ಭಾರತೀಯರ ಕನಸನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದೇವೆ : ಯಶ್‌

Published : Jul 20, 2026, 01:40 PM IST
Yash

ಸಾರಾಂಶ

ಯಶ್‌, ರಣಬೀರ್‌ ಕಪೂರ್‌ ಸಾಯಿಪಲ್ಲವಿ, ಸನ್ನಿ ಡಿಯೋಲ್‌, ರಾಕುಲ್‌ಪ್ರೀತ್ ಸಿಂಗ್‌ ಮುಂತಾದವರ ನಟನೆಯ ವಿಶ್ವದ ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್‌ ಪ್ರದರ್ಶನಗೊಳ್ಳುವ ಮೂಲಕ ಮೊಟ್ಟ ಮೊದಲ ಪ್ಯಾನ್‌ ಇಂಡಿಯಾ ಕಾರ್ಯಕ್ರಮಕ್ಕೆ ಚಿತ್ರತಂಡ ಸಾಕ್ಷಿ ಆಯಿತು.

 ಸಿನಿವಾರ್ತೆ

ಯಶ್‌, ರಣಬೀರ್‌ ಕಪೂರ್‌ ಸಾಯಿಪಲ್ಲವಿ, ಸನ್ನಿ ಡಿಯೋಲ್‌, ರಾಕುಲ್‌ಪ್ರೀತ್ ಸಿಂಗ್‌ ಮುಂತಾದವರ ನಟನೆಯ ವಿಶ್ವದ ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್‌ ಪ್ರದರ್ಶನಗೊಳ್ಳುವ ಮೂಲಕ ಮೊಟ್ಟ ಮೊದಲ ಪ್ಯಾನ್‌ ಇಂಡಿಯಾ ಕಾರ್ಯಕ್ರಮಕ್ಕೆ ಚಿತ್ರತಂಡ ಸಾಕ್ಷಿ ಆಯಿತು. ದೆಹಲಿಯ ಭಾರತ್‌ ಮಂಟಪಂನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು, ಕೇರ‍ಳ, ಮುಂಬೈ, ದೆಹಲಿ, ಆಂಧ್ರ-ತೆಲಂಗಾಣ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳು, ಆಯ್ದ ಗಣ್ಯರಿಗೆ ಮಾತ್ರ ‘ರಾಮಾಯಾಣ’ ಚಿತ್ರದ 3ಡಿ ಟ್ರೇಲರ್‌ ಪ್ರದರ್ಶನ ಮಾಡಲಾಯಿತು.

ಜುಲೈ 24ರಂದು ಅಮೆರಿಕಾದಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಇದೇ ಟ್ರೇಲರ್‌ ಬಿಡುಗಡೆ ಆಗಲಿದ್ದು, ಆ ನಂತರ ಟ್ರೇಲರ್‌ ಅನ್ನು ಎಲ್ಲರೂ ನೋಡಬಹುದು.

3 ನಿಮಿಷದ ಟ್ರೇಲರ್‌ನಲ್ಲಿ ರಾವಣನಾಗಿ ಯಶ್‌ ಅವರ ಆ್ಯಕ್ಷನ್‌ ಪ್ಯಾಕ್‌, ರಾಮನ ಪಾತ್ರಧಾರಿ ರಣಬೀರ್‌ ಕಪೂರ್‌ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಾಣ ಬಿಡುವ ದೃಶ್ಯ, ಅಯೋಧ್ಯೆ ಬಿಟ್ಟು ಹೊರಡುವ ರಾಮ- ಸೀತೆಯ ದೃಶ್ಯ, ಕುಂಭಕರ್ಣನ ಪ್ರವೇಶ, ಯುದ್ಧದ ಸನ್ನಿವೇಶ, ಘರ್ಜಿಸುವ ಸಿಂಹವನ್ನೇ ಘರ್ಜಿಸಿ ಸದ್ದಗಡಿಸುವ ಯಶ್‌, ವಿಎಫ್‌ಎಕ್ಸ್‌, ಅತ್ಯಂತ ಸಹಜವಾಗಿ ಕಾಣಿಸಿಕೊಳ್ಳುವ ಸೀತೆಯ ಪಾತ್ರಧಾರಿ ಸಾಯಿಪಲ್ಲವಿ, ಹನುಮನಾಗಿ ಬರುವ ಸನ್ನಿ ಡಿಯೋಲ್‌ ಪಾತ್ರಗಳ ಜೊತೆಗೆ ತಾಂತ್ರಿಕವಾಗಿ ವಿಎಫ್‌ಎಕ್ಸ್‌, ಹಿನ್ನೆಲೆ ಸಂಗೀತ ಸೇರಿ ಕೆಲವೇ ನಿಮಿಷಗಳ ‘ರಾಮಾಯಣ’ ಚಿತ್ರದ ಟ್ರೇಲರ್‌ ದೃಶ್ಯ ವೈಭವ ಕಟ್ಟಿಕೊಟ್ಟಿದೆ.

