;Resize=(412,232))
‘ಪ್ರೇಮದ ಊರಲಿ’ ಯಶಸ್ಸು ನಿಮ್ಮ ಮನಸ್ಸಿನಲ್ಲಿ ಹುಟ್ಟಿಸಿದ ಮೊದಲ ಯೋಚನೆ ಏನು?
ನಟನಾಗಿ ನನಗೆ ಚಿತ್ರರಂಗದಲ್ಲಿ ಯಾವ ಸ್ಥಾನ, ಯಾವ ಜವಾಬ್ದಾರಿ ನಾನು ತಗೋಬೇಕಿತ್ತೋ ಅಂದುಕೊಳ್ಳುತ್ತಿದ್ನೋ ಕೊನೆಗೂ ಅದನ್ನು ‘ಪ್ರೇಮದ ಊರಲಿ’ ಸಿನಿಮಾ ಸಕ್ಸಸ್ ಕೊಟ್ಟಿತು.
‘ಪ್ರೇಮದ ಊರಲಿ’ ಬ್ರೇಕ್ ಕೊಟ್ಟ ಚಿತ್ರವೋ, ನಿಮ್ಮೊಳಗಿನ ನಟನನ್ನು ಪರಿಚಯಿಸಿದ ಸಿನಿಮಾನಾ?
ಎರಡೂ ಈ ಚಿತ್ರದಿಂದ ಆಗಿದೆ. ನಾನು ಈ ಹಿಂದೆ ನಾಲ್ಕೈದು ಚಿತ್ರಗಳಲ್ಲಿ ನಟಿಸಿದ್ದೇನೆ. ಆ ಸಿನಿಮಾಗಳಲ್ಲಿ ಜನ ನನ್ನ ನೋಡಿ ಹಾರೈಸುತ್ತಾ ಬಂದಿದ್ದಾರೆ. ಹಾಗೆ ಪ್ರೇಕ್ಷಕರ ಹಾರೈಕೆ ಪಡೆದುಕೊಳ್ಳುತ್ತಾ ‘ಪ್ರೇಮದ ಊರಲಿ’ ಚಿತ್ರದವರೆಗೂ ಬಂದಿರುವೆ.
‘ಹೊಸ ನಟ’ ಎಂದೇ ನೋಡುತ್ತಿದ್ದಾರಾ, ಅಥವಾ ‘ನಾಯಕ’ ಎಂದು ಗುರುತಿಸುವ ಹಂತಕ್ಕೆ ಬಂದಿದ್ದೀರಾ?
ನಾನು ಹೊಸ ನಟನೋ, ನಾಯಕನೋ ಅನ್ನೋದು ಪ್ರೇಕ್ಷಕರು ಹೇಳಬೇಕು. ಆದರೆ, ನನಗೆ ಪ್ರತಿ ಚಿತ್ರವೂ ಹೊಸದೆ. ಆದರೆ, ‘ಕನ್ನಡಕ್ಕೆ ಹೊಸ ಹೀರೋ ಬೇಕು ಗುರು’ ಎನ್ನುವವರಿಗೆ ನಾನು ನಾಯಕನೇ.
ಪ್ರತಿ ಚಿತ್ರದಲ್ಲಿ ನಾನು ಯಶಸ್ಸು ನಿರೀಕ್ಷೆ ಮಾಡುತ್ತಿದ್ದೆ. ಆದರೆ, ಈ ಚಿತ್ರದ ಬಿಡುಗಡೆ ದಿನ ಸಿಂಗಲ್ ಸ್ಕ್ರೀನ್ ಥಿಯೇಟರ್‌ನ ಮೆಟ್ಟಿಲುಗಳ ಮೇಲೆ ನಿಂತು, ನನ್ನ ಸಿನಿಮಾ ನೋಡಲು ಜನ ಇಲ್ಲಿ ನಿಲ್ಲುವಂತಾಗಲಿ ಎಂದು ಪ್ರಾರ್ಥಿಸಿದ್ದೆ. ನನ್ನ ಪ್ರಾರ್ಥನೆಯನ್ನು ಪ್ರೇಕ್ಷಕರು ದೊಡ್ಡದಾಗಿ ನಿಜವಾಗಿಸಿದ್ದಾರೆ. ಇಷ್ಟು ದೊಡ್ಡ ಸಕ್ಸಸ್ ನಾನು ನಿರೀಕ್ಷೆ ಮಾಡಿರಲಿಲ್ಲ.
ಚಿತ್ರ ನೋಡಿದ ನಂತರ ಪ್ರೇಕ್ಷಕರು, ಆಪ್ತರು, ಅಭಿಮಾನಿಗಳು ನಿಮಗೆ ಹೇಳಿದ್ದೇನು?
