ಗೋವಾ ಫಿಲ್ಮ್‌ಫೆಸ್ಟ್‌ ; ರಿಷಬ್ ಗೆ ಅತ್ಯುತ್ತಮ ನಟ ಪ್ರಶಸ್ತಿ

Published : Nov 29, 2026, 11:01 AM IST
Rishab Shetty

ಸಾರಾಂಶ

ಗೋವಾದಲ್ಲಿ ನಡೆದ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ‘ಕಾಂತಾರ ಚಾಪ್ಟರ್ 1’ ಚಿತ್ರದ ಅಭಿನಯಕ್ಕಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಅತ್ಯುತ್ತಮ ನಟ’ (ರಜತ ಮಯೂರ) ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪಣಜಿ (ಗೋವಾ): ಗೋವಾದಲ್ಲಿ ನಡೆದ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ‘ಕಾಂತಾರ ಚಾಪ್ಟರ್ 1’ ಚಿತ್ರದ ಅಭಿನಯಕ್ಕಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ‘ಅತ್ಯುತ್ತಮ ನಟ’ (ರಜತ ಮಯೂರ) ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಯೊಂದಿಗೆ 15 ಲಕ್ಷ ರೂಪಾಯಿ ನಗದು ಬಹುಮಾನ

ಖ್ಯಾತ ನಿರ್ದೇಶಕ ಆನಂದ್ ಎಲ್. ರೈ ನೇತೃತ್ವದ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದ ತೀರ್ಪುಗಾರರ ಮಂಡಳಿಯು ರಿಷಬ್ ಶೆಟ್ಟಿ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಪ್ರಶಸ್ತಿಯೊಂದಿಗೆ 15 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ರಜತ ಮಯೂರ ಫಲಕವನ್ನು ನೀಡಿ ಗೌರವಿಸಲಾಯಿತು. ಇದಲ್ಲದೆ, ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ‘ಜ್ಯೂರಿಗಳ ವಿಶೇಷ ಉಲ್ಲೇಖ’ ಗೌರವವೂ ಲಭಿಸಿದೆ. ಈ ಸಿನಿಮಾ ಚಿತ್ರೋತ್ಸವದ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು.

ಇದೇ ವೇಳೆ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಟಿಯಾಗೊ ಗೆಡೆಸ್ ನಿರ್ದೇಶನದ ‘ಅಕ್ವಿ’ ಚಿತ್ರವು ಅತ್ಯುತ್ತಮ ಚಿತ್ರಕ್ಕಾಗಿ ನೀಡುವ ‘ಸ್ವರ್ಣ ಮಯೂರ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಚಿತ್ರಕ್ಕೆ 51 ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಿದೆ.

