ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ನೆಲಮಂಗಲ ಸಮೀಪದ ಮೈಲನಹಳ್ಳಿಯಲ್ಲಿರುವ ನಿವಾಸದಲ್ಲಿ ಶುಕ್ರವಾರ ಸಂಜೆ 5ರ ಸುಮಾರಿಗೆ ಲೀಲಾವತಿ ಅವರ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿಸಿತ್ತು. ಪುತ್ರ, ನಟ ವಿನೋದ್ ರಾಜ್ ಅವರು ಬಿನ್ನಮಂಗಲ ಬಳಿಯ ಖಾಸಗಿ ಆಸ್ಪತ್ರೆಗೆ ತಮ್ಮ ತಾಯಿಯನ್ನು ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5.40ರ ವೇಳೆಯಲ್ಲಿ ನಿಧನರಾದರು.
ಕುಸಿದು ಬಿದ್ದ ವಿನೋದ್ ರಾಜ್:ಅಮ್ಮ ಲೀಲಾವತಿ ಅವರು ಮೃತಪಟ್ಟ ವಿಚಾರವನ್ನು ವೈದ್ಯರು ತಿಳಿಸುತ್ತಿದಂತೆ ಪುತ್ರ ವಿನೋದ್ ರಾಜ್ ಕುಸಿದು ಬಿದ್ದರು. ತಕ್ಷಣ ವೈದ್ಯರು ವಿನೋದ್ ಅವರನ್ನು ಆರೈಕೆ ಮಾಡಿದರು.
ನೆಲಮಂಗಲ ತಾಲೂಕಿನ ಮೈಲನಹಳ್ಳಿ ಗ್ರಾಮದ ನಿವಾಸಕ್ಕೆ ನಟಿ ಡಾ। ಎಂ.ಲೀಲಾವತಿ ಅವರ ಪಾರ್ಥಿವ ಶರೀರವನ್ನು ಡಿ.9ರಂದು ಶನಿವಾರ ನೆಲಮಂಗಲದಲ್ಲಿರುವ ಡಾ। ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 1938ರಲ್ಲಿ ಜನಿಸಿದ ಲೀಲಾವತಿ ಅವರು ಮೊದಲು ರಂಗಭೂಮಿಯ ಮೂಲಕ ಚಿತ್ರರಂಗ ಪ್ರವೇಶಿಸಿದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ತುಳು ಭಾಷೆಯಲ್ಲಿ ನಟಿ ಲೀಲಾವತಿ 600 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 400 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟ ಡಾ। ರಾಜ್‌ಕುಮಾರ್, ಡಾ। ವಿಷ್ಣುವರ್ಧನ್, ಡಾ। ಅಂಬರೀಷ್, ಉದಯ್‌ಕುಮಾರ್, ಕಲ್ಯಾಣ್‌ಕುಮಾರ್, ಶಿವಾಜಿ ಗಣೇಶನ್, ಎಂಜಿಆರ್, ರಜನಿಕಾಂತ್, ಕಮಲಹಾಸನ್, ಎನ್‌ಟಿಆರ್ ಸೇರಿದಂತೆ ಹಲವು ದಿಗ್ಗಜ ನಟರೊಂದಿಗೆ ಲೀಲಾವತಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಲೀಲಾವತಿ ಅವರು ಬಳಿಕ ತಾಯಿ ಪಾತ್ರದಲ್ಲಿ ಹೆಚ್ಚು ನಟಿಸಿದ್ದರು. ಲೀಲಾವತಿ ಅವರಿಗೆ ವಿನೋದ್ ರಾಜ್ ಒಬ್ಬನೇ ಪುತ್ರ. ಚೆನ್ನೈನಲ್ಲಿ ನೆಲೆಸಿದ್ದ ಲೀಲಾವತಿ ಅವರು ಬಳಿಕ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ತೋಟ ಖರೀದಿಸಿ ಅಲ್ಲಿಯೇ ಪುತ್ರನೊಂದಿಗೆ ನೆಲೆಸಿದ್ದರು.
