ಆ್ಯಕ್ಷನ್ನೇ ನನ್ನ ತಾಕತ್ತು: ರಾಜವರ್ಧನ್

KannadaprabhaNewsNetwork | Published : Feb 6, 2025 11:46 PM

ಸಾರಾಂಶ

ರಾಜವರ್ಧನ್‌, ತಪಸ್ವಿನಿ ಪೂಣಚ್ಚ ನಟನೆಯ, ಸುನೀಲ್‌ ಕುಮಾರ್‌ ನಿರ್ದೇಶನದ, ನರಸಿಂಹ ಮೂರ್ತಿ ನಿರ್ಮಾಣದ ಗಜರಾಮ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕ ರಾಜವರ್ಧನ್ ಮಾತನಾಡಿದ್ದಾರೆ.

- ಪ್ರಿಯಾ ಕೆರ್ವಾಶೆ

- ಪೈಲ್ವಾನ್ ಆಗಿ ಕುಸ್ತಿ ಮಾಡಿದ ಅನುಭವ ಹೇಗಿತ್ತು?

ಗಜರಾಮ ಕುಸ್ತಿ ಆಧರಿತ ಚಿತ್ರ. ಶ್ರೀರಂಗಪಟ್ಟಣದಂಥಾ ಊರಲ್ಲಿರುವ ಮುಗ್ಧ ಯುವಕನ ಕಥೆ. ಅವನು ಕುಸ್ತಿ ಚಾಂಪಿಯನ್‌. ಬೆಂಗಳೂರಿಗೆ ಬಂದ ಮೇಲೆ ಅವನು ಏನಾಗ್ತಾನೆ ಅನ್ನುವ ಕಥೆ ಸಿನಿಮಾದ್ದು. ಈ ಪಾತ್ರಕ್ಕಾಗಿ ಮೂರು ತಿಂಗಳು ಮಡಿವಾಳದ ಗರಡಿ ಮನೆಯಲ್ಲಿ ಕುಸ್ತಿ ಪ್ರಾಕ್ಟೀಸ್‌ ಮಾಡಿದೆ. ಕುಸ್ತಿ ಪಟುಗಳ ದೇಡಧಾರ್ಢ್ಯ ಭಿನ್ನ, ಅದು ಜಿಮ್‌ನಲ್ಲಿ ಬಿಲ್ಡ್‌ ಮಾಡುವ ಬಾಡಿ ಥರ ಅಲ್ಲ. ಅವರ ಮ್ಯಾನರಿಸಂ ಬೇರೆ ಥರ ಇರುತ್ತೆ. ಇಂಥಾ ಸೂಕ್ಷ್ಮಗಳನ್ನೆಲ್ಲ ಅರಿತುಕೊಂಡೆ. ಕಾನ್ಫಿಡೆನ್ಸ್‌ ಬಂದ ಮೇಲೆ ಶೂಟ್‌ ಶುರು ಮಾಡಿದೆ. ಮೈನವಿರೇಳಿಸುವ ಆ್ಯಕ್ಷನ್‌ ಇರುವ ಅದ್ಭುತ ಸಿನಿಮಾದಲ್ಲಿ ನಟಿಸಿದ್ದು ಒಂದೊಳ್ಳೆ ಅನುಭವ.

- ಸಾಕಷ್ಟು ಸಿನಿಮಾಗಳು ಕುಸ್ತಿ ಸಬ್ಜೆಕ್ಟ್‌ ಮೇಲೆ ಬಂದಿವೆ. ಈ ಸಿನಿಮಾದ ವಿಶೇಷತೆ ಏನು?

ಕಥೆ, ಮೇಕಿಂಗೇ ನಮ್ಮ ಕಾನ್ಫಿಡೆನ್ಸ್‌. ನಾವಿಲ್ಲಿ ಯಾರಿಗೂ ಬುದ್ಧಿವಾದ ಹೇಳೋದಕ್ಕೆ ಬಂದಿಲ್ಲ. ಹೀರೋ ಬದುಕು ತೋರಿಸಿ ಸಿಂಪಥಿ ತಗೊಳ್ಳೋದೆಲ್ಲ ಮಾಡ್ತಿಲ್ಲ. ಕಮರ್ಷಿಯಲ್‌ ಆಗಿ 2 ಗಂಟೆ ಮನರಂಜನೆ ನೀಡ್ತೀವಿ ಅಷ್ಟೇ.

- ನಿಮ್ಮ ತಂದೆ ಖ್ಯಾತ ಹಾಸ್ಯ ಕಲಾವಿದರು, ನಿಮ್ಮದು ಆ್ಯಕ್ಷನ್ ಸಿನಿಮಾ. ಮನೆಯಲ್ಲಿ ನಿಮ್ಮಿಬ್ಬರ ಕೆಮಿಸ್ಟ್ರಿ ಹೇಗಿರುತ್ತೆ?

