ಮುಗ್ಧತೆಯನ್ನು ಬಿಟ್ಟಿರದ ಡಾ। ರಾಜ್‌ಕುಮಾರ್‌: ರಾಘವೇಂದ್ರ ರಾಜ್‌ಕುಮಾರ್‌

KannadaprabhaNewsNetwork |  
Published : Apr 25, 2024, 01:00 AM ISTUpdated : Apr 25, 2024, 06:14 AM IST
Ravindra kalaskshetra 1 | Kannada Prabha

ಸಾರಾಂಶ

ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಡಾ। ರಾಜ್‌ಕುಮಾರ್‌ ಅವರ 96ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

 ಬೆಂಗಳೂರು :  ವರನಟ ಡಾ। ರಾಜ್‌ಕುಮಾರ್‌ ಅವರು ದೊಡ್ಡ ನಟನಾಗಿ ಹೆಸರು ಗಳಿಸಿದರೂ, ಕೊನೆಯ ತನಕ ಮುಗ್ಧತೆ, ಪ್ರತಿಯೊಬ್ಬರಿಂದಲೂ ಏನನ್ನಾದರೂ ಕಲಿಯಬೇಕು ಎಂಬ ಹಂಬಲವನ್ನು ಮಾತ್ರ ಅವರು ಬಿಟ್ಟಿರಲಿಲ್ಲ ಎಂದು ಡಾ। ರಾಜ್‌ಕುಮಾರ್‌ ಪುತ್ರ, ನಟ ರಾಘವೇಂದ್ರ ರಾಜ್‌ಕುಮಾರ್‌ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಡಾ। ರಾಜ್‌ಕುಮಾರ್‌ ಅವರ 96ನ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವವೇ ಕೊಂಡಾಡಿದಂತಹ ನಟನಾದರೂ ಡಾ। ರಾಜ್‌ಕುಮಾರ್‌ ಅವರು ಮುತ್ತುರಾಜನ ಗುಣಗಳನ್ನು ಮಾತ್ರ ಬಿಟ್ಟಿರಲಿಲ್ಲ. ಪ್ರತಿಯೊಬ್ಬರಿಂದಲೂ ಏನನ್ನಾದರೂ ಕಲಿಯಬೇಕು ಹಂಬಲ ಅವರಲ್ಲಿತ್ತು. ಅದೇ ರೀತಿ ತಮಗೆ ಏನೂ ತಿಳಿಯದು ಎಂಬ ಮುಗ್ಧತೆಯನ್ನು ಹೊಂದಿದ್ದರು. ತಮ್ಮ ಕೊನೆಯ ಚಲನಚಿತ್ರದಲ್ಲೂ ನಿರ್ದೇಶಕರು ಹೇಳಿ ಕೊಟ್ಟಿದ್ದನ್ನು ಕೇಳಿ ನಟಿಸುತ್ತಿದ್ದರು. ತಾವು ಮೇರುನಟ ಎಂಬ ಅಹಂಕಾರ ಎಂದೂ ತೋರಿಸಿದವರಲ್ಲ ಎಂದರು.

ಸೋಲನ್ನು ಮನಸ್ಸಿಗೆ ತೆಗೆದುಕೊಳ್ಳಬಾರದು, ಗೆಲುವನ್ನು ತಲೆಗೆ ಏರಿಸಿಕೊಳ್ಳಬಾರದು ಎಂಬ ನೀತಿಯನ್ನು ಡಾ. ರಾಜ್‌ಕುಮಾರ್‌ ಯಾವಾಗಲೂ ನಮಗೆ ಹೇಳುತ್ತಿದ್ದರು. ಅಲ್ಲದೆ, ಎಂತಹದ್ದೇ ನೋವನ್ನಾದರೂ ಅನುಭವಿಸಬೇಕು. ಆಗ ಮಾತ್ರ ಅದರ ಬಗ್ಗೆ ನಮಗೆ ಚಿಂತೆಯಾಗುವುದಿಲ್ಲ. ಯಾವುದೇ ಪಾತ್ರವಾದರೂ ಅದರ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೆ, ನಿರ್ದೇಶಕರು ಹೇಳಿದಂತೆ ನಟಿಸಿದರೆ ಯಾವುದೇ ಒತ್ತಡವೂ ನಮ್ಮ ಮೇಲೆ ಇರುವುದಿಲ್ಲ ಎಂದು ಹೇಳುತ್ತಿದ್ದರು. ಅದನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.

ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಕನ್ನಡ ನಾಡು, ನುಡಿಗಾಗಿ ಡಾ। ರಾಜ್‌ಕುಮಾರ್ ಅತಿದೊಡ್ಡ ಕೊಡುಗೆ ನೀಡಿದರು. ಕುವೆಂಪು ಅವರು ಈಗ ನಾಡಗೀತೆ ರಚಿಸುತ್ತಿದ್ದರೆ ಅದರಲ್ಲಿ ಡಾ। ರಾಜ್‌ಕುಮಾರ್‌ ಅವರ ಹೆಸರು ಖಂಡಿತ ಇರುತ್ತಿತ್ತು. ರಾಜ್‌ಕುಮಾರ್‌ ಅವರು ನಟನೆ ಮಾತ್ರವಲ್ಲದೆ ತಮ್ಮ ಚಿತ್ರದ ಕಥೆ, ಸಂಭಾಷಣೆ ಉತ್ತಮವಾಗಿರುವಂತೆಯೂ ನೋಡಿಕೊಳ್ಳುತ್ತಿದ್ದರು. ಚಿತ್ರದ ಎಲ್ಲ ಕೆಲಸದಲ್ಲೂ ಪಾಲ್ಗೊಳ್ಳುತ್ತಿದ್ದರು ಎಂದರು.

ವಾರ್ತಾ ಮತ್ತು ಸಾರ್ವನಿಕ ಸಂರ್ಪಕ ಇಲಾಖೆ ಕಾರ್ಯದರ್ಶಿ ಡಾ। ಕೆ.ವಿ.ತ್ರಿಲೋಕಚಂದ್ರ, ಆಯುಕ್ತ ಸೂರಳ್‌ಕರ್‌ ವಿಕಾಸ್‌ ಕಿಶೋರ್‌ ಇತರರಿದ್ದರು.

‘ರಾಜ್‌ರನ್ನು ನೋಡಿ ಕಲಿಯಿರಿ’

ಹಿರಿಯ ನಟ ಜೆ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಡಾ. ರಾಜ್‌ಕುಮಾರ್‌ ಅವರು ತಮ್ಮ ಜೀವಿತಾವಧಿಯಲ್ಲಿ ಯಾರನ್ನೂ ಚಿಕ್ಕವರು ಎಂದು ತಿರಸ್ಕರಿಸುತ್ತಿರಲಿಲ್ಲ. ಸಹ ಕಲಾವಿದರನ್ನು ಗೌರವದಿಂದ ನೋಡಿಕೊಂಡರು. ಪೌರಾಣಿಕ, ಐತಿಹಾಸಿಕ, ಬಾಂಡ್‌ ಹೀಗೆ ಎಂತಹದ್ದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಿದ್ದರು. ಅವರು ಯಾವತ್ತೂ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದವರಲ್ಲ. ಆದರೆ, ಈಗಿನ ಕಾಲದಲ್ಲಿ ಚಲನಚಿತ್ರ ನಟರು ಬಾಯಿ ತೆರೆದರೆ ಎಂತೆಂತಹದ್ದೋ ಮಾತುಗಳು ಹೊರಬರುತ್ತವೆ. ರಾಜ್‌ಕುಮಾರ್‌ ಅವರಂತೆಯೇ ಬದುಕಿದವರು ಪುನೀತ್‌ ರಾಜ್‌ಕುಮಾರ್ ಅವರು. ರಾಜ್‌ಕುಮಾರ್‌ಗಿಂತ ನೂರು ಪಟ್ಟು ಹೆಚ್ಚಿನ ಹೆಸರು ಗಳಿಸಿದರು ಎಂದು ಅಭಿಪ್ರಾಯಪಟ್ಟರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

2026ರ ಬಹು ನಿರೀಕ್ಷಿತ ಸಿನಿಮಾಗಳು
ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಕ್‌ ವೈಭವ