ಭಾವನೆಗಳ ಪಯಣದಲ್ಲಿ ಕಾಡುವ ಪಾತ್ರಗಳು

Published : Sep 12, 2026, 01:53 PM IST
America America 2

ಸಾರಾಂಶ

ಪ್ರಮುಖ ದೃಶ್ಯವೊಂದರಲ್ಲಿ ಗಂಡ, ಹೆಂಡತಿ ಮತ್ತು ಆಕೆಯ ಮಾಜಿ ಪ್ರಿಯಕರ ಮೂವರು ಒಟ್ಟಿಗೆ ಕೂತಿದ್ದಾರೆ. ಗಂಡ ಆದವನಿಗೆ ಆ ಇನ್ನೊಬ್ಬ ತನ್ನ ಪತ್ನಿಯ ಹಳೆಯ ಪ್ರಿಯಕರ ಎಂಬುದು ಗೊತ್ತೇ? ಈಗ ಗಂಡನಿಗೆ ಪೋನ್‌ ಕಾಲ್‌ ಬರುತ್ತದೆ. .

ಚಿತ್ರ: ಅಮೆರಿಕಾ ಅಮೆರಿಕಾ 2

ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್‌

ತಾರಾಗಣ: ಪೃಥ್ವಿ ಅಂಬಾರ್‌, ನಿರೂಪ್‌ ಭಂಡಾರಿ, ಶಾನ್ವಿ ಶ್ರೀವಾಸ್ತವ, ಮಂಡ್ಯ ರಮೇಶ್‌, ಮಾಲತಿ ಸುಧೀರ್‌, ರೀತು ಸಿಂಗ್‌

ರೇಟಿಂಗ್‌: 3

ಆರ್‌. ಕೇಶವಮೂರ್ತಿ

ಪ್ರಮುಖ ದೃಶ್ಯವೊಂದರಲ್ಲಿ ಗಂಡ, ಹೆಂಡತಿ ಮತ್ತು ಆಕೆಯ ಮಾಜಿ ಪ್ರಿಯಕರ ಮೂವರು ಒಟ್ಟಿಗೆ ಕೂತಿದ್ದಾರೆ. ಗಂಡ ಆದವನಿಗೆ ಆ ಇನ್ನೊಬ್ಬ ತನ್ನ ಪತ್ನಿಯ ಹಳೆಯ ಪ್ರಿಯಕರ ಎಂಬುದು ಗೊತ್ತೇ? ಈಗ ಗಂಡನಿಗೆ ಪೋನ್‌ ಕಾಲ್‌ ಬರುತ್ತದೆ. ತನ್ನ ಪತ್ನಿ ಮತ್ತು ಆಕೆಯ ಮಾಜಿ ಪ್ರಿಯಕರನನ್ನು ಅಲ್ಲೇ ಬಿಟ್ಟು ಪೋನ್‌ ಎತ್ತಿಕೊಂಡು ಹೋಗುವ ಮುನ್ನ ಆತ ಇಬ್ಬರಿಗೂ ಏನು ಹೇಳಬಹುದು... ಎಂದು ಪ್ರೇಕ್ಷಕರು ಯೋಚನೆ ಮಾಡುತ್ತಿರುವಾಗಲೇ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಸಖತ್‌ ಕ್ರಿಯೇಟಿವ್‌ ಹಾಗೂ ವ್ಯಂಗ್ಯ ಭರಿತವಾದ ಸರ್ಪ್ರೈಸ್‌ ಟ್ವಿಸ್ಟ್‌ ಕೊಡುತ್ತಾರೆ. ಪ್ರೇಕ್ಷಕರು ಜೋರಾಗಿ ನಗುತ್ತಾರೆ. ಆ ನಗು ಮೂಡಿಸುವ ಮೌನದಲ್ಲಿ ಆಲೋಚನೆಗೂ ಮುಂದಾಗುತ್ತಾರೆ. ಯಾಕೆಂದರೆ ಇಂದಿನ ಯುವ ಮನಸ್ಸುಗಳು ಮಾತನಾಡಿಕೊಳ್ಳಬೇಕಾದ ವಿಷಯಗಳೇನು ಎಂಬುದನ್ನು ತಮಾಷೆಯಾಗಿಯೇ ಹೇಳಲಾಗಿದೆ.