ಕೆಲವರು ಅವರ ಮೊಬೈಲ್‌ಗಳಲ್ಲಿ ನನ್ನ ಹೆಸರನ್ನು ‘ಹೀರೋ’ ಅಂತ ಸೇವ್ ಮಾಡಿಕೊಂಡಿದ್ದೇವೆಂದು ತೋರಿಸುತ್ತಿದ್ದಾರೆ. ಈ ಹಿಂದೆ ಜಸ್ಟ್ ‘ಶ್ರೀ’ ಅಂತ ಸೇವ್ ಮಾಡಿಕೊಂಡಿದ್ದವರು, ‘ನಮ್ಮ ನಮಸ್ಸಿನಲ್ಲಿ ನಿಮಗೆ ಜಾಗ ಕೊಟ್ಟಿದ್ದೇವೆ’ ಎಂದು ತೋರಿಸುತ್ತಿದ್ದಾರೆ.
ನಿಮ್ಮ ವೃತ್ತಿ ಜೀವನದಲ್ಲಿ ‘ಪ್ರೇಮದ ಊರಲಿ’ ಚಿತ್ರಕ್ಕೆ ಯಾವ ಸ್ಥಾನವಿದೆ?
ಅಗ್ರ ಸ್ಥಾನವಿದೆ. ಯಾವತ್ತಿಗೂ ಈ ಸಿನಿಮಾ ನಂಬರ್ 1 ಆಗಿರುತ್ತದೆ. ಯಾಕೆಂದರೆ ಈ ಸಿನಿಮಾ ನಂತರ ಶ್ರೀ, ಶ್ರೀ ಮಹದೇವ್, ಶ್ರೀ ರಾಮ್ ಯಾರು ಅಂತ ಹುಡುಕುತ್ತಿದ್ದಾರೆ.
ಈ ಚಿತ್ರದ ಸಂತೋಷ್ ಪಾತ್ರದಲ್ಲಿ ನಿಮ್ಮನ್ನು ಹೆಚ್ಚು ಆಕರ್ಷಿಸಿದ ಅಂಶ ಯಾವುದು?
ಸ್ಕ್ರೀನ್ ಮೇಲೆ ಬಿಲ್ಡಪ್, ಫೈಟ್‌ಗಳು ಇಲ್ಲದೆ ಪ್ರೇಕ್ಷಕರ ಮನಸ್ಸಿನಲ್ಲಿ ಹೀರೋ ಆಗುವ ಎಲ್ಲ ಲಕ್ಷಗಳು ಸಂತೋಷ್ ಪಾತ್ರಕ್ಕಿತ್ತು. ಅದೇ ನನ್ನ ಆಕರ್ಷಿಸಿದ್ದು.
ಈ ಪಾತ್ರಕ್ಕಾಗಿ ನಿಮ್ಮಲ್ಲಿ ನೀವು ಮಾಡಿಕೊಂಡ ವಿಶೇಷ ಬದಲಾವಣೆ ಏನು?
ನಾನು ರೈತನಾಗಲು ಹೊರಟಿದ್ದು. ಯಾಕೆಂದರೆ ನಾನು ಯಾವ ಆ್ಯಂಗಲ್‌ನಲ್ಲೂ ರೈತನ ರೀತಿ ಕಾಣಲ್ಲ. ಆದರೆ, ತೆರೆ ಮೇಲೆ ರೈತನ ಪಾತ್ರ ಮಾಡಬೇಕಿತ್ತು. ಅದಕ್ಕೆ ಪೂರ್ವ ತಯಾರಿ ಬೇಕಿತ್ತು. ಯಾಕೆಂದರೆ ಬೇರೆ ಪಾತ್ರಗಳಂತೆ ರೈತನ ಪಾತ್ರವನ್ನು ಇಮಿಟೇಟ್ ಮಾಡಕ್ಕಾಗಲ್ಲ. ಹಾಗೆ ಮಾಡಿದರೆ ರೈತ ಎನ್ನುವ ಹೆಸರಿಗೆ ಮೋಸ ಮಾಡಿದಂತೆ. ಹೀಗಾಗಿ ನಾನು ಹಳ್ಳಿಗೆ ಹೋಗಿ ಒಂದು ತಿಂಗಳು ವ್ಯವಸಾಯ ಮಾಡುತ್ತಾ, ಹಸು- ಎತ್ತುಗಳನ್ನು ಮೇಯಿಸುತ್ತಾ, ಉಳಿಮೆ ಮಾಡುತ್ತಾ ಪಕ್ಕಾ ರೈತನಾಗಿದ್ದೆ. ಅದಕ್ಕೆ ಸಂತೋಷ್ ಪಾತ್ರವು ತೆರೆ ಮೇಲೆ ಅಷ್ಟು ಆಪ್ತವಾಗಿ, ಮುಗ್ಧತೆಯಿಂದ ಮೂಡಿ ಬಂದಿರುವುದು.
