ಪ್ರವಾದಿ ಮುಹಮ್ಮದರ ಜೀವನಕ್ಕೆ ಸಂಬಂಧಿಸಿದ ''''ಭವ್ಯ ಬದುಕಿನ ಕಾವ್ಯ ಪ್ರಸ್ತುತಿ'''' ಕವಿಗೋಷ್ಠಿಬೆಂಗಳೂರು: ಪೈಗಂಬರ್ ಮುಹಮ್ಮದ್ ಅವರ ಸಾವಿರದ ಐನೂರನೇ ಜನ್ಮ ದಿನಾಚರಣೆಯ ಭಾಗವಾಗಿ ಮರ್ಕಝ್ ನಾಲೆಜ್ ಸಿಟಿ ಅಧೀನದ ವಿರಾಸ್ ಕನ್ನಡ ವಿದ್ಯಾರ್ಥಿಗಳು ಪ್ರವಾದಿ ಮುಹಮ್ಮದರ ಬದುಕನ್ನು ಆಧಾರವಾಗಿಟ್ಟುಕೊಂಡು "ಭವ್ಯ ಬದುಕಿನ ಕಾವ್ಯ ಪ್ರಸ್ತುತಿ " ಎಂಬ ಶೀರ್ಷಿಕೆಯಲ್ಲಿ ಆಯೋಜಿಸಿದ ಮೀಮ್ ಕವಿಗೋಷ್ಠಿ ಬೆಂಗಳೂರಿನಲ್ಲಿ ಸಮಾಪ್ತಿಗೊಂಡಿತು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮುಡ್ನಾಕೂಡು ಚಿನ್ನಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
“ಕವಿತೆ ಸತ್ಯ ಮತ್ತು ಸೌಂದರ್ಯದ ಸಂಗಮ. ಹಳೆಯ ಕಾಲದ ಸೂಫಿಗಳು ತಮ್ಮ ಆಧ್ಯಾತ್ಮಿಕ ಭಾವನೆಗಳನ್ನು ಕವಿತೆಯ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದರು. ಕವಿಗಳನ್ನು ಪ್ರವಾದಿ ಪ್ರೋತ್ಸಾಹಿಸಿದ ಕಾರಣವೂ ಇದೇ” ಎಂದು ಅವರು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, “ಕವಿತೆ ಜೀವನದ ಕನ್ನಡಿ. ಜೀವನಾನುಭವಗಳು, ಸಂತೋಷಗಳು, ಸತ್ಯ, ಅಮಾನುಷತೆ- ಇವು ಭಾವನೆಯ ಜಾಲಕ್ಕೆ ಇಳಿದಾಗ ಕವಿತೆಯ ಸೌಂದರ್ಯ ಹೆಚ್ಚಾಗುತ್ತದೆ” ಎಂದು ಅಭಿಪ್ರಾಯಪಟ್ಟರು.ನಾಲ್ಕು ಸೆಷನ್‌ಗಳಲ್ಲಿ ನಡೆದ ಕವಿಗೋಷ್ಟಿಯಲ್ಲಿ ಸುಮಾರು ನಲ್ವತ್ತರಷ್ಟು ಕವಿತೆಗಳನ್ನು ವಾಚನ ಮಾಡಲಾಯಿತು. ಸಾಹಿತಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ, ಯೋಗೇಶ್ ಮಾಸ್ಟರ್, ರಿಯಾಝ್ ಅಹ್ಮದ್ ಬೋಡೆ, ವೈ. ಜೆ. ಮಹ್ಬೂಬ್ ಗುಲ್ಬರ್ಗ, ಪುನೀತ್ ಅಪ್ಪು ಇವರುಗಳು ವಿವಿಧ ಸೆಷನ್‌ಗಳಿಗೆ ನೇತೃತ್ವ ನೀಡಿದರು. ಸ್ವಾಲಿಹ್ ತೋಡಾರ್, ಯಂಶ ಬೇಂಗಿಲ ಮುಂತಾದ ಪ್ರಮುಖ ಕವಿಗಳು ಪೈಗಂಬರರ ಜೀವನದ ವಿಭಿನ್ನ ಕ್ಷಣಗಳನ್ನು ಆಧರಿಸಿ ಕವಿತೆಗಳನ್ನು ವಾಚಿಸಿದರು.ಹಿರಿಯ ಸಾಹಿತಿಗಳಾದ ಬಿ.ಎಂ ಹನೀಫ್ ಅವರು "ಇಖ್''''ರಅ್: ಓದಬೇಕೆನ್ನುವ ಮೊದಲ ವಾಣಿ " ಎಂಬ ವಿಷಯದಲ್ಲಿ ನಡೆದ ಸಾಹಿತ್ಯ ಕಾರ್ಯಾಗಾರಕ್ಕೆ ನೇತೃತ್ವ ನೀಡಿದರು. ಸಾಹಿತಿ ಯೋಗೇಶ್ ಮಾಸ್ಟರ್ ಅವರ ನೇತೃತ್ವದಲ್ಲಿ "ಸಾರ್ವತ್ರಿಕ ಪ್ರವಾದಿ " ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಿತು. ವಿರಾಸ್ ಪ್ರಾಧ್ಯಾಪಕರಾದ ಅಡ್ವಕೇಟ್ ಸುಹೈಲ್ ಸಖಾಫಿ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ ಇವರು ಶುಭಾಶಯ ಕೋರಿದರು.
ಅಲ್ ವಾರಿಸ್ ಶರೀಫ್ ಸಖಾಫಿ ಸ್ವಾಗತಿಸಿ, ಅಡ್ವಕೇಟ್ ಅಲ್ ವಾರಿಸ್ ಆಸಿಂ ನೂರಾನಿ ಉಳ್ಳಾಲ ವಂದಿಸಿದರು.(ಫೋಟೋ: ಬೆಂಗಳೂರಿನಲ್ಲಿ ನಡೆದ ಕನ್ನಡ ಮೀಮ್ ಕವಿಗೋಷ್ಠಿಯನ್ನು ಮುಡ್ನಾಕೂಡು ಚಿನ್ನಸ್ವಾಮಿ ಉದ್ಘಾಟಿಸುತ್ತಿರುವ ದೃಶ್ಯ)