ಸಿನಿವಾರ್ತೆ
ಡಾ. ರಾಜ್‌ಕುಮಾರ್ ಅವರ 95ನೇ ಹುಟ್ಟುಹಬ್ಬವನ್ನು ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಮಿಗಳು ಅದ್ದೂರಿಯಾಗಿ ಆಚರಿಸಿದರು.
ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‌ಕುಮಾರ್ ಸ್ಮಾರಕಕ್ಕೆ ರಾಜ್ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿದರು. ಅಶ್ವಿನಿ ಪುನೀತ್‌ರಾಜ್‌ಕುಮಾರ್, ಪುನೀತ್ ಅವರ ಪುತ್ರಿ ವಂದಿತಾ, ರಾಘವೇಂದ್ರ ರಾಜ್‌ಕುಮಾರ್, ಎಸ್ ಎ ಗೋವಿಂದರಾಜ್, ಜಗ್ಗೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್‌ಕುಮಾರ್, ‘ಅಪ್ಪಾಜಿ ಹುಟ್ಟಿದ ದಿನ ಬಂದಿದ್ದ ಸ್ವಾತಿ ನಕ್ಷತ್ರ ಇವತ್ತು ಬಂದಿದೆ. ಇಡೀ ದಿನ ಸ್ವಾತಿ ನಕ್ಷತ್ರ ಇರುತ್ತದೆ. ಎಷ್ಟೋ ವರ್ಷಗಳಿಗೊಮ್ಮೆ ಹೀಗೆ ಸಮಯ ಕೂಡಿ ಬರುತ್ತದೆ. ಇದು ಪುನರ್ಜನ್ಮದ ಲಕ್ಷಣ. ನಮ್ಮ ತಂದೆಯವರು ಇಲ್ಲ ಎನ್ನುವುದಕ್ಕೆ ಒಂದು ಕಾರಣವೂ ಇಲ್ಲ. ಇದ್ದಾರೆ ಅನ್ನುವುದಕ್ಕೆ ನೂರಾರು ಕಾರಣಗಳಿವೆ. ಅಭಿಮಾನಿಗಳು ಅವರನ್ನು ಜೀವಂತವಾಗಿಟ್ಟಿದ್ದಾರೆ. ನಮ್ಮ ನಡವಳಿಕೆಗಳಲ್ಲಿ ಡಾ ರಾಜ್‌ಕುಮಾರ್ ಅವರು ಬದುಕಿದ್ದಾರೆ’ ಎಂದು ಹೇಳಿದರು.
ಅಶ್ವಿನಿ ಪುನೀತ್‌ರಾಜ್‌ಕುಮಾರ್ ಮಾತನಾಡಿ, ‘ಪ್ರತಿ ವರ್ಷ ಅಭಿಮಾನಿಗಳ ಸಂಭ್ರಮ ನೋಡಿದಾಗ ಮನಸ್ಸಿಗೆ ಖುಷಿ ಆಗುತ್ತದೆ. ನಮ್ಮ ಕುಟುಂಬಕ್ಕೆ ಹಲವು ವರ್ಷಗಳಿಂದ ಪರಿಚಯ ಇರುವ ರಾಜೇಶ್ ಅವರು ಗಂಧದಗುಡಿ ಹೆಸರಿನಲ್ಲಿ ಅಗರ ಬತ್ತಿಗಳನ್ನು ತರುತ್ತಿದ್ದಾರೆ. ಇದರಿಂದ ಬರುವ ಆದಾಯದಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಮತದಾನ ದಿನ ಹತ್ತಿರ ಬಂದಿದೆ. ನಿಮಗೆ ಸರಿ ಎನಿಸಿದ ಪಕ್ಷದ ಅಭ್ಯರ್ಥಿಗೆ ಎಲ್ಲರೂ ವೋಟ್ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ. ನಾನು ಕೂಡ ವೋಟ್ ಮಾಡುತ್ತೇನೆ’ ಎಂದರು.
ನವರಸ ನಾಯಕ ಜಗ್ಗೇಶ್ ಮಾತನಾಡಿ, ‘ನನಗೆ ರಾಜ್‌ಕುಮಾರ್ ಎಂದರೆ ಪ್ರಾಣ. ಬಾಲ್ಯದಿಂದಲೂ ನಾನು ಅವರನ್ನು ಮನಸ್ಸಿಗೆ ಹತ್ತಿರವಾಗಿಸಿಕೊಂಡವನು. ರಾಜ್‌ಕುಮಾರ್ ಅವರಲ್ಲಿ ನಾನು ತಂದೆಯ ವಾತ್ಸಲ್ಯವನ್ನು ಕಂಡಿದ್ದೇನೆ’ ಎಂದು ತಿಳಿಸಿದರು.