ಸುತ್ತಲಿನ ಘಟನೆಗಳಿಗೆ ಬೇರೆಯದೇ ಮುಖವಿದೆ: ಪೃಥ್ವಿ ಕೊಣನೂರು

KannadaprabhaNewsNetwork |  
Published : Jan 28, 2024, 01:18 AM IST
ಹದಿನೇಳೆಂಟು | Kannada Prabha

ಸಾರಾಂಶ

ಅಲೆಗಳು, ರೈಲ್ವೇ ಚಿಲ್ಡ್ರನ್ ಹಾಗೂ ಪಿಂಕಿ ಎಲ್ಲಿ ಚಿತ್ರಗಳ ನಂತರ ನಿರ್ದೇಶಕ ಪೃಥ್ವಿ ಕೊಣನೂರು ತಣ್ಣಗೆ ರೂಪಿಸಿರುವ ಸಿನಿಮಾ ಹದಿನೇಳೆಂಟು. ಈ ಸಿನಿಮಾ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅವರ ಜತೆಗಿನ ಮಾತುಕತೆ ಇಲ್ಲಿದೆ.

ಆರ್‌.ಕೇಶವಮೂರ್ತಿನೀವು ಎಲ್ಲಿಯವರು?

ನನ್ನ ಹುಟ್ಟೂರು ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಕೊಣನೂರು. ಕೆಲಸ, ಬದುಕಿನ ಕನಸು, ಗುರಿಗಳ ಭಾಗವಾಗಿ ಬೇರೆ ಬೇರೆ ಕಡೆ ಬೆಳೆದೆ. ‘ಹದಿನೇಳೆಂಟು’ ನನ್ನ ನಿರ್ದೇಶನದ ನಾಲ್ಕನೇ ಸಿನಿಮಾ.

ಹಿಂದಿನ ಚಿತ್ರಗಳ ಬಗ್ಗೆ ಹೇಳುವುದಾದರೆ?

ಅಲೆಗಳು, ರೈಲ್ವೆ ಚಿಲ್ಡ್ರನ್‌, ಪಿಂಕಿ ಎಲ್ಲಿ ಚಿತ್ರಗಳನ್ನು ಮಾಡಿದ್ದೆ. ಈ ಮೂರು ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ನೋಡಿದವರು ಮೆಚ್ಚಿಕೊಂಡರು. ಈಗ ‘ಹದಿನೇಳೆಂಟು’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ.

ಈ ಚಿತ್ರದ ಕತೆ ಏನು?

ಏಕಾಂತದಲ್ಲಿ ಕಳೆದ ಕಾಲೇಜು ಓದುವ ಹುಡುಗ- ಹುಡುಗಿ ಖಾಸಗಿ ವಿಡಿಯೋವೊಂದು ಹೊರಗೆ ಬರುತ್ತದೆ. ಆ ನಂತರ ಏನೆಲ್ಲ ಆಗುತ್ತದೆ ಎಂಬುದು ಕತೆ. ಪೊಲೀಸು, ಕೋರ್ಟು, ಕಾನೂನು, ಕಾಲೇಜು ಆಡಳಿತ ಮಂಡಳಿ, ಜಾತಿ, ಚೈಲ್ಡ್‌ ಅಬ್ಯುಸ್... ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಈ ಸಿನಿಮಾ ಮಾತಾಡುತ್ತದೆ.

ಹದಿನೇಳೆಂಟು ಚಿತ್ರದ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?

