;Resize=(412,232))
ಮೈತ್ರಿ ಎಸ್.
ಪುಣೆ : ಕಾರ್ ಎಂಬುದು ಮಧ್ಯಮವರ್ಗದ ಕನಸು. ಅದರ ಸಾಕಾರಕ್ಕಾಗಿ ಎಷ್ಟೋ ಜನ ವರ್ಷಗಳ ಕಾಲ ಕೂಡಿಟ್ಟು, ಖರೀದಿಸುತ್ತಾರೆ. ಆದರೆ ಶ್ರೀಮಂತರ ಪ್ರಪಂಚದಲ್ಲಿ ಕಾರ್ ಎಂಬುದು ಪ್ರತಿಷ್ಠೆಯ ಸಂಕೇತ. ತಾವು ಕುಳಿತ ವಾಹನ ಅರಮನೆಯಷ್ಟು ಆರಾಮದಾಯಕವಾಗಿರಬೇಕು, ರಸ್ತೆಯಲ್ಲಿ ಸಾಗುತ್ತಿದ್ದರೆ ಎಲ್ಲರೂ ಒಂದು ಕ್ಷಣ ತಿರುಗಿ ನೋಡಬೇಕು ಎಂಬ ಹಂಬಲ ಅವರಲ್ಲಿರುತ್ತದೆ.
ಈ ರೀತಿಯ ಐಷಾರಾಮಿ ಸೌಲಭ್ಯಗಳನ್ನು ತನ್ನ ಕಾರಿನಲ್ಲಿ ಮರ್ಸಿಡಿಸ್ ಬೆಂಜ್ ನೀಡುತ್ತಿದ್ದು ಲಕ್ಷುರಿಗೆ ಮತ್ತೊಂದು ಹೆಸರಾಗಿದೆ. ಶೇ.75ರಷ್ಟು ಮರ್ಸಿಡಿಸ್ ಗ್ರಾಹಕರು ತಾವು ಕೊಳ್ಳುವ ಕಾರಿನಲ್ಲಿ ತಮ್ಮಿಚ್ಛೆಯಂತೆ ಐಶಾರಾಮಿ ಬದಲಾವಣೆ ಬಯಸುತ್ತಾರೆ. ಇದಕ್ಕಾಗಿ ವಾಹನದ ಬೆಲೆಯ ಅರ್ಧದಷ್ಟನ್ನು ಹೆಚ್ಚಿಗೆ ಪಾವತಿಸಲೂ ಸಿದ್ಧರಿರುತ್ತಾರೆ. ಅಂದರೆ ₹1 ಕೋಟಿ ಕಾರಿಗೆ ಹೆಚ್ಚುವರಿಯಾಗಿ ₹50 ಲಕ್ಷ ಮಾಡಿಫಿಕೇಶನ್‌ಗೆ ಪಾವತಿಸುತ್ತಾರೆ’ ಎಂದು ಮರ್ಸಿಡೀಸ್ ಬೆಂಜ್ ಇಂಡಿಯಾದ ಸಿಇಒ ಸಂತೋಷ್ ಅಯ್ಯರ್ ಹೇಳುತ್ತಾರೆ.
