದಕ್ಕಾಗಿ ಸಣ್ಣ ಸಣ್ಣ ಸೂಕ್ಷ್ಮಗಳನ್ನಿಟ್ಟು ಕೆಲಸ ಮಾಡಿದೆ. ನಿರ್ದೇಶಕರು ನೀಡಿದ ಮಾರ್ಗದರ್ಶನ ಮತ್ತು ಸ್ವಾತಂತ್ರ್ಯ, ರಾಜ್ ಬಿ ಶೆಟ್ಟಿ ಅವರು ಕೊಡುತ್ತಿದ್ದ ಟಿಪ್ಸ್ ಕೂಡ ಪಾತ್ರ ಪೋಷಣೆಗೆ ನೆರವಾಯ್ತು.
- ಸದ್ಯ ಹರಿದುಬರುತ್ತಿರುವ ಭರಪೂರ ಮೆಚ್ಚುಗೆಯ ನಿರೀಕ್ಷೆ ಇತ್ತಾ?
ಸಣ್ಣ ಮಟ್ಟಿನ ನಿರೀಕ್ಷೆ ಇತ್ತಾದರೂ ಈ ಲೆವೆಲ್‌ಗೆ ಜನ ಪಾತ್ರವನ್ನು ಗುರುತಿಸುತ್ತಾರೆ ಅಂದುಕೊಂಡಿರಲಿಲ್ಲ. ಆಗಷ್ಟೇ ಮಾತು ಕಲಿತ ಪುಟ್ಟ ಮಗುವೊಂದು ಸಿನಿಮಾ ನೋಡಲು ಬಂದಿತ್ತು. ಅದರ ಅಮ್ಮ, ಈ ಸಿನಿಮಾದಲ್ಲಿ ನಿಂಗೆ ಯಾರಿಷ್ಟ ಆದ್ರು ಅಂದಾಗ ಆ ಮಗು ವಿಲನ್ ಅಂತ ಕೂಗಿತು. ನನಗೆ ಮನಸ್ಸು ತುಂಬಿ ಬಂತು. ವಿಲನ್ ಪಾತ್ರವನ್ನು ಯುವಕರು ಎನ್‌ಜಾಯ್ ಮಾಡ್ತಾರೆ, ಆದರೆ ಫ್ಯಾಮಿಲಿ ಆಡಿಯನ್ಸ್, ವಯಸ್ಸಾದವರು ಅಷ್ಟಾಗಿ ಹತ್ತಿರ ಸೇರಿಸೋದಿಲ್ಲ. ಆದರೆ ಇಲ್ಲಿ ಎಲ್ಲರೂ ಪಾತ್ರವನ್ನು ಮೆಚ್ಚಿಕೊಂಡಿದ್ದು ವಿಶೇಷ.
- ರಾಜ್ ಬಿ ಶೆಟ್ಟಿ ಬೆಂಬಲ?
ಬಹುಶಃ ನಾಯಕನ ಪಾತ್ರದಲ್ಲಿ ಅವರಲ್ಲದೇ ಮತ್ಯಾರಿದ್ದರೂ ನನಗೆ ಆ ಮಟ್ಟಿನ ಎಕ್ಸ್‌ಪೋಜರ್ ಸಿಗುತ್ತಿರಲಿಲ್ಲ. ಸದಾ ಉತ್ತೇಜನ ನೀಡುತ್ತ ಹೊಸಬರನ್ನು ಬೆಳೆಸುವ ಅವರ ಪ್ರವೃತ್ತಿ ನಮ್ಮಂಥವರಿಗೆ ಸ್ಫೂರ್ತಿ. ಮುಂದೆ ಅವರ ಲೆವೆಲ್‌ಗೆ ಬೆಳೆದಾಗ ನಾವೂ ಹೇಗೆ ಹೊಸಬರನ್ನು ಬೆಳೆಸಬಹುದು ಎಂಬುದು ತಿಳಿಯಿತು.
- ಮುಂದಿನ ಹೆಜ್ಜೆ?
ಐ ವಾಂಟ್ ಬಿ ದ ಗ್ರೇಟೆಸ್ಟ್ ಆಕ್ಟರ್. ಇದು ದುರಹಂಕಾರದ ಮಾತಲ್ಲ. ನನ್ನ ಕನಸು. ನನ್ನ ಸಾಮರ್ಥ್ಯವನ್ನೆಲ್ಲ ಬೆಳೆಸಿ ದೊಡ್ಡ ನಟನಾಗಿ ಬೆಳೆಯಬೇಕು. ನಿಜಕ್ಕೂ ಕಥೆಯಲ್ಲಿ ತೂಕ ಇದ್ದರೆ ಮಾತ್ರ ನಟಿಸುತ್ತೇನೆ. ಇನ್ನು ಹತ್ತು ವರ್ಷ ಬಿಟ್ಟು ಅನಿರುದ್ಧ್ ಸಿನಿಮಾ ಅಂದರೆ ಚೆನ್ನಾಗಿರುತ್ತೆ ಅಂದುಕೊಂಡು ಪ್ರೇಕ್ಷಕ ಥೇಟರಿಗೆ ಬರಬೇಕು.
