ಸಿನಿವಾರ್ತೆ
‘ಪರಮ್ ಅವರನ್ನು ನಾನು ವಿಷನರಿ ಗುಣ ಕಂಡಿದ್ದೆ. ಅವರು ಇಷ್ಟೊಂದು ಸೊಗಸಾಗಿ ಬರೆಯಬಲ್ಲರು ಅಂತ ಈ ಸಿನಿಮಾ ಕತೆ ಕೇಳಿಯೇ ಗೊತ್ತಾಗಿದ್ದು. ಕತೆ ಕೇಳಿ ಬಂದ ತಕ್ಷಣವೇ ನನಗೆ ಎಲ್ಲೆಲ್ಲೂ ಕೋಟಿ ಕಾಣತೊಡಗಿದ. ಈ ಕೋಟಿ ನಮ್ಮ ನಿಮ್ಮಂತಹ ಮಧ್ಯ ವರ್ಗದ ಕುಟುಂಬದ ಹುಡುಗನ ಕತೆ. ನನಗೆ ಮನಸಿಗೆ ಹತ್ತಿರವಾದ, ಇಷ್ಟವಾದ ಕತೆ’.
- ಹೀಗೆ ಹೇಳಿದ್ದು ಡಾಲಿ ಧನಂಜಯ್. ಪರಮ್ ನಿರ್ದೇಶನದ ‘ಕೋಟಿ’ ಸಿನಿಮಾದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ ಧನಂಜಯ್, ‘ಒಬ್ಬ ನಟನಿಗೆ ಒಳ್ಳೆಯ ರೈಟಿಂಗ್ ಉಂಟು ಮಾಡುವಷ್ಟು ಎಕ್ಸೈಟ್‌ಮೆಂಟ್ ಬೇರೆ ಯಾವುದೂ ಮಾಡಲ್ಲ. ಇದು ಯಾವ ರೆಫರೆನ್ಸ್ ಇಲ್ಲದ ಸಿನಿಮಾ. ತುಂಬಾ ಒಳ್ಳೆಯ ಫಿಲಾಸಫಿ ಸಾರುವ ಸಿನಿಮಾ’ ಎಂದರು.
ಸಿನಿಮಾ ಪತ್ರಕರ್ತನಾಗಿದ್ದ, ಅನಂತರ ಕಲರ್ಸ್ ಕನ್ನಡದ ಮುಖ್ಯಸ್ಥರಾಗಿದ್ದ ಪರಮ್ ಈಗ ಜಿಯೋ ಸ್ಟುಡಿಯೋಸ್ ಕನ್ನಡದ ಮುಖ್ಯಸ್ಥರಾಗಿದ್ದುಕೊಂಡು ತಮ್ಮ ಸಿನಿಮಾ ನಿರ್ದೇಶಿಸುವ ಕನಸು ಈಡೇರಿಸಿಕೊಂಡಿದ್ದಾರೆ. ಆ ಕುರಿತು ಅವರು, ‘ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ನನಗೆ ಆತ್ಮವಿಶ್ವಾಸ ಬಂದ ಮೇಲೆಯೇ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ನಾನು ಪತ್ರಕರ್ತನಾಗಿದ್ದಾಗ, ಕಿರುತೆರೆಯಲ್ಲಿದ್ದಾಗ ಸಿನಿಮಾದವರನ್ನು ಮಾತಿನ ಮೂಲಕ ನೋಯಿಸಿದ್ದೆ ಅಂತ ನಾನು ಸಿನಿಮಾ ಮಾಡುವಾಗ ಅರ್ಥವಾಯಿತು. ಸಿನಿಮಾ ಮಾಡುವುದು ಮಜವಾದ ಸಂಕೀರ್ಣ ಪ್ರಕ್ರಿಯೆ. ಕೋಟಿ ನಿಮ್ಮನ್ನು ನಿರಾಸೆ ಮಾಡದು ಎಂಬುದು ನನ್ನ ಭರವಸೆ’ ಎಂದರು.
ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿರುವ ‘ಕೋಟಿ’ ಟೀಸರ್ ಬಹುಮೆಚ್ಚುಗೆಯನ್ನು ಪಡೆದುಕೊಂಡಿದೆ. ಕಾರ್ಯಕ್ರಮದಲ್ಲಿ ನಾಯಕ ನಟಿ ಮೋಕ್ಷಾ ಕುಶಾಲ, ಕಲಾವಿದರಾದ ರಮೇಶ್ ಇಂದಿರಾ, ಪೃಥ್ವಿ ಶಾಮನೂರು, ಸರ್ದಾರ್ ಸತ್ಯ ಇದ್ದರು.