ಚಿತ್ರರಂಗ ಉಳಿಸಲು’ ಆ.14ಕ್ಕೆ ಬೆಂಗ್ಳೂರಲ್ಲಿ ಸರ್ಪಶಾಂತಿ ಹೋಮ : ರಾಕ್‌ಲೈನ್‌ ವೆಂಕಟೇಶ್‌

ಸಾರಾಂಶ

ಸದ್ಯ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಇದೇ ಆಗಸ್ಟ್ 14ರಂದು ಕಲಾವಿದರ ಸಂಘದಲ್ಲಿ ಸುಬ್ರಹ್ಮಣ್ಯ ಸರ್ಪ ಶಾಂತಿ ಹೋಮ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ರಾಕ್‌ಲೈನ್‌ ವೆಂಕಟೇಶ್‌ ತಿಳಿಸಿದ್ದಾರೆ.

ಬೆಂಗಳೂರು :  ಸದ್ಯ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಇದೇ ಆಗಸ್ಟ್ 14ರಂದು ಕಲಾವಿದರ ಸಂಘದಲ್ಲಿ ಸುಬ್ರಹ್ಮಣ್ಯ ಸರ್ಪ ಶಾಂತಿ ಹೋಮ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ರಾಕ್‌ಲೈನ್‌ ವೆಂಕಟೇಶ್‌ ತಿಳಿಸಿದ್ದಾರೆ.

ಭಾನುವಾರ ಕಲಾವಿದರ ಸಂಘದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ನಂತರ ಚಿತ್ರರಂಗದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಎದುರಿಸಲು ಇಂಥದ್ದೊಂದು ಪೂಜೆ ಮಾಡಲು ಯೋಚನೆ ಮಾಡಲಾಗಿತ್ತು. ಆದರೆ, ಕಾಲ ಕೂಡಿ ಬರಲಿಲ್ಲ. ಕೋವಿಡ್‌ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವುಗಳು ಉಂಟಾಗಿವೆ. ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡವರು ಅಂತ ಯಾರೂ ಇಲ್ಲ. ಹೀಗಾಗಿ ನಾವು ದೇವರ ಮೊರೆ ಹೋಗುತ್ತಿದ್ದೇವೆ. ಆ ನಿಟ್ಟಿನಲ್ಲಿ ಕಲಾವಿದರ ಸಂಘದಲ್ಲಿ ಹೋಮ ನಡೆಸಲು ಉದ್ದೇಶಿಸಲಾಗಿದೆ. ಈ ಪೂಜೆಯನ್ನು ಚಿತ್ರರಂಗದ ಎಲ್ಲರೂ ಸೇರಿ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಒಂದು ತಿಂಗಳ ಹಿಂದೆ ದೊಡ್ಡಣ್ಣ ಅವರು ನಾವು ಒಂದು ಪೂಜೆ ಯಾಕೆ ಮಾಡಿಸಬಾರದು ಎಂದು ಕೇಳಿದರು. ಹೀಗಾಗಿ ಆಗಸ್ಟ್‌ 14ರಂದು ಒಳ್ಳೆಯ ದಿನ. ಅಂದು ಚಿತ್ರರಂಗದ ಉಳಿವಿಗಾಗಿ ಹಾಗೂ ಏಳಿಗೆಗಾಗಿ ಹೋಮ ಮಾಡಿಸುತ್ತಿದ್ದೇವೆ. ಬೆಳಿಗ್ಗೆ 8 ಗಂಟೆಗೆ ಸಂಕಲ್ಪದ ನಂತರ ಗಣಪತಿ ಹೋಮ, ಮೃತ್ಯುಂಜಯ ಹೋಮ ಹಾಗೂ ಸರ್ಪ ಶಾಂತಿ ಪೂಜೆ ನಡೆಯಲಿದೆ. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಹಿರಿಯ ನಟ ದೊಡ್ಡಣ್ಣ ಮಾತನಾಡಿ, ‘ಕನ್ನಡ ಚಿತ್ರರಂಗ ಒಂದು ಕುಟುಂಬ ಇದ್ದಂತೆ. ಡಾ.ರಾಜ್‌ಕುಮಾರ್‌ ಅವರೂ ಸಹ ಇದನ್ನೇ ಹೇಳುತ್ತಿದ್ದರು. ಈ ಪೂಜಾ ಕಾರ್ಯಕ್ಕೆ ಎಲ್ಲರನ್ನೂ ಕರೆದಿದ್ದೇವೆ’ ಎಂದು ತಿಳಿಸಿದರು.

ದರ್ಶನ್‌ಗಾಗಿ ಈ ಹೋಮ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರು ಜೈಲು ಸೇರಿದ್ದಾರೆ. ಹೀಗಾಗಿ ಈಗ ಕಲಾವಿದರ ಸಂಘದಿಂದ ಅವರಿಗಾಗಿ ಹೋಮ ಮಾಡಲಾಗುತ್ತಿದೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಾಕ್‌ಲೈನ್‌ ವೆಂಕಟೇಶ್‌, ‘ಈ ಪೂಜೆ ದರ್ಶನ್‌ ಅವರಿಗಾಗಿ ಖಂಡಿತ ಅಲ್ಲ. ಅವರಿಗಾಗಿ ಪೂಜೆ ಮಾಡೋದಿದ್ದರೆ ನಾನು ವೈಯಕ್ತಿಕವಾಗಿ ನನ್ನ ಮನೆಯಲ್ಲಿ ಮಾಡುತ್ತಿದ್ದೆ. ಇದು ಚಿತ್ರರಂಗದ ಒಳತಿಗಾಗಿ ಸಂಘದಿಂದ ನಡೆಯುತ್ತಿರುವ ಪೂಜೆ’ ಎಂದರು.

Share this article