ಪುಣೆಯ ಕಾರು ಉತ್ಪಾದನಾ ಘಟಕದಲ್ಲಿ ಸುದ್ದಿಗಾರರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ಮೊದಲೆಲ್ಲಾ ಜನರು ಬೇಸಿಕ್ ಕಾರು ಖರೀದಿಸಿ, ಬಳಿಕ ಐಷಾರಾಮಿ ಕಾರುಗಳನ್ನು ಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಮೊದಲ ಬಾರಿ ಐಷಾರಾಮಿ ಕಾರು ಕೊಳ್ಳುವವರೂ ಟಾಪ್ ಎಂಡ್ ಕಾರಿನತ್ತ ಮನಸ್ಸು ಮಾಡುತ್ತಿದ್ದಾರೆ. ಇದರಿಂದ ಮರ್ಸಿಡಿಸ್‌ನ ಎಸ್-ಕ್ಲಾಸ್, ಮೇಬ್ಯಾಚ್, ಜಿಎಲ್‌ಎಸ್ ಕಾರುಗಳಿಗೆ ಭಾರೀ ಬೇಡಿಕೆಯಿದೆ. ಇವುಗಳ ಬೆಲೆಯೇ 1ರಿಂದ 2 ಕೋಟಿ ರು. ಇದೆ. ಜನ ಇಷ್ಟು ಹಣ ನೀಡುವುದರ ಜತೆಗೆ ತಮ್ಮಿಷ್ಟದ ಲಕ್ಷುರಿ ಸೌಲಭ್ಯಗಳನ್ನು ಕಾರಿನಲ್ಲಿ ಅಳವಡಿಸಿಕೊಳ್ಳಲು ಹೆಚ್ಚುವರಿಯಾಗಿ 50-60 ಲಕ್ಷ ರು. ಪಾವತಿಸಲು ತಯಾರಿದ್ದಾರೆ. ಲಕ್ಷುರಿ ಕಾರುಗಳ ಬಗ್ಗೆ ಈ ಮಟ್ಟದಲ್ಲಿ ಕ್ರೇಜ್ ಇದೆ. ಗಮನಾರ್ಹವೆಂದರೆ, ನಮ್ಮ ಗ್ರಾಹಕರಲ್ಲಿ ಶೇ.15ರಷ್ಟು ಮಹಿಳೆಯರೇ ಇದ್ದಾರೆ’ ಎಂದು ಅಯ್ಯರ್ ಹರ್ಷ ವ್ಯಕ್ತಪಡಿಸಿದರು.
ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಕಾರುಗಳನ್ನು ಒದಗಿಸಲೋಸುಗ ಮರ್ಸಿಡೀಸ್ ವಿಶಿಷ್ಟ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಆಸಕ್ತರು ಕಂಪನಿಯನ್ನು ಸಂಪರ್ಕಿಸುತ್ತಿದ್ದಂತೆ, ಮರ್ಸಿಡೀಸ್ ಸಿಬ್ಬಂದಿ ಕಸ್ಟಮೈಸೇಷನ್‌ಗೆಂದೇ ಸಿದ್ಧಪಡಿಸಲಾಗಿರುವ ಬೃಹತ್ ಕಿಟ್‌ನೊಂದಿಗೆ ಗ್ರಾಹಕರಿರುವಲ್ಲಿಗೆ ತಲುಪುತ್ತಾರೆ. ಆ ಕಿಟ್‌ನಲ್ಲಿ, ಹಲವು ಬಣ್ಣ, ವಿನ್ಯಾಸ, ಮೇಲ್ಮೈ ಚಹರೆಯ ಸೀಟ್, ಮೆಟಲ್ ಬಾಡಿ, ನೆಲಹಾಸು, ಗ್ರಿಲ್‌ಗಳ ವಿವಿಧ ಮಾದರಿಗಳಿರುತ್ತವೆ. ಅವುಗಳನ್ನು ವಾಸ್ತವವಾಗಿ ನೋಡಿ ಗ್ರಾಹಕರು ತಮಗಿಷ್ಟವಾದುದನ್ನು ಆರಿಸಿಕೊಳ್ಳಬಹುದು. ಜತೆಗೆ ತಮ್ಮ ಆಯ್ಕೆಯನ್ನು ಒಟ್ಟುಗೂಡಿಸಿದರೆ ಕಾರ್ ಹೇಗೆ ಕಾಣುತ್ತದೆ ಹಾಗೂ ಅದರ ಬೆಲೆ ಎಷ್ಟಾಗುತ್ತದೆ ಎಂಬುದನ್ನೂ ಅವರಿಗೆ ವರ್ಚುವಲ್ ಆಗಿ ತೋರಿಸಲಾಗುತ್ತದೆ. ವಿಶೇಷವೆಂದರೆ, ಕಾರಿನ ಮೇಲೆ ತಮ್ಮ ಹೆಸರನ್ನು ಬರೆಸಿಕೊಳ್ಳುವ ಆಯ್ಕೆಯೂ ಇದೆ. ಈ ಕಸ್ಟಮೈಸ್ಡ್ ಕಾರ್ ತಯಾರಿಗೆ ಕಡಿಮೆಯೆಂದರೂ 6-8 ತಿಂಗಳು ತಗುಲುತ್ತದೆ ಹಾಗೂ ಇದರ ಬೆಲೆ ನೈಜ ಮೌಲ್ಯಕ್ಕಿಂತ ಅರ್ಧದಷ್ಟು ಅಧಿಕವಿರುತ್ತದೆ.