ನಾವು ತುಂಬಾ ಕಮ್ಮಿ ಮಾತಾಡೋದು. ತಂದೆ ಬಗ್ಗೆ ಭಯ ಭಕ್ತಿ ಜಾಸ್ತಿ. ಇವತ್ತಿಗೂ ಪಕ್ಕದಲ್ಲಿ ಕೂತ್ಕೊಳ್ಳಲ್ಲ. ಎಂಟೂವರೆಗೆಲ್ಲ ಮನೆ ಸೇರ್ತೀವಿ. ಅಪ್ಪ ತುಂಬಾ ಸ್ಟ್ರಿಕ್ಟ್‌, ಸೀನ್‌ ಮೇಲೆ ನೋಡೋ ಥರ ಅಲ್ವೇ ಅಲ್ಲ. ಕಂಪ್ಲೀಟ್‌ ಅಪೊಸಿಟ್‌. ಆದರೆ ನನ್ನ ಸಿನಿಮಾ ರಿಲೀಸ್‌ಗೆ ಅವರ ಸ್ನೇಹಿತರನ್ನು ಕರ್ಕೊಂಡು ಬರ್ತಾರೆ. ಅವರಿಗೆಲ್ಲ ಪಾರ್ಟಿ ಕೊಡಿಸಿ ನನ್ನ ಆ್ಯಕ್ಟಿಂಗ್‌ ಬಗ್ಗೆ ಪಾಸಿಟಿವ್ ಆಗಿ ಮಾತಾಡ್ತಾರೆ. ನನ್ನ ಎದುರು ಮಾತ್ರ ತುಟಿ ಬಿಚ್ಚಲ್ಲ.

- ನೀವು ನೋಡೋ ಸಿನಿಮಾಗಳು ಹೇಗಿರುತ್ತವೆ? ನಾನೂ ಅಪ್ಪ ಕೂತ್ಕೊಂಡು ಕಮರ್ಷಿಯಲ್‌ ಆ್ಯಕ್ಷನ್‌ ಸಿನಿಮಾ ಹೆಚ್ಚೆಚ್ಚು ನೋಡ್ತೀವಿ. ಚಿಕ್ಕ ವಯಸ್ಸಿಂದಲೂ ಹೀಗೆ. ಅಪ್ಪನೂ ಲವ್‌ ಸ್ಟೋರಿ ನೋಡಲ್ಲ. ನೀತಿ ಗೀತಿ ಹೇಳೋ ಸಿನಿಮಾ ಇಷ್ಟ ಆಗಲ್ಲ. ನಾನು ಚಿತ್ರರಂಗಕ್ಕೆ ಬಂದಮೇಲೆ ನನ್ನ ಪರ್ಸನಾಲಿಟಿಗೆ ಬಂದಿದ್ದೆಲ್ಲ ಆ್ಯಕ್ಷನ್‌ ಸಿನಿಮಾಗಳು. ಎಲ್ಲಾ ಥರ ಪಾತ್ರ ಮಾಡೋಕೆ ನಂಗಿಷ್ಟವೇ. ಆದರೆ ಜಾನರ್‌ ಚೇಂಜ್‌ ಮಾಡಿದ್ರೆ ಒಂದು ಜಾನರಾದಲ್ಲಿರುವ ನಮ್ಮ ಗ್ರಿಪ್‌ ಬಿಟ್ಟ ಹಾಗಾಗುತ್ತೆ. ಹೀಗಾಗಿ ಸಾಹಸ ಪ್ರಧಾನ ಚಿತ್ರಗಳಿಗೆ ಹೆಚ್ಚು ಅಂಟಿಕೊಂಡಿದ್ದೀನಿ.

- ಕಲಾವಿದನ ಮಗನಾಗಿ ಇಂಡಸ್ಟ್ರಿಗೆ ಬಂದು ಎದುರಿಸಿದ ಸವಾಲುಗಳೇನು?

ನನಗದು ಸುಲಭ ಆಗಲಿಲ್ಲ. ಇಂಥವ್ರ ಮಕ್ಕಳು ಬರ್ತಾರೆ, ಅವರನ್ನು ಬೆಳೆಸಬೇಕು ಅಂತ ಇಲ್ಲಿ ಯಾರೂ ಕಾಯ್ತಾ ಇರಲ್ಲ. ಪರಿಶ್ರಮ, ಕ್ಯಾಮರ ಮುಂದೆ ಹೇಗಿರ್ತೀವಿ, ಸಿನಿಮಾ ಹೇಗೆ ಬಿಸಿನೆಸ್ ಮಾಡುತ್ತೆ ಅನ್ನೋದಷ್ಟೇ ಇಲ್ಲಿ ಮುಖ್ಯ. ಅಪ್ಪನ ಸಪೋರ್ಟ್‌ ಇದ್ದೇ ಇದೆ. ಆದರೆ ಅದು ರೆವೆನ್ಯೂ ಆಗಿ ಕನ್ವರ್ಟ್‌ ಆಗಲ್ಲ.

Share this article