ಕನ್ನಡಕ್ಕೆ ಹೊಸತನದ ಕತೆ ಕೊಟ್ಟ ಲ್ಯಾಂಡ್‌ಲಾರ್ಡ್‌

Published : Jan 28, 2026, 01:20 PM IST
Landlord Movie

ಸಾರಾಂಶ

ದುನಿಯಾ ವಿಜಯ್‌, ರಾಜ್‌ ಬಿ ಶೆಟ್ಟಿ, ರಚಿತಾ ರಾಮ್‌ ನಟಿಸಿ, ಜಡೇಶ್‌ ಕೆ ಹಂಪಿ ನಿರ್ದೇಶಿಸಿ, ಸತ್ಯಪ್ರಕಾಶ್‌ ಹಾಗೂ ಹೇಮಂತ್‌ ಗೌಡ ನಿರ್ಮಾಣದ ‘ಲ್ಯಾಂಡ್‌ಲಾರ್ಡ್‌’ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.

  ಸಿನಿವಾರ್ತೆ

ದುನಿಯಾ ವಿಜಯ್‌, ರಾಜ್‌ ಬಿ ಶೆಟ್ಟಿ, ರಚಿತಾ ರಾಮ್‌ ನಟಿಸಿ, ಜಡೇಶ್‌ ಕೆ ಹಂಪಿ ನಿರ್ದೇಶಿಸಿ, ಸತ್ಯಪ್ರಕಾಶ್‌ ಹಾಗೂ ಹೇಮಂತ್‌ ಗೌಡ ನಿರ್ಮಾಣದ ‘ಲ್ಯಾಂಡ್‌ಲಾರ್ಡ್‌’ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚರ್ಚೆಗಳನ್ನು ಹುಟ್ಟಿಸುವ ಜೊತೆಗೆ ಪ್ರೇಕ್ಷಕರನ್ನು ಸೆಳೆಯುವ ಮೂಲಕ ‘ಲ್ಯಾಂಡ್‌ಲಾರ್ಡ್‌’ ಈ ವರ್ಷದ ಮೊದಲ ಜನಮೆಚ್ಚಿದ ಸಿನಿಮಾ ಆಗಿರುವುದರ ಹಿಂದಿನ ಕಾರಣಗಳೇನು?

1. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸತನದ ಕತೆ. ಬೆಳ್ಳಿಪರದೆಯನ್ನು ಮುಟ್ಟಲು ಸಾಧ್ಯವಾಗದಿದ್ದ ಕತೆಯೊಂದನ್ನು ತುಂಬಾ ವರ್ಷಗಳ ನಂತರ ತೆರೆ ಮೇಲೆ ತರಲಾಗಿದೆ.

2. ಶೋಷಣೆಗೆ ಒಳಗಾದವರ ಜೀವನ, ಅವರ ಮಾನವೀಯ ಸಂಬಂಧಗಳು, ಪ್ರೀತಿ-ಪ್ರೇಮ, ಸ್ವಾಭಿಮಾನ, ಆಸ್ತಿ-ಅಂತಸ್ತಿಗಿಂತ ಹೆಚ್ಚಾಗಿ ಮನುಷ್ಯತ್ವಕ್ಕೆ ಬೆಲೆ ಕೊಡುವಂತಹ ದೃಶ್ಯಗಳಿವೆ.

3. ರಾಜ್‌ ಬಿ ಶೆಟ್ಟಿ ಅವರು ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡು, ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿರುವ ಪ್ರತಿಭೆ. ದುನಿಯಾ ವಿಜಯ್‌ ಅವರು ಕೂಡ ಅಷ್ಟೇ. ಈ ಇಬ್ಬರು ತೆರೆ ಮೇಲೆ ಮುಖಾಮುಖಿ ಆಗುವ ಹೈವೋಲ್ಟೇಜ್‌ ದೃಶ್ಯಗಳು ನೋಡುಗರಿಗೆ ಥ್ರಿಲ್ಲಿಂಗ್‌ ಅನುಭವ ನೀಡುತ್ತಿವೆ.

4. ರಾಜ್‌ ಬಿ ಶೆಟ್ಟಿ ಅವರ ‘ಧಣಿ’ ಹಾಗೂ ದುನಿಯಾ ವಿಜಯ್‌ ಅವರ ‘ರಾಚಯ್ಯ’ ಪಾತ್ರಗಳು ಜನ ಸಾಮಾನ್ಯರಿಗೂ ಹತ್ತಿರವಾಗುತ್ತಿವೆ. ಹೀಗಾಗಿ ಸಿನಿಮಾ ನೋಡಿದ ಮೇಲೆ ಇದೊಂದು ಸಿನಿಮಾ ಅಂತ ಭಾವಿಸದೆ ತಮ್ಮ ಹಳ್ಳಿಗಳಿಗೆ ಕನೆಕ್ಟ್‌ ಮಾಡಿಕೊಳ್ಳುತ್ತಿದ್ದಾರೆ.

5. ಎಲ್ಲಕ್ಕಿಂತ ಮುಖ್ಯವಾಗಿ ಯಾವುದನ್ನೂ ಅತಿರೇಕ ಮಾಡದೆ, ಯಾರನ್ನೂ ವೈಭವೀಕರಣ ಮಾಡದೆ, ಕಾಲ್ಪನಿಕತೆಗೆ ಹೆಚ್ಚು ಮೊರೆ ಹೋಗದೆ ವರ್ಗ ಸಂರ್ಘದ ಕತೆಯೊಂದು ಅತ್ಯಂತ ಪ್ರಾಮಾಣಿಕವಾಗಿ ಮತ್ತು ನೈಜಕವಾಗಿ ಇಲ್ಲಿ ಸಿನಿಮಾ ರೂಪ ಪಡೆದುಕೊಂಡಿದೆ.

