ಏನ್‌ ಮಚಾ, ಟಗರು ಪುಟ್ಟಿನ ಮದ್ವೆ ಆಗ್ತಿದ್ಯಾ ಅಂದ್ರಂತೆ ಅರುಣ್‌ ಫ್ರೆಂಡ್ಸ್‌!

KannadaprabhaNewsNetwork |  
Published : Apr 26, 2024, 01:03 AM ISTUpdated : Apr 26, 2024, 05:29 AM IST
Manvitha harish

ಸಾರಾಂಶ

ಅರುಣ್‌ ಎಂಬ ಎಐ ಇಂಜಿನಿಯರ್ ಕೈ ಹಿಡಿಯಲಿರುವ ನಟಿ ಮಾನ್ವಿತಾ ಕಾಮತ್ ಮದ್ವೆ, ಲೈಫ್‌ ಬಗ್ಗೆ ಮಾತಾಡಿದ್ದಾರೆ.

- ಮದುವೆ ತಯಾರಿ ಜೋರಾಗಿಯೇ ನಡೆಯುತ್ತಿದೆ. ಅದ್ದೂರಿ ಮದುವೆಗಿಂತಲೂ ಸಾಂಪ್ರದಾಯಿಕ ರೀತಿಯಲ್ಲಿ ಆಪ್ತವಾಗಿ ಸಪ್ತಪದಿ ತುಳಿಯಲಿದ್ದೇವೆ.

- ನಾನು ಈ ಕ್ಷಣದಲ್ಲಿ ಬದುಕುವ ಹುಡುಗಿ. ಅರುಣ್‌ ಅವರಂಥಾ ಪಾರ್ಟನರ್‌ ಸಿಕ್ಕಿದ ಮೇಲೆ ಭವಿಷ್ಯದ ಬಗ್ಗೆ ಹೆಚ್ಚು ಯೋಚನೆಗಳಿಲ್ಲ. ಚೆನ್ನಾಗಿಯೇ ಇರುತ್ತದೆ ಎಂಬ ನಂಬಿಕೆ ಇದೆ.

- ನನ್ನ ಕೈ ಹಿಡಿಯಲಿರುವ ಅರುಣ್‌ ಟೆಕಿ. ಎಐ ಇಂಜಿನಿಯರ್‌. ಬಹಳ ಕೂಲ್‌ ಆಗಿರುವ, ಸಂಕೋಚದ ಹುಡುಗ. ಸಿನಿಮಾ ಮಂದಿಯಲ್ಲಿ ಆತನಿಗೆ ಭೇಟಿ ಮಾಡಬೇಕು ಅಂತ ಇದ್ದದ್ದು ಉಪೇಂದ್ರ ಅವರನ್ನು ಮಾತ್ರ. ಆಹ್ವಾನ ಪತ್ರಿಕೆ ನೀಡುವ ನೆವದಲ್ಲಿ ಉಪ್ಪಿ ಸರ್‌ ಮೀಟ್‌ ಮಾಡಿದಾಗ ‘ಯುಐ - ಎಐ’ ಮಾತುಕತೆ ಜೋರಾಗಿಯೇ ನಡೆಯಿತು. ಬಹಳ ಹೊತ್ತು ಇಬ್ಬರೂ ಕೂತು ಇಂಟರೆಸ್ಟಿಂಗ್‌ ಆಗಿ ಹರಟಿದರು.

- ಅರುಣ್‌ 2005ರವರೆಗೂ ಬರೀ ಕನ್ನಡ ಸಿನಿಮಾ ಮಾತ್ರ ನೋಡಿದ್ದಂತೆ. ಆಮೇಲೆ ಕಾಲೇಜ್‌ ಡೇಸ್‌ನಲ್ಲಿ ವರ್ಲ್ಡ್‌ ಸಿನಿಮಾ ನೋಡಲಾರಂಭಿಸಿದ್ದು. ನನ್ನ ಪರಿಚಯ ಆಗುವವರೆಗೂ ನನ್ನ ಸಿನಿಮಾವನ್ನು ನೋಡಿರಲಿಲ್ಲ. ಈಗ ನನ್ನ ಎಲ್ಲ ಸಿನಿಮಾ ನೋಡಿದ್ದಾರೆ.

- ನಾನು ಸದಾ ಮಲ್ಟಿಟಾಸ್ಕಿಂಗ್‌ ಮಾಡುವ ಹೈಪರ್‌ ಆ್ಯಕ್ಟಿವ್‌ ಹುಡುಗಿ. ನನಗಿಂತಲೂ ಬ್ರೈನಿ ಹುಡುಗ ಅರುಣ್‌.

- ಅರುಣ್‌ ನನ್ನಂತೆಯೇ ಫಿಟ್‌ನೆಸ್‌ ಫ್ರೀಕ್‌. ಅವರು ಸಿಕ್ಸ್‌ಪ್ಯಾಕ್‌ ಮಾಡಿದ್ದರು. ಇಬ್ಬರೂ ಡಯೆಟ್‌ ಅನ್ನು ಫಾಲೋ ಸ್ಟ್ರಿಕ್ಟ್‌ ಆಗಿ ಫಾಲೋ ಮಾಡ್ತೀವಿ. ಈ ಮದುವೆ ಗಡಿಬಿಡಿಯಲ್ಲಿ ಎಲ್ಲಾ ಬಿಟ್ಟು ಹೋಗಿದೆ.

