ನವದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ 10 ವರ್ಷಗಳಲ್ಲಿ ಸರ್ಕಾರ 130 ಲಕ್ಷ ಕೋಟಿ ರು . ಸಾಲ ಮಾಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಸಂಸದ ಡಾ.ಎಂ.ಕೆ ವಿಷ್ಣುಪ್ರಸಾದ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ದೇಶದಲ್ಲಿ 2015- 16ನೇ ಸಾಲಿನಲ್ಲಿ ₹70.98 ಲಕ್ಷ ಕೋಟಿಯಷ್ಟು ಸಾಲವಿತ್ತು. ಅದು 2025- 26 ವೇಳೆಗೆ 200.16 ಲಕ್ಷ ಕೋಟಿ ರು.ಗೆ ಏರಿಕೆಯಾಗಿದ್ದು, ಈ ವರ್ಷ 4.61 ಲಕ್ಷ ಕೋಟಿ ರು. ಸಾಲ ಮರುಪಾವತಿ ಮಾಡಲಾಗಿದೆ. ಒಟ್ಟು ಸಾಲಕ್ಕೆ 2025ನೇ ಸಾಲಿನಲ್ಲಿ ಸರ್ಕಾರ 12.76 ಲಕ್ಷ ಕೋಟಿ ರು.ಬಡ್ಡಿ ಪಾವತಿ ಮಾಡಿದೆ’ ಎಂದರು.
ಸಲ್ಲಿಕೆ ಅವಧಿ ಮುಗಿದರೂ ದಂಡವಿಲ್ಲದೆ ಟಿಡಿಎಸ್ ಕ್ಲೇಂ ಸಾಧ್ಯ
ನವದೆಹಲಿ : ಆದಾಯ ತೆರಿಗೆಗೆ ಸಂಬಂಧಿಸಿದ 2 ಪರಿಷ್ಕೃತ ಮಸೂದೆಗಳನ್ನು ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆದಾಯ ತೆರಿಗೆ(2) ಮಸೂದೆ ಮತ್ತು ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಗಳು ಅಂಗೀಕಾರವಾದವು. ಸಲ್ಲಿಕೆ ಅವಧಿ ಮುಗಿದರೂ ದಂಡವಿಲ್ಲದೆ ಟಿಡಿಎಸ್ ಕ್ಲೇಂ ಸಾಧ್ಯ ಆಗುವಂಥ ಹಲವು ತೆರಿಗೆದಾರ ಸ್ನೇಹಿ ಅಂಶಗಳು ಇದರಲ್ಲಿದೆ.
ಹೊಸ ಆದಾಯ ತೆರಿಗೆ(2) ಮಸೂದೆಯು, 1961ರ ಆದಾಯ ತೆರಿಗೆ ಕಾಯ್ದೆಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡುವ ಕುರಿತಾಗಿದೆ. ಅತ್ತ ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಯು 1961ರ ಕಾಯ್ದೆ ಮತ್ತು 2025ರ ಹಣಕಾಸು ಕಾಯ್ದೆಗೆ ತಿದ್ದುಪಡಿ ತರುತ್ತದೆ.ಸೀತಾರಾಮನ್ ಅವರು ಶುಕ್ರವಾರ ಆದಾಯ ತೆರಿಗೆ ಮಸೂದೆ-2025ನ್ನು ಹಿಂಪಡೆದಿದ್ದು, ಸಂಸತ್ತಿನ ಆಯ್ಕೆ ಸಮಿತಿಯ ಸಲಹೆಗಳ ಅನ್ವಯ ಅದಕ್ಕೆ ಬದಲಾವಣೆ ಮಾಡಿ ಅದನ್ನೀಗ ಅಂಗೀಕರಿಸಲಾಗಿದೆ. ಇದು 2026ರ ಏ.1ರಿಂದ ಜಾರಿಗೆ ಬರಲಿದೆ