ಹೊಸಬರ ಭರವಸೆ ಹುಟ್ಟಿಸುವ ಸಿನಿಮಾ

KannadaprabhaNewsNetwork |  
Published : Apr 20, 2024, 01:07 AM ISTUpdated : Apr 20, 2024, 10:03 AM IST
ಓ2 | Kannada Prabha

ಸಾರಾಂಶ

ಒಂದು ಸೊಗಸಾದ ಅನುಭವವನ್ನಂತೂ ಸಿನಿಮಾ ಕೊಡುತ್ತದೆ. ಆದರೆ ಹೀಗೆ ಮೂರು ಮುಖ್ಯ ಕಥೆಗಳನ್ನು ಹೇಳಲು ಹೊರಟಾಗ ಅತ್ತ ಮೆಡಿಕಲ್‌ ಸಂಶೋಧನೆಯ ಬಗ್ಗೆಯ ಆಳದ ಒಳನೋಟ ಸಿಗಲ್ಲ, ಪ್ರೇಮಕ್ಕೂ ನ್ಯಾಯ ಸಿಗಲ್ಲ, ಆತ್ಮದ ಕಥೆಯೂ ಸೊರಗುತ್ತದೆ. ತೀವ್ರ ಅನುಭವವನ್ನು ಕಾತರಿಸುವವರಿಗೆ ಕೊಂಚ ನಿರಾಸೆಯಾಗುತ್ತದೆ.

ಓ2

ತಾರಾಗಣ: ಆಶಿಕಾ ರಂಗನಾಥ್‌, ರಾಘವ ನಾಯಕ್‌, ಪ್ರವೀಣ್ ತೇಜ್‌ನಿರ್ದೇಶನ: ಪ್ರಶಾಂತ್‌ ರಾಜೇಂದ್ರ, ರಾಘವ ನಾಯಕ್‌

ರೇಟಿಂಗ್‌: 3.5

ಪ್ರಿಯಾ ಕೆರ್ವಾಶೆ

ಮೆಡಿಕಲ್‌ ಥ್ರಿಲ್ಲರ್‌, ಪ್ರೇಮಕಥೆ ಹಾಗೂ ಸ್ಪಿರಿಟ್‌ ಅಥವಾ ಆತ್ಮದ ವಿಚಾರ ಈ ಮೂರು ಅಂಶಗಳನ್ನು ಹದವಾಗಿ ಬ್ಲೆಂಡ್ ಮಾಡಿ ತಯಾರಿಸಲಾದ ಸಿನಿಮಾ ‘ಓ2’. ಇದರಲ್ಲಿ ಗಮನ ಸೆಳೆಯುವ ಅಂಶಗಳೆಂದರೆ ಹೊಸ ಬಗೆಯ ಕಥಾವಸ್ತು, ನಿರೂಪಣೆಯಲ್ಲಿರುವ ತಾಜಾತನ ಮತ್ತು ನಟನೆ. ಸುಧಾರಿಸಬಹುದಿತ್ತು ಅಂತ ಅನಿಸುವುದು ಚಿತ್ರಕಥೆ.

ಡಾ. ಶ್ರದ್ಧಾ ನಾಯಕ್‌ ಜೀನಿಯಸ್‌ ಹೃದ್ರೋಗ ತಜ್ಞೆ. ಬಾಲ್ಯದಲ್ಲಿ ಹೃದಯಾಘಾತದಿಂದ ತೀರಿಕೊಂಡ ಅಪ್ಪ, ಸಾವಿನ ಬಗೆಗಿನ ಹಲವು ಪ್ರಶ್ನೆಗಳು ಅವಳನ್ನು ಹೊಸ ಅನ್ವೇಷಣೆಯತ್ತ ಪ್ರಚೋದಿಸುತ್ತವೆ. ಆ ಸಂಶೋಧನೆಯೇ ‘ಓ2’. ವಾಸ್ತವದಲ್ಲೂ ಇದು ಸದ್ಯ ವಿಶ್ವಮಟ್ಟದಲ್ಲಿ ನಡೆಯುತ್ತಿರುವ ಮಹತ್ವದ ಸಂಶೋಧನೆ.

