ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು

Published : Feb 14, 2026, 01:22 PM IST
JP Tuminad

ಸಾರಾಂಶ

ನಾನು ಬರೆದ ಪ್ರೇಮಪತ್ರ ಹತ್ತಾರು ಜೀವಗಳನ್ನು ಬೆಸೆದಿದೆ ಅನ್ನುವುದು ಧನ್ಯತೆ. ನನ್ನ ಪ್ರೇಮಕಥೆ ಶುರುವಾದದ್ದು ನಾನು ರಂಗಭೂಮಿಗೆ ಬಂದಾದ ಮೇಲೆ. ಆಗ ತುಳು ನಾಟಕಗಳನ್ನು ಬರೆಯುತ್ತಿದ್ದೆ, ಜೊತೆಗೆ ರಂಗದ ಮೇಲೆ ಅಭಿನಯಿಸುತ್ತಿದ್ದೆ. ನನ್ನ ಪ್ರೇಮಕಥೆ ಶುರುವಾದದ್ದು ನಾನು ರಂಗಭೂಮಿಗೆ ಬಂದಾದ ಮೇಲೆ.

ಮೊದಲ ಪ್ರೇಮಕತೆ

- ಜೆ.ಪಿ. ತುಮಿನಾಡು, ಸು ಫ್ರಮ್‌ ಸೋ ಸಿನಿಮಾ ನಟ, ನಿರ್ದೇಶಕ

ಎಲ್ಲರ ಬದುಕಿನಲ್ಲಿ ಇರುವ ಹಾಗೆ ಶಾಲೆಯಲ್ಲಿ ಹುಡುಗಿಯ ಮೇಲೆ ಕ್ರಶ್ ಆಗುವುದು, ಗೆಳೆಯರೊಂದಿಗೆ ಆ ಬಗ್ಗೆ ಕಾಲೆಳೆಸಿಕೊಳ್ಳುವುದು ಇತ್ಯಾದಿ ಘಟ್ಟ ದಾಟಿದ ಮೇಲೆ ನಾನು ಲವ್‌ ಲೆಟರ್‌ ಬರೆಯಲು ಶುರು ಮಾಡಿದ್ದು. ಆದರೆ ಅದು ನನಗಲ್ಲ, ಸ್ನೇಹಿತರಿಗೆ. ಫ್ರೆಂಡ್ಸ್‌ಗಾಗಿ ನಾನು ಬರೆದ ಪ್ರೇಮಪತ್ರ ಹತ್ತಾರು ಜೀವಗಳನ್ನು ಬೆಸೆದಿದೆ ಅನ್ನುವುದು ಧನ್ಯತೆ. ನನ್ನ ಪ್ರೇಮಕಥೆ ಶುರುವಾದದ್ದು ನಾನು ರಂಗಭೂಮಿಗೆ ಬಂದಾದ ಮೇಲೆ. ಆಗ ತುಳು ನಾಟಕಗಳನ್ನು ಬರೆಯುತ್ತಿದ್ದೆ, ಜೊತೆಗೆ ರಂಗದ ಮೇಲೆ ಅಭಿನಯಿಸುತ್ತಿದ್ದೆ.

