ಹೊಸ ಹೊಸ ಸಾಧನೆಗಳ ಮೂಲಕ ಸುದ್ದಿಯಲ್ಲಿರುವ ಇಸ್ರೋ ಇದೀಗ ಮತ್ತೊಂದು ಕ್ರಾಂತಿ : ಅಂತರಿಕ್ಷದಲ್ಲಿ ಜೀವಾಂಕುರ!

KannadaprabhaNewsNetwork |  
Published : Jan 05, 2025, 01:30 AM ISTUpdated : Jan 05, 2025, 06:25 AM IST
ಇಸ್ರೋ | Kannada Prabha

ಸಾರಾಂಶ

ಹೊಸ ಹೊಸ ಸಾಧನೆಗಳ ಮೂಲಕ ಸುದ್ದಿಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮತ್ತೊಂದು ಕ್ರಾಂತಿ ಮಾಡಿದೆ. ಇದೇ ಮೊದಲ ಬಾರಿಗೆ ಭಾರತದ ವತಿಯಿಂದ ಬಾಹ್ಯಾಕಾಶದಲ್ಲಿ ಜೀವ ಅರಳಿಸುವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.

ನವದೆಹಲಿ: ಹೊಸ ಹೊಸ ಸಾಧನೆಗಳ ಮೂಲಕ ಸುದ್ದಿಯಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮತ್ತೊಂದು ಕ್ರಾಂತಿ ಮಾಡಿದೆ. ಇದೇ ಮೊದಲ ಬಾರಿಗೆ ಭಾರತದ ವತಿಯಿಂದ ಬಾಹ್ಯಾಕಾಶದಲ್ಲಿ ಜೀವ ಅರಳಿಸುವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.

ಡಿ.30ರಂದು ಇಸ್ರೋ ಹಾರಿಬಿಟ್ಟಿದ್ದ ಸ್ಪೇಡೆಕ್ಸ್‌ ನೌಕೆಯಲ್ಲಿ ಅಳವಡಿಸಿದ್ದ ಉಪಕರಣವೊಂದರಲ್ಲಿ ಇಡಲಾಗಿದ್ದ ಅಲಸಂದೆ ಬೀಜಗಳು ಇದೀಗ ಮೊಳಕೆಯೊಡೆದಿವೆ. ಈ ಹಿನ್ನೆಲೆಯಲ್ಲಿ ‘ಬಾಹ್ಯಾಕಾಶದಲ್ಲಿ ಜೀವ ಮೊಳಕೆಯೊಡೆದಿದೆ’ ಎಂದು ಇಸ್ರೋ ಘೋಷಿಸಿದೆ. ಈ ಸಾಧನೆಗೆ ವಿಜ್ಞಾನಿಗಳ ಸಮುದಾಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಈ ಮೂಲಕ ಭವಿಷ್ಯದಲ್ಲಿ ವಿಜ್ಞಾನಿಗಳಿಗೆ ಆಗಸದಲ್ಲೇ ಅಗತ್ಯ ಆಹಾರ ವಸ್ತುಗಳನ್ನು ಬೆಳೆಯುವ ಪ್ರಯತ್ನದಲ್ಲಿ ಒಂದು ಯಶಸ್ವಿ ಹೆಜ್ಜೆ ಇಟ್ಟಿದೆ. ಇದೀಗ ಮೊಳಕೆಯೊಡೆದಿರುವ ಬೀಜಗಳು ಮುಂದಿನ 2-3 ದಿನಗಳಲ್ಲಿ ಎಲೆಗಳಾಗಿ ಅರಳುವ ವಿಶ್ವಾಸವನ್ನು ಇಸ್ರೋ ವ್ಯಕ್ತಪಡಿಸಿದೆ.

ಏನಿದು ಪ್ರಯೋಗ?:

ಗುರುತ್ವಾಕರ್ಷಣಾ ಬಲವಿಲ್ಲದ ಬಾಹ್ಯಾಕಾಶದಲ್ಲಿ ಸಸಿಗಳು ಹೇಗೆ ಬೆಳೆಯುತ್ತವೆ, ಬೀಜ ಮೊಳಕೆಯೊಡೆದು, 2 ಎಲೆಗಳ ಹಂತದವರೆಗೆ ಅವು ಹೇಗೆ ಸುಸ್ಥಿರವಾಗಿರುತ್ತದೆ ಎಂಬುದನ್ನು ತಿಳಿಯಲು ಇಸ್ರೋ ಈ ಪ್ರಯೋಗ ನಡೆಸಿತ್ತು. ಈ ಪ್ರಯೋಗದ ಭಾಗವಾಗಿ 8 ಅಲಸಂದೆ ಬೀಜಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿತ್ತು. ಅವುಗಳೀಗ ಮೊಳಕೆಯೊಡೆದಿವೆ.