‘ಮೆಲ್ಟ್‌ಡೌನ್’ ಚಿತ್ರದ ಅಭಿನಯಕ್ಕಾಗಿ ಮಾಯಾ ಅರುಕ್ ಅತ್ಯುತ್ತಮ ನಟಿ

‘ಮೆಲ್ಟ್‌ಡೌನ್’ ಚಿತ್ರದ ಅಭಿನಯಕ್ಕಾಗಿ ಮಾಯಾ ಅರುಕ್ ಅತ್ಯುತ್ತಮ ನಟಿ (ರಜತ ಮಯೂರ) ಪ್ರಶಸ್ತಿ ಪಡೆದರು. ಜರ್ಮನ್ ಚಿತ್ರ ‘ವಿಸಿಟೇಶನ್’ ನಿರ್ದೇಶನಕ್ಕಾಗಿ ವೋಲ್ಕರ್ ಷ್ಲೋಂಡಾರ್ಫ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾದರೆ, ಅರ್ಜೆಂಟೀನಾದ ‘ದಿ ರಿವರ್ ಟ್ರೈನ್’ ಚಿತ್ರಕ್ಕೆ ವಿಶೇಷ ಜ್ಯೂರಿ ಪ್ರಶಸ್ತಿ ಲಭಿಸಿದೆ. ಅಂತಾರಾಷ್ಟ್ರೀಯ ಚೊಚ್ಛಲ ನಿರ್ದೇಶಕ ಪ್ರಶಸ್ತಿಯನ್ನು ‘ದಿ ಗೋಲ್ಡನ್ ಏಜ್’ ಚಿತ್ರಕ್ಕಾಗಿ ವೆರೋಜೆ ತುವಾ ಪಡೆದುಕೊಂಡರೆ, ಭಾರತೀಯ ವಿಭಾಗದ ಅತ್ಯುತ್ತಮ ಚೊಚ್ಛಲ ನಿರ್ದೇಶಕ ಪ್ರಶಸ್ತಿ ಹಿಂದಿಯ ‘ಹನುಮಾನ್ ಅಂಶ್’ ಚಿತ್ರದ ನಿರ್ದೇಶಕ ಡಾ. ವಿಶಾಲ್ ಚತುರ್ವೇದಿ ಅವರಿಗೆ ಸಂದಿದೆ. ಇನ್ನು ಟರ್ಕಿಶ್ ಚಿತ್ರ ‘ರೆಮಾ’ ಐಸಿಎಫ್‌ಟಿ-ಯುನೆಸ್ಕೋ ಗಾಂಧಿ ಪದಕಕ್ಕೆ ಪಾತ್ರವಾಗಿದ್ದು, ಓಟಿಟಿ ವಿಭಾಗದಲ್ಲಿ ‘ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ’ ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು, ‘ಈ ಬಾರಿಯ ಉತ್ಸವ ಐತಿಹಾಸಿಕ ಯಶಸ್ಸು ಕಂಡಿದೆ. ‘ಮೇಕ್ ಇನ್ ಗೋವಾ, ಮೇಕ್ ಫಾರ್ ದಿ ವರ್ಲ್ಡ್’ ಧ್ಯೇಯದೊಂದಿಗೆ ಗೋವಾವನ್ನು ಸಿನಿಮಾ ನಿರ್ಮಾಣ, ಪೋಸ್ಟ್-ಪ್ರೊಡಕ್ಷನ್ ಮತ್ತು ಎಐ ಆಧಾರಿತ ಚಿತ್ರ ನಿರ್ಮಾಣದ ಜಾಗತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತೇವೆ’ ಎಂದು ಅವರು ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ‘ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ ಅತ್ಯಂತ ಗೌರವಾನ್ವಿತ ವೇದಿಕೆಯಾಗಿದೆ. ಸಿನಿಮಾ ಮೇಕರ್‌ಗಳಿಗೆ ಕಲಿಯುವುದಕ್ಕೆ ಒಳ್ಳೆಯ ಅವಕಾಶ. ನಾನೂ ಬೆಂಗಳೂರು ಚಿತ್ರೋತ್ಸವಕ್ಕೆ ಹೋಗುತ್ತಿದ್ದೆ. ನಾನು ಸಿನಿಮಾ ಮಾಡಿದ ನನ್ನ ಹಳ್ಳಿಯ ಕಥೆ ನನ್ನನ್ನು ಇಲ್ಲಿಯವರೆಗೆ ಕರೆ ತಂದಿದೆ’ ಎಂದು ಹೇಳಿದರು.

ಚಿತ್ರೋತ್ಸವದ ನಿರ್ದೇಶಕ ಅಶುತೋಷ್ ಗೋವಾರಿಕರ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಚಂಚಲ್ ಕುಮಾರ್, ಎನ್‌ಎಫ್‌ಡಿಸಿ ಅಧ್ಯಕ್ಷ ಜಿ. ಕೃಷ್ಣಕುಮಾರ್ ಇದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ರಜನಿಗೆ ವಿಲನ್‌ ಆಗುವಾಸೆ: ಕಾರ್ತಿಕ್ ಸುಬ್ಬರಾಜ್
ನನ್ನ ಚಿತ್ರ ಜೀವನದಲ್ಲಿ ನನ್ನನ್ನು ಪ್ರಭಾವಿಸಿದ್ದು ಯಶ್‌: ಚಿಕ್ಕಣ್ಣ