ಒಂದು ತಂಪು ಹೊತ್ತಲ್ಲಿ ನಮ್ಮ ನಾಟಕ ಟೀಮ್‌ಗೆ ಒಬ್ಬ ಹುಡುಗಿ ಬಂದಳು. ಆ ಹೊತ್ತಿಗೆ ಪ್ರದರ್ಶನಗೊಳ್ಳುತ್ತಿದ್ದ ನಾಟಕದಲ್ಲಿ ರಂಗದ ಮೇಲೆ ನಾವಿಬ್ಬರೂ ಪ್ರೇಮಿಗಳಾಗಿ ನಟಿಸಬೇಕಿತ್ತು. ನಟನೆಯೇನೋ ಮಾಡುತ್ತಿದ್ದೆವು, ಆದರೆ ಆರಂಭದಲ್ಲಿ ಎಲ್ಲವೂ ಸರಿ ಇರಲಿಲ್ಲ. ಆ ಹುಡುಗಿ ಯಾವುದೋ ಕಾರಣಕ್ಕೆ ನನ್ನ ಮೇಲೆ ಸಿಡಿಮಿಡಿಗೊಳ್ಳುತ್ತಿದ್ದಳು, ಚೆನ್ನಾಗಿ ಬೈಯ್ಯುತ್ತಿದ್ದಳು. ಆದರೆ ಅವಳಂದುಕೊಂಡ ಹಾಗೆ ನಾನಿರಲಿಲ್ಲ. ಆ ವಿಚಾರ ಅವಳಿಗೆ ತಿಳಿದದ್ದು ತಡವಾಗಿ. ಅಷ್ಟರಲ್ಲಿ ನನಗೆ ಭರಪೂರ ಬೈಗುಳದ ಸಂದಾಯವಾಗಿತ್ತು. ಸತ್ಯ ತಿಳಿದ ಮೇಲೆ ಅವಳಿಗೆ ಪಶ್ಚಾತಾಪ ಆಯ್ತು, ಅದು ಕಾಳಜಿಯಾಗಿ ಬದಲಾಯ್ತು. ಕ್ರಮೇಣ ಅಕ್ಕರೆಯಲ್ಲಿ ಮಾತನಾಡಿಸತೊಡಗಿದಳು. ಹಾಗೆ ಹತ್ತಿರವಾದ ಹುಡುಗಿ ನನ್ನ ಬದುಕಿನ ಪ್ರೇಮರಶ್ಮಿಯಾದಳು. ನಮ್ಮ ಪ್ರೀತಿಗೀಗ ಹದಿನಾಲ್ಕು ವರ್ಷ. ಇನ್ನು ಕೆಲವೇ ಸಮಯದಲ್ಲಿ ಆಕೆಯ ಜೊತೆಗೆ ಸಪ್ತಪದಿ ತುಳಿಯಲಿದ್ದೇನೆ.

ಹತ್ತನೇ ಕ್ಲಾಸಲ್ಲಿ ಲವ್ವಲ್ಲಿ ಬಿದ್ದಿದ್ದೆ - ನಿಹಾರ್‌ ಮುಖೇಶ್‌, ನಾಯಕ ನಟ

ಸದ್ಯ ಪ್ರೀತಿ, ಪ್ರೇಮ ಅನ್ನೋದನ್ನೆಲ್ಲ ಸೈಡಿಗಿಟ್ಟು ಕೆರಿಯರ್‌ನಲ್ಲಿ ಏನಾದರೂ ಮಾಡಬೇಕು ಅಂತ ಸೀರಿಯಸ್ಸಾಗಿ ನಿರ್ಧರಿಸಿದ್ದೇನೆ. ನಾಲ್ಕು ವರ್ಷಗಳ ಕೆಳಗೆ ರಿಲೇಶನ್‌ಶಿಪ್‌ನಲ್ಲಿದ್ದೆ. ಒಂದು ಕೆಟ್ಟ ಗಳಿಗೆಯಲ್ಲಿ ಅದು ಮುರಿದುಬಿದ್ದ ಮೇಲೆ ಲವ್‌ ಗಿವ್ವು ಹತ್ರ ಸುಳಿಯೋದಕ್ಕೆ ಬಿಟ್ಟಿಲ್ಲ. ಇನ್ನೇನಿದ್ದರೂ ಮದುವೆ ಆಗೋದು ಅಂತ ನಿರ್ಧರಿಸಿಬಿಟ್ಟಿದ್ದೇನೆ.

ಸ್ಕೂಲ್‌ ಟೈಮಲ್ಲಿರುವಾಗ ಒಂದು ಲವ್‌ಸ್ಟೋರಿ ಇತ್ತು. ನಾನಾಗ ಹತ್ತನೇ ಕ್ಲಾಸ್‌ನಲ್ಲಿದ್ದೆ. ಅದು ಒಂಚೂರು ಒನ್‌ಸೈಡೆಡ್‌ ಥರವೂ ಇತ್ತು. ನಾನಾಗ ಸಂಕೋಚದ ಹುಡುಗ ಆಗಿದ್ದೆ. ಏನನ್ನೂ ತೋರಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಕಾಲೇಜ್‌ಗೆ ಬರುವ ವೇಳೆಗೆ ಅವರು ಬೇರೆ ಕಡೆ ಶಿಫ್ಟ್‌ ಆದರು. ಅದು ಕ್ರಮೇಣ ವರ್ಕೌಟ್‌ ಆಗದೇ ಬ್ರೇಕಪ್‌ ಆಯ್ತು. ಮುಂದೆ ಇಂಜಿನಿಯರಿಂಗ್‌ ಮಾಡುವಾಗ ಒಂದು ಹುಡುಗಿ ಜೊತೆ ಕ್ರಶ್‌ ಆಗಿತ್ತಷ್ಟೇ.