ಪಾಠ ಹೇಳಕ್ಕೆ ಮಾಡಿರುವ ಚಿತ್ರವಲ್ಲ. ಇರೋದನ್ನು ತೋರಿಸಬೇಕೆಂದು ಮಾಡಿರುವ ಚಿತ್ರ. ನಮ್ಮ ಸುತ್ತ ನಡೆಯುವ ಘಟನೆಗಳ ಹಿಂದೆ ಬೇರೆ ಏನೋ ಇರುತ್ತದೆ. ಆ ಬಗ್ಗೆ ಜನರೇ ಮಾತನಾಡಬೇಕು ಎಂಬುದು ನನ್ನ ಉದ್ದೇಶ. ತಾರಾಗಣ ವಿಷಯಕ್ಕೆ ಬಂದರೆ ಚಿತ್ರದಲ್ಲಿ ನಟಿಸಿರುವ ಕೆಲವರ ಹೊರತಾಗಿ ಎಲ್ಲರು ಹೊಸಬರೇ. ಕೋವಿಡ್‌ ಸಮಯದಲ್ಲಿ ಮನೆಯಿಂದಲೇ ವಿಡಿಯೋಗಳ ಮೂಲಕ ಆಡಿಷನ್‌ ಮಾಡಿಕೊಂಡು ಆಯ್ಕೆ ಮಾಡಿಕೊಂಡ ಕಲಾವಿದರ ಚಿತ್ರವಿದು.

ಈ ಸಿನಿಮಾ ಕತೆ ನಿಮಗೆ ಹುಟ್ಟಿಕೊಂಡಿದ್ದು ಹೇಗೆ?ನಾನು ಈ ಚಿತ್ರದಲ್ಲಿ ಹೇಳಿರುವ ವಿಷಯಗಳು ನಮ್ಮ ಸುತ್ತ ನಡೆಯುತ್ತಲೇ ಇವೆ. ಹಾಗೆ ನನ್ನ ಕಾಡಿದ ಒಂದು ವಿಷಯದ ಮೇಲೆ ಅಧ್ಯಯನ ಮಾಡಿದಾಗ ಹುಟ್ಟಿಕೊಂಡ ಸಿನಿಮಾ ಇದು. ಈ ಚಿತ್ರ ನೋಡಿದಾಗ ಎಲ್ಲೋ ಕೇಳಿದ, ನೋಡಿದ ಘಟನೆಯೊಂದು ಸಿನಿಮಾ ಆಗಿದೆ ಅಂತ ನಿಮಗೂ ಅನಿಸುತ್ತದೆ.ಈ ರೀತಿ ಚಿತ್ರಗಳನ್ನು ಬಿಡುಗಡೆ ಮಾಡೋದು ದೊಡ್ಡ ಸಾಹಸ ಅಲ್ಲವೇ?ಆ ಸಾಹಸಗಳನ್ನೇ ಕತೆ ಮಾಡಿದರೆ ಅದೇ ಒಂದು ಸಿನಿಮಾ ಆಗುತ್ತದೆ. ರಾಜ್ಯದ ಪ್ರಮುಖ ನಗರಗಳಲ್ಲಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ‘ಹದಿನೇಳೆಂಟು’ ಸಿನಿಮಾ ತೆರೆಗೆ ಬರುತ್ತಿದೆ. ಇಂಥ ಸಿನಿಮಾಗಳನ್ನು ನೋಡುವ ವಾತಾವರಣ ಹೆಚ್ಚಾಗಬೇಕಿದೆ.

ರಿಯಾಲಿಸ್ಟಿಕ್ ಕತೆಗಳ ಹಿಂದೆಯೇ ಹೋಗುತ್ತಿದ್ದೀರಲ್ಲ?

ನನಗೆ ಬಿಗ್‌ ಬಜೆಟ್‌ನ ಪ್ಯಾನ್‌ ಇಂಡಿಯಾ ಸಿನಿಮಾ ಮಾಡೋದು ಗೊತ್ತು. ಸ್ಕ್ರಿಪ್ಟ್‌ಗಳು ಕೂಡ ರೆಡಿ ಇವೆ. ಅವಕಾಶ ಸಿಕ್ಕರೆ ಖಂಡಿತಾ ಮಾಡುತ್ತೇನೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?
ರಾಕಿಂಗ್‌ ಸ್ಟಾರ್‌ ಮುಂದಿನ ನಿರ್ದೇಶಕರಿಗೆ ಗೀತು ಮೋಹನ್‌ದಾಸ್‌ ಕಿವಿಮಾತು