ಪ್ರಥಮ್‌ ಸಂಕಲ್ಪ್‌ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮದ ಕೊನೆಯಲ್ಲಿ ಸರ್ಪ್ರೈಸ್‌ ಆಗಿ ಬಂದ ನಟ ಯಶ್‌ ಅವರು ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಶುರು ಮಾಡಿ, ‘ತೆರೆ ಮೇಲೆ ನೋಡುತ್ತಿರುವ ಈ ರಿಜಲ್ಟ್‌ನ ಕ್ರೆಡಿಟ್ಟು ನಿರ್ಮಾಪಕ ನಮೀತ್‌ ಮಲ್ಹೋತ್ರಾ ಅವರಿಗೆ ಸೇರಬೇಕು. ಅವರು ಕರೆದು ನನಗೆ ಪಾತ್ರ ಕೊಟ್ಟರು, ನನಗೆ ಹಿಂದಿ ಕಲಿಯಲು ಅವಕಾಶ ಸಿಕ್ಕಿತು. ‘ರಾಮಾಯಣ’ ಸಿನಿಮಾ ಆಗಬೇಕೆಂಬುದು ಭಾರತೀಯರ ಕನಸು. ಈ ಕನಸನ್ನು ನಾವು ಗ್ಲೋಬಲ್‌ ಪ್ಲಾಟ್‌ಫಾರಂನಲ್ಲಿ ಪರಿಚಯಿಸುತ್ತಿದ್ದೇನೆ. ರಣಬೀರ್‌ ಕಪೂರ್‌, ಸಾಯಿ ಪಲ್ಲವಿ ಅವರು ಗ್ರೇಟ್‌, ಅದ್ಭುತ ನಟನೆ. ಅವರು ಪಾತ್ರಗಳಿಗೆ ಶರಣಾಗಿದ್ದಾರೆ’ ಎಂದರು.

ನಿರ್ಮಾಪಕ ನಮೀತ್‌ ಮಲ್ಹೋತ್ರಾ ಮಾತನಾಡಿ, ‘ನಾವು ರಾಮಾಯಣವನ್ನು ಸಿನಿಮಾ ಮಾಡಿ, ಇಡೀ ವಿಶ್ವಕ್ಕೆ ತೋರಿಸಲು ಸಂಕಲ್ಪ ಮಾಡಿದೇವು. ಇದು ಮೂರು ವ್ಯಕ್ತಿಗಳಿಂದ ಸಾಧ್ಯವಾಯಿತು. ಆ ಮೂವರಲ್ಲಿ ನನ್ನ ಫ್ರೆಂಡ್‌ ಯಶ್‌ ಕೂಡ ಒಬ್ಬರು. ನಟನೆ ಜೊತೆಗೆ ನಿರ್ಮಾಣದಲ್ಲೂ ಪಾಲುದಾರರಾಗುವ ಮೂಲಕ ನಮಗೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಹಾಲಿವುಡ್‌ಗೆ ಇಂಡಿಯನ್‌ ಚಿತ್ರರಂಗಕ್ಕೆ ಪ್ರವೇಶಿಸಬೇಕೆಂದು ಯೋಚಿಸಿ ವಿಎಫ್‌ಎಕ್ಸ್‌ ಸಂಸ್ಥೆ ಶುರು ಮಾಡಿ ಆಸ್ಕರ್‌ ಪ್ರಶಸ್ತಿ ಪಡೆದುಕೊಂಡೆವು. ಈಗ ಭಾರತೀಯರ ನೆಲದ ಕತೆಯನ್ನು ವಿಶ್ವಮಟ್ಟದಲ್ಲಿ ಹೇಳುತ್ತಿದ್ದೇವೆ. ಮೂವರು ಮಹಾತ್ಮರು ಬರೆದಿರುವ ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಇಷ್ಟು ದೊಡ್ಡ ಕತೆಯಲ್ಲಿ 5 ಪಾತ್ರಗಳನ್ನು ಮಾತ್ರ ಆಧರಿಸಿ ‘ರಾಮಾಯಣ’ ಚಿತ್ರ ಮಾಡಲು ಸಾಧ್ಯ. ಈ ಐದೂ ಮಂದಿಯೂ ಹೀರೋಗಳೇ. ಪ್ರತಿ ಭಾರತೀಯನ ಮನಸ್ಸಿನಲ್ಲಿ ರಾಮಾಯಣ ನೆಲೆಯೂರಬೇಕು’ ಎಂದರು. ಮಹರಾಜ ದಶರಥನ ಪಾತ್ರಧಾರಿ ಅರುಣ್ ಗೋವಿಲ್, ವಿವೇಕ್‌ ಒಬೆರಾಯ್‌, ರಾಕುಲ್‌ ಪ್ರೀತ್‌ ಸಿಂಗ್‌, ಬಾಬಾ ರಾಮ್ ದೇವ್‌ ಗುರೂಜಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದು, ಚಿತ್ರದ ಬಗ್ಗೆ ಮಾತನಾಡಿದರು.