ಇನ್ನೊಂದು ಎಳೆಯಲ್ಲಿ ಓಶೋ ಎಂಬ ಆರ್‌ಜೆ ಜೊತೆಗಿನ ಆಪ್ತತೆ, ಶ್ರದ್ಧಾ ಬದುಕಿನ ಬಹುದೊಡ್ಡ ಕೊರತೆಯಾಗಿದ್ದ ಪ್ರೀತಿಯನ್ನು ಮರಳಿ ನೀಡುತ್ತದೆ. ಮಗದೊಂದು ಎಳೆಯಲ್ಲಿ ಆತ್ಮ ಅನ್ನುವುದು ನಿಜಕ್ಕೂ ಇದೆಯಾ ಎಂಬ ವಿಚಾರ. ಕತೆ ಒಂದು ಲೇಯರ್‌ನಿಂದ ಇನ್ನೊಂದು ಲೇಯರ್‌ಗೆ ಶಿಫ್ಟ್‌ ಆಗುವುದರಲ್ಲಿ ಸಹಜತೆ ತರಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಚಿತ್ರಕಥೆಯಲ್ಲಿ ಸುಧಾರಣೆಗೆ ಅವಕಾಶವಿದೆ.

ಒಂದು ಸೊಗಸಾದ ಅನುಭವವನ್ನಂತೂ ಸಿನಿಮಾ ಕೊಡುತ್ತದೆ. ಆದರೆ ಹೀಗೆ ಮೂರು ಮುಖ್ಯ ಕಥೆಗಳನ್ನು ಹೇಳಲು ಹೊರಟಾಗ ಅತ್ತ ಮೆಡಿಕಲ್‌ ಸಂಶೋಧನೆಯ ಬಗ್ಗೆಯ ಆಳದ ಒಳನೋಟ ಸಿಗಲ್ಲ, ಪ್ರೇಮಕ್ಕೂ ನ್ಯಾಯ ಸಿಗಲ್ಲ, ಆತ್ಮದ ಕಥೆಯೂ ಸೊರಗುತ್ತದೆ. ತೀವ್ರ ಅನುಭವವನ್ನು ಕಾತರಿಸುವವರಿಗೆ ಕೊಂಚ ನಿರಾಸೆಯಾಗುತ್ತದೆ.

ಸಹಜ ನಟನೆಯ ಮೂಲಕ ಆಶಿಕಾ ಗಮನ ಸೆಳೆಯುತ್ತಾರೆ. ಹೆಚ್ಚು ಮನಸ್ಸಲ್ಲುಳಿಯುವುದು ಓಶೋ ಪಾತ್ರಧಾರಿ, ಈ ಸಿನಿಮಾದ ನಿರ್ದೇಶಕರಲ್ಲೊಬ್ಬರಾದ ರಾಘವ ನಾಯಕ್‌. ಕನ್ನಡಕ್ಕೊಬ್ಬ ಭರವಸೆಯ ನಾಯಕನಾಗಬಹುದು ಎಂಬ ನಿರೀಕ್ಷೆ ಹುಟ್ಟಿಸುತ್ತಾರೆ. ವಿವಾನ್‌ ಹಿನ್ನೆಲೆ ಸಂಗೀತ, ಹಾಡುಗಳಿಗೆ ಕಥೆಯ ಮೂಡ್‌ಗೆ ಕೊಂಡೊಯ್ಯುವ ಶಕ್ತಿ ಇದೆ. ಒಟ್ಟಿನಲ್ಲಿ ಕನ್ನಡದಲ್ಲಿ ಹೊಸಬರ ಭರವಸೆ ಮೂಡಿಸುವ ಚಿತ್ರ ಓ2.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