ಅಮೆರಿಕ 119ನೇ ಸಂಸತ್‌ಗೆ ಕನ್ನಡಿಗ ಥಾಣೇದಾರ್‌ ಸೇರಿ ನಾಲ್ವರು ಹಿಂದೂಗಳ ಆಯ್ಕೆ : ದಾಖಲೆ

KannadaprabhaNewsNetwork | Updated : Jan 05 2025, 05:54 AM IST

ಸಾರಾಂಶ

ಅಮೆರಿಕದ 119ನೇ ಸಂಸತ್‌ನ ಮೊದಲ ದಿನದ ಕಲಾಪಗಳು ಶುಕ್ರವಾರ ಆರಂಭವಾದವು. ಈ ಬಾರಿ ಸಂಸತ್‌ಗೆ ನಾಲ್ವರು ಹಿಂದೂಗಳು ಆಯ್ಕೆಯಾಗಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ 119ನೇ ಸಂಸತ್‌ನ ಮೊದಲ ದಿನದ ಕಲಾಪಗಳು ಶುಕ್ರವಾರ ಆರಂಭವಾದವು. ಈ ಬಾರಿ ಸಂಸತ್‌ಗೆ ನಾಲ್ವರು ಹಿಂದೂಗಳು ಆಯ್ಕೆಯಾಗಿದ್ದಾರೆ. ಅಮೆರಿಕ ಸಂಸತ್‌ಗೆ ಒಮ್ಮಗೆ ಇಷ್ಟು ಜನರ ಆಯ್ಕೆ ಇದೇ ಮೊದಲು. 

ಅವರುಗಳೆಂದರೆ ಕನ್ನಡಿಗ ಶ್ರೀ ಥಾಣೇದಾರ್‌, ಸುಹಾಸ್‌ ಸುಬ್ರಹ್ಮಣ್ಯಂ, ರಾಜಾ ಕೃಷ್ಣಮೂರ್ತಿ ಮತ್ತು ರೋ ಖನ್ನಾ. ಡೆಮಾಕ್ರೆಟ್‌ ಪಕ್ಷದಿಂದ ಆಯ್ಕೆಯಾದ 14 ಸಂಸದರ ಪೈಕಿ ನಾಲ್ವರು ಹಿಂದೂ, ನಾಲ್ವರು ಮುಸ್ಲಿಂ, ಮೂರು ಬೌದ್ಧರು, ಮೂವರು ಯಹೂದಿಗಳಿದ್ದಾರೆ.

ಶಬರಿಮಲೆ ಯಾತ್ರೆ ವೇಳೆ ಮಸೀದಿ ಭೇಟಿ ಬೇಡ: ಬಿಜೆಪಿ ರಾಜಾಸಿಂಗ್‌

ಹೈದರಾಬಾದ್‌: ‘ಅಯ್ಯಪ್ಪನ ಮಾಲಾಧಾರಿಗಳು ಶಬರಿಮಲೆ ಯಾತ್ರೆ ಹೋಗುವ ಸಂದರ್ಭದಲ್ಲಿ ಮಸೀದಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು’ ಎಂದು ತೆಲಂಗಾಣದ ಬಿಜೆಪಿ ನಾಯಕ, ಶಾಸಕ ರಾಜಾ ಸಿಂಗ್ ಹೇಳಿದ್ದಾರೆ.

ಗೋಶಾಮಹಲ್ ಶಾಸಕ ರಾಜಾಸಿಂಗ್ ಮಾಧ್ಯಮಗಳೆದರು ಈ ಬಗ್ಗೆ ಮಾತನಾಡಿದ್ದು, ‘ಮಾಲೆ ಹಾಕುವ ಅಯ್ಯಪ್ಪನ ಭಕ್ತರು ಅಯ್ಯಪ್ಪ ದೀಕ್ಷೆಯ ವೃತವನ್ನು ಕಠಿಣವಾಗಿ ಪಾಲಿಸಬೇಕು. ಮಸೀದಿಗೆ ಭೇಟಿ ನೀಡುವುದರಿಂದ ಅದನ್ನು ಅಪವಿತ್ರಗೊಳಿಸಲಾಗುತ್ತದೆ. ಶಬರಿಮಲೆ ಯಾತ್ರೆ ವೇಳೆ ಮಸೀದಿಗೆ ಭೇಟಿ ನೀಡುವಂತೆ ಪ್ರೋತ್ಸಾಹಿಸುವುದು ಷಡ್ಯಂತ್ರದ ಭಾಗ’ ಎಂದು ಅವರು ಆರೋಪಿಸಿದ್ದಾರೆ.

