ಕನ್ನಡಪ್ರಭ ಸಿನಿವಾರ್ತೆ
‘ನಾನು ಆಗ ದಿನಕ್ಕೆ ನಾಲ್ಕು, ಐದು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೆ. ಬೆಳಗ್ಗೆ ಒಂದು ಸಿನಿಮಾ, ಮಧ್ಯಾಹ್ನ ಒಂದು ಚಿತ್ರ, ಸಂಜೆ ಒಂದು ಸಿನಿಮಾ, ರಾತ್ರಿ ಮತ್ತೊಂದು ಸಿನಿಮಾ ಅಂತ ದಿನದ 24 ಗಂಟೆಯೂ ನಟನೆಯಲ್ಲಿ ಬ್ಯುಸಿ ಇದ್ದ ದಿನಗಳು ಅವು. ಆಗ ನನ್ನ ಮೂರು ಚಿತ್ರಗಳನ್ನು ನೋಡಿ ಮೆಚ್ಚಿಕೊಂಡವರು ಹಂಸಲೇಖ. ಒಂದೊಂದು ಸಿನಿಮಾ ನೋಡಿದಾಗಲೂ ನನಗೆ ಒಂದೊಂದು ಬಿರುದು ಕೊಟ್ಟರು. ಲೇಡಿ ಕಮಿಷನರ್ ಸಿನಿಮಾ ನೋಡಿ ಆ್ಯಕ್ಷನ್ ಕ್ವೀನ್, ರಾಣಿ ಮಹಾರಾಣಿ ಸಿನಿಮಾ ನೋಡಿ ಕನಸಿನ ರಾಣಿ, ಮತ್ತೊಂದು ಚಿತ್ರ ನೋಡಿ ಲೇಡಿ ಸೂಪರ್‌ಸ್ಟಾರ್ ಎನ್ನುವ ಬಿರುದುಗಳನ್ನು ಕೊಟ್ಟರು. ಹಂಸಲೇಖ ಅವರು ಕೊಟ್ಟ ಈ ಬಿರುದುಗಳು ನನ್ನ ಹೆಸರಿನ ಜತೆಗೆ ಈಗ ಪ್ರಯಾಣ ಮಾಡಿಕೊಂಡು ಬರುತ್ತಿವೆ. ಇದು ನನ್ನ ಬದುಕಿನ ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಮಾಲಾಶ್ರೀ.
ಮಾಲಾಶ್ರೀ ‘ಮಾರಕಾಸ್ತ್ರ’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿ ಹಂಸಲೇಖ ಅವರಿಗೆ ಕೃತಜ್ಞತೆ ಸಲ್ಲಿಸಿದರು.