ವಿಷಯಾಧರಿತ ಚರ್ಚೆ ಹುಟ್ಟು ಹಾಕಿದ ಸಿನಿಮಾ

6. ಕನ್ನಡ ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಾಧರಿತ ಚರ್ಚೆಗಳನ್ನು ಹುಟ್ಟು ಹಾಕಿರುವುದು ಇತ್ತೀಚೆನ ವರ್ಷಗಳಲ್ಲಿ ಇದೇ ಮೊದಲು.

7. ಸಂಪತ್ತಿಗೆ ಸವಾಲ್‌, ಗಿರಿಕನ್ಯೆ ಮುಂತಾದ ಚಿತ್ರಗಳ ಮೂಲಕ ಹೇಳಿದ ಉಳ್ಳವರ ವಿರುದ್ಧ ಇಲ್ಲದವರ ಸಂಘರ್ಷದ ಕತೆಗಳು ಇತ್ತೀಚಿನ ವರ್ಷಗಳಲ್ಲಿ ಮರೆಯಾಗಿದ್ದವು. ಆ ಕಾಲದ ಮಣ್ಣಿನ ಕತೆಯೊಂದು ಈ ಕಾಲದ ಸಿನಿಮಾ ಆಗಿ ಪ್ರೇಕ್ಷಕರ ಮುಂದೆ ಬಂದಿದೆ.

8. ಪಕ್ಕದ ರಾಜ್ಯಗಳಲ್ಲಿ ‘ಜೈ ಭೀಮ್‌’, ‘ಅಸುರನ್‌’, ‘ಪೆದ್ದಿ’, ‘ಉಪ್ಪೇನ’ ಮುಂತಾದ ಚಿತ್ರಗಳನ್ನು ನೋಡಿ ನಮ್ಮಲ್ಲೂ ಇಂಥ ಕತೆಗಳು ಯಾಕೆ ಬರಲ್ಲ ಎಂದುಕೊಳ್ಳುವ ಬಹುದೊಡ್ಡ ಪ್ರೇಕ್ಷಕ ವರ್ಗವನ್ನು ‘ಲ್ಯಾಂಡ್‌ಲಾರ್ಡ್‌’ ತನ್ನತ್ತ ಸೆಳೆಯುತ್ತಿದೆ. ತಮಿಳಿನಲ್ಲಿ ನಟ ಸೂರ್ಯ ಮಾಡಿದ ‘ಜೈ ಭೀಮ್‌’ ಮಾದರಿಯ ಸಿನಿಮಾ, ಕನ್ನಡದಲ್ಲಿ ದುನಿಯಾ ವಿಜಯ್‌ ಕೊಟ್ಟಿದ್ದಾರೆಂಬುದು ನೋಡುಗರ ಅಭಿಮತ.

9. ಕತೆಗೆ ಪೂರಕವಾಗಿ ನೆಲದ ಭಾಷೆಯಲ್ಲಿ ಸಂಭಾಷಣೆಗಳನ್ನು ಕಟ್ಟುವ ಮೂಲಕ ಮಾಸ್ತಿ, ಮಂಜು ಕೋಲಾರ್‌, ಶ್ರೀಕಾಂತ್‌ ಅವರು ‘ಲ್ಯಾಂಡ್‌ಲಾರ್ಡ್‌’ಗೆ ರೈಟಿಂಗ್‌ ಪವರ್‌ ದಕ್ಕಿಸಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಬರುವ ಸಂಭಾಷಣೆಗಳು ಸೋಷಿಯಲ್‌ ಮೀಡಿಯಾಗಳಲ್ಲೂ ಸದ್ದು ಮಾಡುತ್ತಿವೆ.

10. ಭೂಮಿಯ ಮೇಲಿನ ಹಕ್ಕು, ಹಸಿವು, ಗೋಮಾಳ ಜಮೀನು ಇತ್ಯಾದಿಗಳು ಯಾವುದೂ ಹೊಸದಲ್ಲ. ಈಗಲ್ಲೂ ಹಳ್ಳಿಗಳಲ್ಲಿ ಗೋಮಾಳ ಜಮೀನುಗಳದ್ದೇ ದೊಡ್ಡ ಸಮಸ್ಯೆ. ಇಂಥ ವಿಚಾರಗಳನ್ನು ಮಾತನಾಡುವ ಈ ಚಿತ್ರವು ಸಹಜವಾಗಿ ಎಲ್ಲರಿಗೂ ಹತ್ತಿರವಾಗುತ್ತಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಈ ಸಲದ ಚಿತ್ರೋತ್ಸವಕ್ಕೆ 2 ಲಕ್ಷ ಮಂದಿ ಬರುತ್ತಾರೆ: ಸಾಧು ಕೋಕಿಲ
ಬಿಗ್ ಬಾಸ್‌ನಲ್ಲಿ ₹50 ಲಕ್ಷ ಗೆದ್ದ ಗಿಲ್ಲಿಗೆ ಸಿಗೋದು ₹24 ಲಕ್ಷ ಅಷ್ಟೇ