ಹೀಗೆ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಅಲ್ಲಲ್ಲಿ ನಗಿಸುತ್ತಾ, ಯೋಚಿಸುತ್ತಾ, ಆಲೋಚನೆ ಮಾಡುವಂತೆ ಹೇಳುತ್ತಾ ಸಾಗುತ್ತದೆ. ಮೇಷ್ಟ್ರು ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು ಹೋಗುವಂತೆ ಪ್ರೇಕ್ಷಕರನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುವ ಗುಣವನ್ನು ಹೀಗೆ ನಾಗತಿಹಳ್ಳಿ ಚಂದ್ರಶೇಖರ್‌ ತಮ್ಮ ಚಿತ್ರಕ್ಕೆ ಧಾರೆ ಎರೆದಿದ್ದಾರೆ. ಇಷ್ಟಕ್ಕೂ ಆ ಸೀನ್‌ನಲ್ಲಿ ಗಂಡನ ಪಾತ್ರಧಾರಿ ಹೇಳಿದ್ದೇನು ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು.

ಹಳೆಯದರಿಂದಲೇ ಹೊಸದು ಹುಟ್ಟಿಕೊಳ್ಳುತ್ತವೆ ಎನ್ನುವ ಈ ಸಿನಿಮಾ ಪ್ರೇಕ್ಷಕನಿಗೆ ಭಾವನಾತ್ಮಕ ಅನುಭವ ನೀಡುತ್ತದೆ. ಮೇಲ್ನೊಟಕ್ಕೆ ಹೆಣ್ಣಿನ ಸುತ್ತಾ ಸಾಗುವ ಕತೆಯಾಗಿ ಕಂಡರೂ ಇದು ಕುಟುಂಬದ ಕತೆ. ತಪ್ಪಿತಸ್ಥನ ಸ್ಥಾನದಲ್ಲಿ ನಿಂತಿರುವ ತಂದೆ, ಹೊರ ಜಗತ್ತಿನಲ್ಲಿ ದುಡಿಯಲೇ ಬೇಕಾದ ಅನಿವಾರ್ಯತೆ, ಭಾವನೆಗಳೇ ಇಲ್ಲದ ಆಕೆಯ ಗಂಡ, ಪ್ರತಿಯೊಂದನ್ನು ಕೇರ್‌ ಮಾಡುವ ಗಾಢ ಪ್ರೇಮಿ, ಬಿಡುಗಡೆ ಬಯಸುವ ಹೆಣ್ಣಿನ ತಾಕಲಾಟಗಳು... ಈ ಎಲ್ಲವನ್ನೂ ಮೂರು ಪಾತ್ರಗಳ‍ ಮೂಲಕ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಬರುವ ನುಡಿ (ಶಾನ್ವಿ ಶ್ರೀವಾಸ್ತವ), ನಿನಾದ್‌ (ನಿರೂಪ್‌ ಭಂಡಾರಿ), ನೀಲ್‌ (ಪೃಥ್ವಿ ಅಂಬಾರ್‌), ಸಿರಿ (ರೀತು ಸಿಂಗ್‌) ಪಾತ್ರಧಾರಿಗಳು ಯಾರೋ ಹೊರಗಿನವರು ಅನಿಸಲ್ಲ. ಅವು ನಾವೇ ಅನಿಸುವ ಮಟ್ಟಿಗೆ ಪ್ರೇಕ್ಷನಿಗೆ ಪಾತ್ರಗಳು ಸನಿಹವಾಗುತ್ತವೆ.

ಶ್ರೀ ಕ್ರೇಜಿಮೈಂಡ್ಸ್‌ ಸಂಕಲನ, ಮನೋ ಮೂರ್ತಿ ಸಂಗೀತ, ಎಸ್‌.ಕೆ.ರಾವ್‌ ಛಾಯಾಗ್ರಾಹಣ ನಿರ್ದೇಶಕರ ಕತೆ ಕಟ್ಟುವಿಗೆಗೆ ಸಂಪೂರ್ಣವಾಗಿ ಶಕ್ತಿ ತುಂಬಿವೆ. ತಂಪಾಗಿ ಕಾಡುವ ಭಾವನೆಗಳ ಸಿನಿಮಾ ನೋಡಬೇಕು ಎನಿಸುವವರಿಗೆ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಉತ್ತಮ ಆಯ್ಕೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಎಲ್ಲಾ ವರ್ಗದ ಪ್ರೇಕ್ಷಕರನ್ನು ತಟ್ಟುವ ಸಿನಿಮಾ ಅಮೆರಿಕಾ ಅಮೆರಿಕಾ : ನಾಗತಿಹಳ್ಳಿ ಚಂದ್ರಶೇಖರ್‌
ಹೊಸ ಕಾಲಕ್ಕೆ ಹೊಂದಿಕೊಳ್ಳುವುದೇ ಜೀವನ: ರಮೇಶ್ ಅರವಿಂದ್