ಸೆ.22ರಿಂದ ಜಾರಿಗೆ ಬಂದ ಹೊಸ ಜಿಎಸ್‌ಟಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಮೇಲಿನ ತೆರಿಗೆಯನ್ನು ಶೇ.6ರಷ್ಟು ಇಳಿಸಲಾಗಿದ್ದು ಮರ್ಸಿಡೀಸ್‌ನ ಬೇಡಿಕೆ ಹೆಚ್ಚಿಸಿತ್ತು. ಪರಿಣಾಮವಾಗಿ, ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಗ್ರಾಹಕರು ಮುಗಿಬಿದ್ದು ಡೀಸೆಲ್ ಕಾರುಗಳನ್ನು ಖರೀದಿಸಿದರು. ಮೊದಲು ಶೇ.29ರಷ್ಟಿದ್ದ ಅದರ ಖರೀದಿ ಪ್ರಮಾಣ ಈಗ ಶೇ.40ಕ್ಕೆ ಏರಿಕೆಯಾಗಿದೆ. ಮಾರುಕಟ್ಟೆ ಬೆಲೆಯೊಂದಿಗೆ ಹೊಂದಿಕೆಯಾಗುವಂತೆ 2026ರಲ್ಲಿ ಮರ್ಸಿಡೀಸ್ ಬೆಲೆಗಳಲ್ಲೂ ಕೊಂಚ ಏರಿಕೆ ಮಾಡಲಾಗುವುದು ಎನ್ನಲಾಗಿದೆ.
ಶೀಘ್ರ ಸ್ವಂತ ಒಎಸ್‌ನ ಹೊಸ ಮಾಡೆಲ್
ಈಗಾಗಲೇ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ತೊಡಗಿರುವ ಮರ್ಸಿಡೀಸ್, ಮುಂದಿನ ವರ್ಷ ಸಿಎಲ್‌ಎ ಮಾಡೆಲ್‌ನ ಕಾರ್ ಬಿಡುಗಡೆ ಮಾಡಲಿದ್ದು, ಮೊದಲ ಬಾರಿಗೆ ಇದರಲ್ಲಿ ತನ್ನ ಸ್ವಂತ ಮರ್ಸಿಡಿಸ್ ಬೆಂಜ್ ಆಪರೇಟಿಂಗ್ ಸಿಸ್ಟಮ್ (ಎಂಬಿಒಎಸ್) ಅಳವಡಿಸಲಿದೆ. ಈ ಸಾಫ್ಟ್‌ವೇರ್ ಇಡೀ ಕಾರಿನ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸಲಿದೆ. ಈ ಕಾರಿನ ರೇಂಜ್ ಗಂಟೆಗೆ 800 ಕಿ.ಮೀ.ನಷ್ಟಿರುತ್ತದೆ.
ಬೆಂಗಳೂರಲ್ಲಿ ಹೊಸ ಶೋರೂಂ:
‘ಗ್ರಾಹಕರು ಸರ್ವೀಸ್‌ಗಾಗಿ 2 ತಾಸಿಗಿಂತ ಹೆಚ್ಚು ಪ್ರಯಾಣಿಸಬಾರದು’ ಎಂಬುದು ಮರ್ಸಿಡೀಸ್‌ನ ಉದ್ದೇಶ. ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಬೆಂಗಳೂರಿನಲ್ಲೂ ತನ್ನ ಮತ್ತೊಂದು ಹೊಸ ಔಟ್‌ಲೆಟ್ ತೆರೆಯಲು ಸಜ್ಜಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 6 ಮರ್ಸಿಡಿಸ್ ಡೀಲರ್ ಮತ್ತು ಸೇವಾ ಮಳಿಗೆಗಳಿವೆ.