ಡಾ। ರಾಜ್‌ಕುಮಾರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನಟಿ ಲೀಲಾವತಿ ಅವರು ಪಡೆದುಕೊಂಡಿದ್ದಾರೆ. ಅಲ್ಲದೆ ತುಮಕೂರು ವಿಶ್ವ ವಿದ್ಯಾನಿಲಯವು ಲೀಲಾವತಿ ಅವರ ನಟನೆಗೆ ಗೌರವ ಡಾಕ್ಟರೆಟ್ ನೀಡಿ ಗೌರವಿಸಿತ್ತು.ಗಣ್ಯರ ಸಂತಾಪ: ನಟಿ ಲೀಲಾವತಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಲವು ಸಚಿವರು, ಚಿತ್ರ ನಟರು, ಗಣ್ಯರು, ಸಾಹಿತಿಗಳು, ಸಿನಿಮಾ ತಾರೆಯರು, ನಿರ್ದೇಶಕರು ಕಂಬನಿ ಮಿಡಿದಿದ್ದಾರೆ.ಆಸ್ಪತ್ರೆಗೆ ಅಭಿಮಾನಿಗಳ ದೌಡು:
ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಸಕಲ ಸಿದ್ಧತೆ ಮಾಡಲಾಗಿದೆ. ಮೈದಾನದಲ್ಲಿ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆಯವರೆಗೂ ಅಭಿಮಾನಿಗಳು, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಧ್ಯಾಹ್ನದ ಬಳಿಕ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
--
ಲೀಲಮ್ಮ ನಮ್ಮನ್ನು ಬಿಟ್ಟು ಅಗಲಿದ್ದು ನೋವುಂಟು ಮಾಡಿದೆ. ಇತ್ತೀಚೆಗೆ ಅಮ್ಮನನ್ನು ಭೇಟಿ ಮಾಡಿ ಅರೋಗ್ಯ ವಿಚಾರಿಸಿದ್ದೆ. ಅವರ ಆತ್ಮಕ್ಕೆ ದೇವರು ಶಾಂತಿಯುಂಟು ಮಾಡಲಿ. ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ಪುತ್ರ ವಿನೋದ್‌ರಾಜ್ ಹಾಗೂ ನಾಡಿನ ಜನರಿಗೆ ದೇವರು ಕರುಣಿಸಲಿ.
ಲೀಲಾವತಿ ಸಿನಿಮಾದ ನಿಜವಾದ ಐಕಾನ್ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಸಿನಿಮಾದ ನಿಜವಾದ ಐಕಾನ್ ಅವರು. ಹಲವಾರು ಚಲನಚಿತ್ರಗಳಲ್ಲಿ ಬಹುಮುಖ ನಟನೆಯೊಂದಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಿದರು. ಅವರ ವೈವಿಧ್ಯಮಯ ಪಾತ್ರಗಳು ಮತ್ತು ಗಮನಾರ್ಹ ಪ್ರತಿಭೆ ಯಾವಾಗಲೂ ನೆನಪಿನಲ್ಲಿ ಇರಿಸಿಕೊಳ್ಳುವಂಥದ್ದು ಹಾಗೂ ಪ್ರಶಂಸಾರ್ಹವಾದದ್ದು. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.- ನರೇಂದ್ರ ಮೋದಿ, ಪ್ರಧಾನಿ
ಮನೋಜ್ಞ ಅಭಿನಯದಿಂದ ರಂಜಿಸಿದ್ದ ಹಿರಿಯ ನಟಿಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಅನಾರೋಗ್ಯದ ವಿಚಾರ ತಿಳಿದು ಕಳೆದ ವಾರವಷ್ಟೇ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ. ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನಂಬಿಕೆ ಹುಸಿಯಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ಸಿಗಲಿ.- ಸಿದ್ದರಾಮಯ್ಯ, ಮುಖ್ಯಮಂತ್ರಿ