- ಆರ್. ಕೇಶವಮೂರ್ತಿ
ತುಂಬಾ ವರ್ಷಗಳ ನಂತರ ನಟನೆಗೆ ಮರಳಿದ್ದೀರಲ್ಲ?
ನಾನು ಮತ್ತೆ ಚಿತ್ರರಂಗಕ್ಕೆ ಬರುತ್ತೇನೆಂಬ ಯೋಚನೆ ಕೂಡ ನನಗೆ ಇರಲಿಲ್ಲ. ಅದೇನೋ ಗೊತ್ತಿಲ್ಲ. ಬಣ್ಣದ ನಂಟು ಅಷ್ಟು ಸುಲಭಕ್ಕೆ ದೂರ ಆಗಲ್ಲ. ಕಲೆ ಅನ್ನೋದು ಮತ್ತೆ ಮತ್ತೆ ಸೆಳೆಯುವ ಮಾಧ್ಯಮ. ಅದರ ಸೆಳೆತದಿಂದ ಮತ್ತೆ ಬಂದಿದ್ದೇನೆ.
ಪೀಕಬೂ ಚಿತ್ರದ ಫಸ್ಟ್ ಲುಕ್, ಡ್ಯಾನ್ಸ್ ಟೀಸರ್‌ಗಾಗಿ ಮತ್ತೆ ಕ್ಯಾಮೆರಾ ಮುಂದೆ ನಿಂತಾಗ ಏನನಿಸಿತು?
ತುಂಬಾ ಭಯದಲ್ಲೇ ನಟಿಸಿದ್ದೇನೆ. ಮತ್ತೆ ಬರೋ ಅಶ್ಯಕತೆ ಇತ್ತಾ, ನನ್ನ ಈ ನಟನೆಯನ್ನ ಜನ ಹೇಗೆ ಸ್ವೀಕರಿಸುತ್ತಾರೆ ಇತ್ಯಾದಿ ಯೋಚನೆಗಳಲ್ಲೇ ನಟಿಸಿದ್ದೇನೆ. ಕುತೂಹಲ ಮತ್ತು ಭಯದಿಂದಲೇ ಇದ್ದೇನೆ.
ಯಾಕೆ ಈ ಭಯ?
ಮದುವೆ, ಸಂಸಾರ, ಮಕ್ಕಳು ಅಂತ ನಟನೆಯಿಂದ ದೂರ ಆಗಿ 8 ವರ್ಷ ಆಯಿತು. ಈಗ ಜನ ನನ್ನ ನೆನಪಿಟ್ಟುಕೊಂಡಿದ್ದಾರೆಯೇ, ಯಾವ ರೀತಿ ಸ್ವೀಕರಿಸುತ್ತಾರೆ, ಈಗ ಎಲ್ಲವೂ ಬದಲಾಗಿದೆ. ಯಾವ ರೀತಿ ಕಂಟೆಂಟ್ ನೋಡುತ್ತಾರೆ, ಟಿವಿ, ಓಟಿಟಿ, ಥಿಯೇಟರ್, ಮೊಬೈಲ್... ಹೀಗೆ ಸಿನಿಮಾಗೆ ನೂರಾರು ವೇದಿಕೆಗಳು. ಇಂಥ ಹೊತ್ತಿನಲ್ಲಿ ಯಾವ ರೀತಿ ಚಿತ್ರಗಳ ನಿರೀಕ್ಷೆಯಲ್ಲಿದ್ದಾರೆ, ನಾನು ಮಾಡೋ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಇಂಥ ಯೋಚನೆಗಳ ಕಾರಣಕ್ಕೆ.
ಬಹುಶಃ ಮೊದಲ ಚಿತ್ರ ಮಾಡಿದ ದಿನಗಳು ನೆನಪಾಯಿತೆನೋ?
ಮೊದಲ ಚಿತ್ರದಲ್ಲಿ ನನಗೆ ಯಾವ ಭಯನೂ ಇರಲಿಲ್ಲ. ಆಗ ನಾನು ಚಿಕ್ಕವಳು. ನಿರ್ದೇಶಕರು ಹೇಳಿದಂತೆ ಮಾಡುತ್ತಿದೆ. ಏನೂ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಮೊದಲ ಚಿತ್ರವನ್ನೇ ಧೈರ್ಯವಾಗಿ ಮಾಡಿದ್ದೇನೆ. ಈಗ ದೊಡ್ಡವರಾಗಿದ್ದೇವೆ. ಎಲ್ಲವೂ ಅರ್ಥವಾಗುತ್ತದೆ. ಹೀಗಾಗಿ ನೂರಾರು ಆಯ್ಕೆಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ಯೋಚನೆಯೇ ನಮ್ಮಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗುತ್ತದೆ.