‘ಈ ಒಂದು ದೃಶ್ಯ ಚೆನ್ನಾಗಿ ಬಂದರೆ ಸಾಕು, ಪ್ರೇಕ್ಷಕರು ನನ್ನ ಪಾತ್ರ ಒಪ್ಪಿಕೊಳ್ಳುತ್ತಾರೆ’ ಎಂದು ನಿಮಗೆ ಅನಿಸಿದ ದೃಶ್ಯ ಯಾವುದಾದರೂ ಇದೆಯೇ?
ಕತೆ ಕೇಳಿದಾಗ ಎಲ್ಲಾ ಸೀನ್, ಲೈನ್ ಮಹತ್ವ ಅನಿಸಿತು. ಸಂತೋಷ್ ಪಾತ್ರ ಹೋಗ್ತಾ ಹೋಗ್ತಾ ಜನರೇ ಅಪ್ಪಿಕೊಳ್ಳುತ್ತಾರೆ ಎನ್ನುವ ಅಂದಾಜು ಇತ್ತು. ಒಂದು ರೀತಿ ಎ.ಆರ್.ರೆಹಮಾನ್ ಹಾಡುಗಳನ್ನು ಕೇಳ್ತಾ ಕೇಳ್ತಾ ಮನಸೋಲುವಂತೆ.
ಪ್ರೇಮಕಥೆಗಳು ಅಪರಿಚಿತವಲ್ಲ. ‘ಪ್ರೇಮದ ಊರಲಿ’ ಕನೆಕ್ಟ್ ಆಗಲು ಕಾರಣವೇನೆಂದು ನೀವು ಭಾವಿಸುತ್ತೀರಿ?
ಇದು ಪ್ರೂರ್ ಡೈರೆಕ್ಟ್ ಪ್ರೆಸೆಂಟ್ ಕತೆ. ನಮ್ಮೆಲ್ಲರ ಬಹುದೊಡ್ಡ ಎಮೋಷನ್ ಎಂದರೆ ಲವ್. ಏನೇ ಜಗಳ ಆಡಿದರೂ ಮನಸ್ಸಿನ ಮೂಲೆಯಲ್ಲಿ ಪ್ರೀತಿ ಅನ್ನೋದು ಇರುತ್ತದೆ. ಈ ಚಿತ್ರದ ಹೃದಯ ಕೂಡ ಅದೇ. ಈ ಹಾರ್ಟ್ ಆಫ್ ಸೋಲ್ ಕಾರಣಕ್ಕೆ ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತಿದೆ.
ಆರಂಭದ ದಿನಗಳಲ್ಲಿ ನೀವು ಎದುರಿಸಿದ ದೊಡ್ಡ ಸವಾಲು, ಸಂಕಷ್ಟಗಳೇನು?
ಆರಂಭದ ದಿನಗಳ ನನ್ನ ಹೋರಾಟ ಸವಾಲು, ಸಂಕಷ್ಟಗಳು ಅಂತ ನಾನು ಭಾವಿಸಲ್ಲ. ಬಹುಶಃ ಆ ಸವಾಲುಗಳನ್ನು ನೋಡದಿದ್ದರೆ ಇವತ್ತಿನ ಸಕ್ಸಸ್ ಬೆಲೆ ಗೊತ್ತಾಗುತ್ತಿರಲಿಲ್ಲ. ನಾನು ಏನೂ ಅಲ್ಲ. ನಾನು ಗ್ರೇಟ್ ಅಲ್ಲ ಅಂದುಕೊಂಡೇ ಚಿತ್ರರಂಗಕ್ಕೆ ಬಂದವನು. ಹೀಗಾಗಿ ಯಾವ ಹಿನ್ನೆಲೆ ಇಲ್ಲದಿರುವವನಿಗೆ ಯಾವುದು ಸವಾಲು, ಕಷ್ಟ ಅನಿಸಲ್ಲ.
ಕನ್ನಡದ ಯಾವ ನಟನ ಸಿನಿಮಾಗಳನ್ನು ನೋಡಿ ‘ನಾನೂ ಹೀಗೆ ಮಾಡಬೇಕು’ ಎಂದುಕೊಳ್ಳುತ್ತೀರಿ?