ಶಾಲೆಯಲ್ಲಿ ಸಿಕ್ಕವಳು, ಹೂವಿನಂಥ ಹುಡುಗಿ

- ನವೀನ್‌ ಶಂಕರ್‌

ನಾನು 6ನೇ ಕ್ಲಾಸ್, ಅವಳು ನಾಲ್ಕನೇ ಕ್ಲಾಸ್. ನಮ್ದು ಪುಟ್‌ ಪುಟಾಣಿ ಲವ್‌ಸ್ಟೋರಿ. ಆ ವಯಸ್ಸಿಗೆ ಅವಳನ್ನು ಕದ್ದು ಕದ್ದು ನೋಡೋದು, ಕ್ರಾಸ್‌ ಮಾಡ್ಕೊಂಡು ನೋಡ್ತಾ ನೋಡ್ತಾ ಹೋಗಿ ಒಂದು ಸ್ಮೈಲ್‌ ಕೊಟ್ಟರೆ, ಅವಳೂ ನಕ್ಕರೆ ಮುಗೀತು, ಲವ್‌ ಕನ್‌ಫರ್ಮ್‌. ಇಳ್‌ಕಲ್‌ನಿಂದ ನಮ್ಮೂರು ಹದಿನಾಲ್ಕು ಕಿಮೀ. ಒಬ್ಬರು ಮೇಷ್ಟ್ರ ಮನೇಲಿದ್ವಿ. ಒಮ್ಮೆ ನಾನು ಬಸ್‌ ಹತ್ತುವಾಗ ಆ ಹುಡುಗಿ ಚಾಕೋಲೇಟ್‌ ಕೊಟ್ಟಳು. ಅವಳು ಎಲ್ಲೋ ಹೊರಗೆ ಹೋದಾಗ ನಾನೂ ಚಾಕ್ಲೇಟ್‌ ಕೊಟ್ಟಿದ್ದೆ. ಹೀಗೆ ನಮ್ಮ ಪ್ರೀತಿ ಬೆಳೆಯುತ್ತಿತ್ತು.

ಆಗೆಲ್ಲ ಹಗ್‌ ಮಾಡೋ ಕಾನ್ಸೆಪ್ಟೇ ಇರಲಿಲ್ಲ. ಜಾಸ್ತಿ ಅಂದರೆ ಕೆನ್ನೆಗೊಂದು ಮುತ್ತು. ಮುಗಿದುಹೋಯ್ತು. ಶಾಲೆ ಬಿಟ್ಟು ಮನೆಗೆ ಹೋದಾಗ ಅವಳನ್ನು ಫಾಲೋ ಮಾಡ್ಕೊಂಡು ಹೋಗ್ತಿದ್ವಿ. ಅವಳ ಮನೆ ತನಕ ಹೋಗಿ ಅಲ್ಲಿಂದ ಯೂಟರ್ನ್‌. ನಾನು ಏಳನೇ ಕ್ಲಾಸಿಗೆ ಬಂದಾಗ ಟ್ಯೂಶನ್‌ಗೆ ಹೋಗ್ತಿದ್ದೆ. ಆಗ 7ನೇ ಕ್ಲಾಸ್‌ ದೊಡ್ಡ ಕ್ಲಾಸ್‌ ಅಂತ ಟ್ಯೂಶನ್‌ ಇರ್ತಿತ್ತು. ನಾನು ಹೋಗುವ ಟೈಮಿಗೆ ಆ ಹುಡುಗಿ ಬರ್ತಿದ್ಲು ನನ್ನ ಫಾಲೋ ಮಾಡ್ಕೊಂಡು.

ಮುಂದೆ ಸ್ಕೂಲ್‌ ಬದಲಾಯ್ತು, ಹುಡುಗಿ ಸಿಹಿ ನೆನಪಾಗಿ ಎದೆಯಲ್ಲಿ ಉಳಿದುಕೊಂಡಳು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಅನೌಷ್ಕಾ ಶಂಕರ್ ಸಂಗೀತ ಕಾರ್ಯಕ್ರಮದಲ್ಲಿ ಅರಿಜಿತ್ ಸಿಂಗ್
ಯಶ್‌ ಟಾಕ್ಸಿಕ್‌ ವಿದೇಶಿ ವಿತರಣೆ ಹಕ್ಕಿಗೆ 105 ಕೋಟಿ ರೂ. ಮುಂಗಡ