ಪ್ರಯೋಗ ನಡೆದಿದ್ದು ಎಲ್ಲಿ?:

ಡಿ.30ರಂದು ಇಸ್ರೋ ಪಿಎಸ್‌ಎಲ್‌ವಿ - ಸಿ60 ರಾಕೆಟ್‌ ಮೂಲಕ ‘ಸ್ಪೇಡೆಕ್ಸ್‌’ ಉಪಗ್ರಹ ಉಡ್ಡಯನ ಮಾಡಿತ್ತು. ಈ ರಾಕೆಟ್‌ನ ಕಡೆಯ ಭಾಗವು ತನ್ನೊಂದಿಗೆ ಪೊಯಂ-4 (ಪಿಎಸ್‌-4 ಆರ್ಬಿಟಲ್‌ ಎಕ್ಸಪೆರಿಮೆಂಟ್‌ ಮಾಡ್ಯೂಲ್‌ ಅಥವಾ ಭಾರತೀಯ ಬಾಹ್ಯಾಕಾಶ ಲ್ಯಾಬ್‌) ಹೊತ್ತೊಯ್ದಿತ್ತು. ಈ ಪೊಯಂ ವಿವಿಧ ಉಪಕರಣಗಳನ್ನು ತನ್ನ ಒಡಲಲ್ಲಿ ಹೊಂದಿದ್ದು, ಅದರ ಮೂಲಕ ಒಟ್ಟು 24 ಪ್ರಯೋಗ ನಡೆಸಲು ಇಸ್ರೋ ಉದ್ದೇಶಿಸಿದೆ. ಈ ಪೈಕಿ ಕ್ರಾಪ್ಸ್‌ (ಕಾಂಪ್ಯಾಕ್ಟ್‌ ರಿಸರ್ಚ್‌ ಮಾಡ್ಯೂಲ್‌ ಫಾರ್‌ ಆರ್ಬಿಟಲ್‌ ಪ್ಲಾಂಟ್‌ ಸ್ಟಡೀಸ್‌) ಕೂಡಾ ಒಂದು. ಈ ರಾಕೆಟ್‌ ಭೂಮಿಯಿಂದ 350 ಕಿ.ಮೀ ಎತ್ತರಪ್ರದೇಶದಲ್ಲಿ ಸದ್ಯ ಸಂಚರಿಸುತ್ತಿದೆ.

ಪ್ರಯೋಗ ಹೇಗೆ?:

ಈ ಪ್ರಯೋಗಕ್ಕಾಗಿ ವಿಕ್ರಂ ಸಾರಾಬಾಯ್‌ ಬಾಹ್ಯಾಕಾಶ ಕೇಂದ್ರವು, ಬಾಕ್ಸ್‌ ರೀತಿಯ ವಿಶೇಷ ಘಟಕವೊಂದನ್ನು ತಯಾರಿಸಿದೆ. ಇದರಲ್ಲಿ ಉಷ್ಣಾಂಶ ಸೇರಿದಂತೆ ವಾತಾವರಣ ನಿಯಂತ್ರಣದ ವ್ಯವಸ್ಥೆ ಇದೆ. ಅದರೊಳಗೆ 8 ಅಲಸಂದೆ ಬೀಜಗಳನ್ನು ಇಟ್ಟು ಪ್ರಯೋಗ ನಡೆಸಲಾಗಿದೆ. ಇಂಥ ವ್ಯವಸ್ಥೆಯಲ್ಲಿ ಸಸ್ಯಗಳು ಹೇಗೆ ಬೆಳವಣಿಗೆ ಹೊಂದುತ್ತವೆ? ಬಾಹ್ಯಾಕಾಶದಲ್ಲಿ ಎದುರಾಗಬಹುದಾದ ಸನ್ನಿವೇಶಗಳು ಏನೇನು? ಅಂಥ ಸಂಭವನೀಯ ವ್ಯತಿರಿಕ್ತ ಸನ್ನಿವೇಶ ಎದುರಾದರೆ ಆಗ ಅವುಗಳ ಬೆಳವಣಿಗೆಯಲ್ಲಿ ಏನೇನು ಬದಲಾವಣೆ ಕಂಡುಬರುತ್ತವೆ? ಎಂಬುದನ್ನು ಈ ಪ್ರಯೋಗದ ಮೂಲಕ ಅಧ್ಯಯನ ಮಾಡಲು ಇಸ್ರೋ ಉದ್ದೇಶಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