ಕಲಾವಿದರಿಗೆ ಇಂಥ ಪಾತ್ರಗಳು ಸಿಗೋದು ಸುಲಭ ಅಲ್ಲ. ನಾನು ಸೀತಾ ಮಾತೆಯ ಪಾತ್ರವನ್ನು ನಾನಾಗಿಯೇ ಆರಿಸಿಕೊಂಡೆ ಎಂದು ನಾನು ಭಾವಿಸುವುದಿಲ್ಲ. ಈ ಪಾತ್ರವನ್ನು ಮಾಡಲು ನನಗೆ ಆಶೀರ್ವಾದ ದಕ್ಕಿದೆ. ಇದು ನಾವು ಹುಡುಕಿಕೊಂಡು ಹೋಗುವ ಅಥವಾ ಹೀಗೆಯೇ ನಟಿಸಬೇಕು ಎಂದು ಮೊದಲೇ ಬರೆದಿಡುವ ಪಾತ್ರವಲ್ಲ ಇದು. ನಾನು ಶೂಟಿಂಗ್‌ ಸಮಯದಲ್ಲಿ ಧ್ಯಾನದಲ್ಲಿ ಕುಳಿತು, ‘ಸೀತಾ ಮಾತೆ, ನೀನೇ ನನ್ನ ಮೂಲಕ ನಟಿಸು. ನನ್ನಿಂದ ಏನನ್ನು ನಿರೀಕ್ಷಿಸುತ್ತೀಯೋ ಅದು ಈ ಚಿತ್ರಕ್ಕೆ ಸಿಗಲಿ’ ಎಂದು ಪ್ರಾರ್ಥಿಸುತ್ತಿದ್ದೆ.

- ಸಾಯಿ ಪಲ್ಲವಿ

ರಾಮ ಹಾಗೂ ಸೀತೆ ಪಾತ್ರಗಳಿಗೆ ರಣಬೀರ್‌ ಕಪೂರ್‌, ಸಾಯಿ ಪಲ್ಲವಿಯೇ ನನ್ನ ಮೊದಲ ಆಯ್ಕೆ ಆಗಿತ್ತು. ನಾನು ರಣಬೀರ್‌ ಕಣ್ಣಲ್ಲಿ ರಾಮ, ಸಾಯಿ ಪಲ್ಲವಿ ಕಣ್ಣಲ್ಲಿ ಸೀತೆಯನ್ನು ಕಂಡೆ. ಸಿನಿಮಾ ನೋಡುವಾಗ ರಣಬೀರ್‌, ಸಾಯಿ ಪಲ್ಲವಿ ಬದಲಿಗೆ ರಾಮ, ಸೀತೆ ಕಾಣುತ್ತಾರೆ.

- ನಿತೇಶ್‌ ತಿವಾರಿ, ನಿರ್ದೇಶಕ

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಹೀರೋಗಳೇ, ಕ್ಯಾರವಾನ್ ಬಿಟ್ಟು ಅಚೆ ಬನ್ನಿ, ಸಿನಿಮಾ ನಿರ್ಮಿಸಿ : ನಿರ್ಮಾಪಕ ರಮೇಶ್ ಯಾದವ್‌
ದೊಡ್ಡ ನಿರ್ಮಾಪಕರಿಂದ ಕನ್ನಡ ಚಿತ್ರರಂಗಕ್ಕೆ ಲಾಭವಿಲ್ಲ: ನೆನಪಿರಲಿ ಪ್ರೇಮ್‌