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 6 ಜನರ ಸಾವು

ವಿರುಧ್‌ನಗರ: ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟಗೊಂಡು 6 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಿರುಧ್‌ನಗರ ಶನಿವಾರ ನಡೆದಿದೆ. ಕಾರ್ಖಾನೆಯ ಕಾರ್ಮಿಕರು, ಪಟಾಕಿ ತಯಾರಿಕೆ ವೇಳೆ ರಾಸಾಯಾನಿಕ ಕಚ್ಛಾ ಪದಾರ್ಥಗಳ ಮಿಶ್ರಣದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. 

ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ನಿಧಿಯಿಂದ 4 ಲಕ್ಷ ರು. ,ಗಾಯಗೊಂಡ ಕಾರ್ಮಿಕನಿಗೆ 1 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.

ದಿಲ್ಲಿಯಲ್ಲಿ ದಟ್ಟ ಮಂಜು: 200 ವಿಮಾನ 50 ರೈಲು ಸಂಚಾರ ವ್ಯತ್ಯಯ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು, ಕಡಿಮೆ ಗೋಚರತೆ ಪರಿಣಾಮ ವಿಮಾನ ಸಂಚಾರದ ಮೇಲೆಯೂ ಶನಿವಾರ ಪರಿಣಾಮ ಬೀರಿದೆ. ಹವಾಮಾನ ವೈಪರೀತ್ಯದಿಂದಾಗಿ 19 ವಿಮಾನಗಳ ಮಾರ್ಗ ಬದಲಿಸಲಾಗಿತ್ತು. 200 ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿದೆ. ಘಟನೆ ನಡೆದಿದೆ. ಮೂಲಗಳ ಪ್ರಕಾರ, ಕಡಿಮೆ ಗೋಚರಣೆ ಕಾರಣಕ್ಕೆ ಮಧ್ಯಾಹ್ನ 12.15ರಿಂದ 1.30ರವರೆಗೆ 19 ವಿಮಾನಗಳ ಹಾರಾಟದ ಮಾರ್ಗವನ್ನು ಬದಲಿಸಲಾಗಿತ್ತು.

 ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಕೆಲ ಸಮಯ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಶುಕ್ರವಾರವೂ ಇದೇ ರೀತಿ ಪರಿಸ್ಥಿತಿಯಿತ್ತು. ದಟ್ಟ ಮಂಜು, ಕಡಿಮೆ ಗೋಚರಣೆ ಕಾರಣದಿಂದ 400 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿತ್ತು. ಹವಾಮಾನ ವೈಪರೀತ್ಯ ರೈಲು ಸಂಚಾರದ ಮೇಲೆಯೂ ಪರಿಣಾಮ ಬೀರಿದ್ದೂ, ಬೇರೆ ಬೇರೆ ಭಾಗದಿಂದ ದೆಹಲಿಗೆ ಬರಬೇಕಿದ್ದ 50 ರೈಲುಗಳು ತಡವಾಗಿ ಆಗಮಿಸಿವೆ.

ವಿವಾದ ನಡುವೆ ಬಾಂಗ್ಲಾದ 50 ಜಡ್ಜ್‌ಗಳಿಗೆ 10 ದಿನ ಭಾರತದಲ್ಲಿ ತರಬೇತಿ

ಢಾಕಾ: ಭಾರತ ಮತ್ತು ಬಾಂಗ್ಲಾದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆಯೇ ಬಾಂಗ್ಲಾದ 50 ಜಡ್ಜ್‌ಗಳು ಭಾರತದಲ್ಲಿ 10 ದಿನಗಳ ಕಾಲ ತರಬೇತಿ ಪಡೆಯಲು ಶೀಘ್ರವೇ ಆಗಮಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಕೆಳ ನ್ಯಾಯಾಲಯದ 50 ನ್ಯಾಯಾಧೀಶರಿಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ರಾಜ್ಯ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಬಾಂಗ್ಲಾದ ಕಾನೂನು ಸಚಿವಾಲಯ ಅನುಮತಿ ನೀಡಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾ ಸರ್ಕಾರದಿಂದ ಇದಕ್ಕೆ ಅಂತಿಮ ಮುದ್ರೆ ಬಿದ್ದಿದ್ದು, ತರಬೇತಿಯ ಸಂಪೂರ್ಣ ವೆಚ್ಚವನ್ನು ಭಾರತವೇ ವಹಿಸಲಿದೆ ಎಂದಿದೆ.

Share this article