ಸರಿ, ಈ 8 ವರ್ಷಗಳಲ್ಲಿ ಯಾರು ನಿಮ್ಮನ್ನ ಭೇಟಿಯಾಗಿ ಕತೆ ಹೇಳಿರಲ್ಲ?
ಹೇಳಿದ್ದರು. ತುಂಬಾ ಕಡಿಮೆ ಮಂದಿ. ಯಾಕೆಂದರೆ ಮದುವೆ ಆಗಿದೆ ಮತ್ತೆ ಬರ್ತಾರೋ, ಸಿನಿಮಾಗಳಲ್ಲಿ ನಟಿಸುತ್ತಾರೋ ಇಲ್ಲವೋ ಅಂತ ಅವರಿಗೇ ಕನ್ಫ್ಯೂಸ್ ಇತ್ತು. ನಾಲ್ಕೈದು ಮಂದಿ ಬಂದು ಕೇಳಿದ್ದರು. ಆಗ ನನಗೆ ಫ್ಯಾಮಿಲಿ ಕಮಿಟ್‌ಮೆಂಟ್‌ಗಳು ಇದ್ದವು.
ಈಗ ಸಿನಿಮಾ ಒಪ್ಪಿದ್ದು ಹೇಗೆ?
ನಾನು ತುಂಬಾ ಹಿಂದೆಯೇ ಒಂದು ನಿರ್ಧಾರ ತೆಗೆದುಕೊಂಡಿದ್ದೆ. ಚಿತ್ರರಂಗದಲ್ಲಿ ಬೇಡಿಕೆಯಲ್ಲಿದ್ದಾಗಲೇ ನಾನು ಮದುವೆ ಆಗಬೇಕು ಅಂತ. ಅದರಂತೆ ಆದೆ. ಮತ್ತೆ ಚಿತ್ರರಂಗಕ್ಕೆ ಬಂದರೆ ಫ್ಯಾಮಿಲಿ ಕಮಿಟ್‌ಮೆಂಟ್ ಮುಗಿಸಿರಬೇಕು ಅಂತ. ಈಗ ಕೆರಿಯರ್ ಮತ್ತು ಕುಟುಂಬ ಎರಡೂ ನಿಭಾಯಿಸೋ ಶಕ್ತಿ ಇದೆ. ಹೀಗಾಗಿ ಈಗ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ.
ಪೀಕಬೂ ಅಂದರೇನು?
ನಾವು ಮಕ್ಕಳನ್ನು ಪ್ರೀತಿಯಿಂದ ಕರೆಯುವ ಹೆಸರು. ತುಂಬಾ ಫನ್ನಿ ಮತ್ತು ಹೊಸದಾಗಿರುವ ಹೆಸರು. ನನಗೆ ಮತ್ತು ಕತೆಗೆ ಈ ಹೆಸರು ಸೂಕ್ತವಾಗುತ್ತದೆ.
ಪೀಕಬೂ ಕತೆ ಏನು? ಯಾವ ಜಾನರ್ ಸಿನಿಮಾ?
ಮಂಜು ಸ್ವರಾಜ್ ನಿರ್ದೇಶನ, ಸುರೇಶ್ ಬಾಬು ಬಿ ಕ್ಯಾಮೆರಾ, ವೀರ್ ಸಮರ್ಥ್ ಹಾಗೂ ಶ್ರೀಧರ್ ಅವರ ಸಂಗೀತ, ಗಣೇಶ್ ಕೆಂಚಾಂಬಾ ನಿರ್ಮಾಣದ ಚಿತ್ರವಿದು. ಲೈಫು ಒಂದು ಕಣ್ಣಾಮುಚ್ಚಾಲೆ ಆಟದಂತೆ. ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ ಅವುಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಮುಂದಕ್ಕೆ ಹೋಗುವುದು ಹೇಗೆ ಎನ್ನುವ ಕತೆ ಈ ಚಿತ್ರದ್ದು. ಇಲ್ಲಿ ನನ್ನದು ತುಂಬಾ ಪಾಸಿಟೀವ್ ಆಗಿ ಯೋಚಿಸುವ ಹುಡುಗಿ ಪಾತ್ರ. ಇದು ಕನ್ನಡದ ಕಾದಂಬರಿವೊಂದರ ಆಧಾರಿತ ಚಿತ್ರ.