ಡಾ ರಾಜ್‌ಕುಮಾರ್. ಹಾಗಂತ ನಾನು ಅವರಂತೆ ಆಗಲು ಸಾಧ್ಯವಿಲ್ಲ. ಆದರೆ ಅವರೆಂದರೆ ಪ್ರೀತಿ, ಅಭಿಮಾನ, ಪ್ರೇರಣೆ- ಸ್ಫೂರ್ತಿ ಎಲ್ಲವೂ ಹೌದು.
ಈ ಯಶಸ್ಸಿನ ಜೊತೆಗೆ ಟೀಕೆಗಳೂ ಬಂದಿದ್ದರೆ ಅವುಗಳನ್ನು ನೀವು ಹೇಗೆ ಸ್ವೀಕರಿಸುತ್ತೀರಿ?
ನನ್ನ ಬಗ್ಗೆ ನಾನೇ ಟೀಕೆ ಮಾಡಿಕೊಂಡು ನಾನೇ ನಗುತ್ತಿರುತ್ತೇನೆ. ಹೀಗಾಗಿ ಬೇರೆ ಟೀಕೆಗಳು ನನಗೆ ದೊಡ್ಡದು ಅನಿಸಲ್ಲ. ಯಾಕೆಂದರೆ ನಾನು ಗ್ರೇಟ್ ಅಲ್ಲ. ಪರ್‌ಫೆಕ್ಟು ಅಲ್ಲ. ಕಲಿಯುತ್ತಾ ಹೆಜ್ಜೆಗಳನ್ನು ಹಾಕುತ್ತಿದ್ದೇನೆ.
ಚಿತ್ರವನ್ನು ನೀವು ಮತ್ತೆ ನೋಡಿದಾಗ ‘ಈ ದೃಶ್ಯವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು’ ಎಂದು ಅನಿಸಿದೆಯೇ?
ಕ್ಲೈಮ್ಯಾಕ್ಸ್ ಸೀನ್.
ಮುಂದಿನ ಕಥೆ ಆಯ್ಕೆ ಮಾಡುವಾಗ ಯಾವ ಅಂಶಗಳಿಗೆ ಹೆಚ್ಚು ಆದ್ಯತೆ ನೀಡುತ್ತೀರಿ?
ಎಲ್ಲಾ ಅಂಶಗಳ ಮೇಲೆ ಗಮನ ಹರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಈಗ ನಿಜವಾಗಲೂ ಗೈಡ್ ಲೈನ್ಸ್.
ಸಿನಿಮಾ ಕ್ಷೇತ್ರಕ್ಕೆ ಬರದೇ ಇದ್ದಿದ್ದರೆ ಇಂದು ಏನಾಗಿರುತ್ತಿದ್ದಿರಿ?
ಬಹುಶಃ ಪತ್ರಕರ್ತನಾಗಿರುತ್ತಿದ್ದೆ. ಯಾಕೆಂದರೆ ಪತ್ರಿಕೆಗಳಲ್ಲಿ ಬರುತ್ತಿದ್ದ ಲೇಖನಗಳನ್ನು ಹೆಚ್ಚು ಓದುತ್ತಿದ್ದೆ. ಈ ಓದಿನ ಆಸಕ್ತಿ ನನ್ನ ಪತ್ರಕರ್ತನನ್ನಾಗಿ ಮಾಡುವ ಸಾಧ್ಯತೆಗಳಿದ್ದವು.
ನಿಮ್ಮ ಯಶಸ್ಸಿನಲ್ಲಿ ಕುಟುಂಬದ ಪಾತ್ರ ಎಷ್ಟು?
ನನ್ನ ತಂದೆ, ತಾಯಿ, ತಂಗಿ ಹೀಗೆ ನನ್ನ ಕುಟುಂಬದ ಪ್ರತಿಯೊಬ್ಬರು ನನ್ನ ಸಾಕಿದ್ದಾರೆ. ಮನೆಯ ಗಂಡು ಮಗನಾಗಿ ಏನನ್ನೂ ನಾನು ಮನೆಗೆ ಕೊಡುವ ಸ್ಥಿತಿಯಲ್ಲಿ ಇಲ್ಲವಲ್ಲ ಎನ್ನುವ ಗಿಲ್ಟ್‌ನಲ್ಲಿದ್ದಾಗಲೂ ಅವರು ನನಗೆ ಬೆನ್ನೆಲುಬಾಗಿದ್ದಾರೆ. ಮನೆಯವರ ಪ್ರೋತ್ಸಾಹ ಇಲ್ಲದೆ ಹೋಗಿದ್ದರೆ ಶ್ರೀ, ಶ್ರೀ ರಾಮ್, ಶ್ರೀ ಮಹದೇವ್... ಈ ಯಾವ ಹೆಸರು ಯಾರಿಗೂ ಗೊತ್ತಾಗುತ್ತಿರಲಿಲ್ಲ.