- ಇನ್ನು ನಮ್ಮ ಭೇಟಿಯೇ ಇಂಟರೆಸ್ಟಿಂಗ್‌. ನನ್ನ ಅಮ್ಮ ಜಿಎಸ್‌ಬಿ ಮ್ಯಾಟ್ರಿಮೋನಿಯಲ್ಲಿ ನನ್ನ ಹೆಸರು ಸೇರಿಸಿದ್ದರು. ಈ ವಿಷಯ ನನಗೆ ಗೊತ್ತಾದಾಗ ಅಮ್ಮನ ಜೊತೆ ಜಗಳ ಆಡಿದ್ದೆ. ‘ಅಮ್ಮಾ, ನಾನು ಆ್ಯಕ್ಟರ್‌. ಮ್ಯಾಟ್ರಿಮೊನಿ ವೈಬ್‌ಸೈಟ್‌ನಲ್ಲೆಲ್ಲ ನನ್ನ ಡೀಟೇಲ್ಸ್‌ ಯಾಕೆ ಹಾಕಿದ್ದೀಯಾ’ ಅಂತ. ‘ನಿನಗೆ ಮದುವೆ ಮಾಡಬೇಕಿರುವುದು ನನ್ನ ಜವಾಬ್ದಾರಿ. ನಿನಗೆ ಇದೆಲ್ಲ ಗೊತ್ತಾಗೋದಿಲ್ಲ ಸುಮ್ಮನಿರು’ ಎಂದು ಬಾಯಿ ಮುಚ್ಚಿಸಿದ್ದರು.

- ಅಲ್ಲಿ ನನ್ನ ವಿವರವನ್ನು ಅರುಣ್‌ ನೋಡಿದ್ದಾರೆ. ಅವರಿಗೆ ನನ್ನ ಪ್ರೊಫೈಲ್‌ ಇಷ್ಟವಾಗಿದೆ. ಇದಾದ ಸ್ವಲ್ಪ ಸಮಯಕ್ಕೆ ನನ್ನ ತಾಯಿ ತೀರಿಕೊಂಡರು. ಅವರಿಗೆ ನನ್ನನ್ನು ಸಂಪರ್ಕಿಸುವುದು ಸಾಧ್ಯವಾಗಿರಲಿಲ್ಲ. ಆದರೆ ಆಮೇಲೆ ನನ್ನ ಫ್ರೆಂಡ್‌ ಒಬ್ಬಳು ನನ್ನ ಕಾಲೆಳೆಯಲು ಶಾದಿ.ಕಾಮ್‌ನಲ್ಲಿ ನನ್ನ ಪ್ರೊಫೈಲ್‌ ಹಾಕಿದ್ದಳು. ಅದನ್ನು ನೋಡಿ ಅರುಣ್‌ ತಾಯಿ ನನ್ನನ್ನು ಸಂಪರ್ಕಿಸಿದ್ದಾರೆ.

- ಅರುಣ್‌ ಮನೆಗೆ ಮೊದಲ ಸಲ ಹೋದಾಗ ಅರುಣ್ ತಾಯಿ ತನ್ನ ಮಗನ ಸಾಹಸಗಳನ್ನೆಲ್ಲ ಹೇಳಿದ್ದರು. ಅರುಣ್‌ ಬೈಕ್‌ನಲ್ಲೇ ಇಂಡಿಯಾ ಟೂರ್‌ ಮಾಡಿದ್ದಾರೆ. ಕ್ಲೀನ್‌ ಶೇವ್‌ ಮಾಡ್ಕೊಂಡ ಹೊರಟ ಆಸಾಮಿ ವಾಪಾಸ್‌ ಬಂದಾಗ ಗಡ್ಡ ಮೀಸೆ ಎಲ್ಲ ಬೆಳೆದು ಗುರುತೇ ಸಿಗದ ಹಾಗಾಗಿದ್ದರು. ಅವರ ಈ ಗುಣಗಳೆಲ್ಲ ನನಗಿಷ್ಟವಾಯಿತು.

- ಅರುಣ್‌ ನನ್ನನ್ನು ಮದುವೆ ಆಗುತ್ತಿರುವ ಬಗ್ಗೆ ಅವರ ಸ್ನೇಹಿತರಲ್ಲಿ ಹೇಳಿದಾಗ ಎಲ್ಲರಿಗೂ ಆಶ್ಚರ್ಯ. ‘ಏನ್‌ ಮಚ್ಚಾ ಟಗರು ಪುಟ್ಟಿನ ಮದ್ವೆ ಆಗ್ತಿದ್ದೀಯಾ’ ಅಂತೆಲ್ಲ ಕೇಳ್ತಿದ್ದರಂತೆ.

- ಉಳಿದಂತೆ ಅರುಣ್‌ ಮೈಸೂರಿನವರು. ನಮ್ಮಿಬ್ಬರಿಗೂ ಇಬ್ಬರ ಪ್ರೊಫೆಶನ್‌ ಬಗೆಗೂ ಗೌರವ, ಆಸಕ್ತಿ ಇದೆ. ಮಾತನಾಡಲು ಸಮಾನ ಆಸಕ್ತಿಯ ವಿಷಯಗಳಿವೆ. ಬದುಕನ್ನು ಪ್ರೀತಿಸುತ್ತಾ ಮುಂದಿನ ದಿನಗಳನ್ನು ಜೊತೆಯಾಗಿ ಕಳೆಯಲು ತೀರ್ಮಾನಿಸಿದ್ದೇವೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

45 ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಭಾರಿ ಮೆಚ್ಚುಗೆ
ಮಾರ್ಕ್‌ ಬಜೆಟ್‌ ಮ್ಯಾಕ್ಸ್‌ಗಿಂತ 3 ಪಟ್ಟು ದೊಡ್ಡದು: ಸುದೀಪ್‌