ಪೂರ್ವ ಆಫ್ರಿಕಾ ದೇಶವಾದ ಕೀನ್ಯಾದಿಂದ ಚೀತಾಗಳನ್ನು ಸಂತಾನೋತ್ಪತ್ತಿ ಕೇಂದ್ರಕ್ಕೆ ತರುವ ಭಾರತದ ಹೊಸ ಯೋಜನೆ :

KannadaprabhaNewsNetwork | Updated : Sep 15 2024, 05:39 AM IST

ಸಾರಾಂಶ

ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ನಂತರ, ಭಾರತವು ಈಗ ಪೂರ್ವ ಆಫ್ರಿಕಾದ ದೇಶವಾದ ಕೀನ್ಯಾದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಯೋಜಿಸುತ್ತಿದೆ. ಗುಜರಾತ್‌ನ ಬನ್ನೀ ಹುಲ್ಲುಗಾವಲಿನಲ್ಲಿ ನಿರ್ಮಾಣ ಹಂತದಲ್ಲಿರುವ ಸಂತಾನೋತ್ಪತ್ತಿ ಕೇಂದ್ರಕ್ಕೆ ಚೀತಾಗಳನ್ನು ತರಲಾಗುವುದು.

ನವದೆಹಲಿ: ನಮೀಬಿಯಾ ಮತ್ತು ದ.ಆಫ್ರಿಕಾದ ಬಳಿಕ ಇದೀಗ ಭಾರತ ಪೂರ್ವ ಆಫ್ರಿಕಾ ದೇಶವಾದ ಕೀನ್ಯಾದಿಂದ ಚೀತಾಗಳನ್ನು ತರುವ ಯೋಜನೆ ಹಾಕಿಕೊಂಡಿದೆ.

‘ಗುಜರಾತ್‌ನ ಬನ್ನೀ ಹುಲ್ಲುಗಾವಲಿನಲ್ಲಿ ನಿರ್ಮಿಸಲಾಗುತ್ತಿರುವ ಸಂತಾನೋತ್ಪತ್ತಿ ಕೇಂದ್ರಕ್ಕೆ ಕೀನ್ಯಾದ ಚೀತಾಗಳನ್ನು ತರಿಸಲಾಗುವುದು’ ಎಂದು ಅಂತಾರಾಷ್ಟ್ರೀಯ ಬಿಗ್‌ ಕ್ಯಾಟ್‌ ಒಕ್ಕೂಟದ ಮಹಾನಿರ್ದೇಶಕ ಎಸ್‌.ಪಿ. ಯಾದವ್‌ ಮಾಹಿತಿ ನೀಡಿದ್ದಾರೆ.

ಈ ಮೊದಲು ಖಂಡಾಂತರ ಸ್ಥಳಾಂತರದ ಭಾಗವಾಗಿ 2022ರ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ 8 ಹಾಗೂ 2023ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಸೇರಿದಂತೆ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿತ್ತು. ಇವುಗಳ ಪೈಕಿ 8 ವಯಸ್ಕ ಚೀತಾಗಳು ಸಾವನ್ನಪ್ಪಿವೆ.

ಭಾರತದಲ್ಲೇ ಜನಿಸಿದ 17 ಮರಿಗಳ ಪೈಕಿ 5 ಅಸುನೀಗಿವೆ. 12 ಮರಿ ಜೀವಂತವಿದ್ದು, ಪ್ರಸ್ತುತ ಒಟ್ಟು 24 ಚೀತಾಗಳು ಬದುಕುಳಿದಿವೆ.

==

ಸೂಕ್ಷ್ಮ ಮಾಹಿತಿ ಕಾರಣ ಜಡ್ಜ್‌ ನೇಮಕ ವಿಳಂಬ: ಕೇಂದ್ರ

ನವದೆಹಲಿ: ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದ ಕೆಲವರ ಬಗ್ಗೆ ಕೆಲವು ಸೂಕ್ಷ್ಮ ಮಾಹಿತಿಗಳು ಲಭ್ಯ ಆಗಿರುವ ಕಾರಣ ಜಡ್ಜ್‌ಗಳ ನೇಮಕಾತಿ ವಿಳಂಬವಾಗುತ್ತಿದೆ ಎಂದು ಶನಿವಾರ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.ಈ ಕುರಿತು ಅಟಾರ್ನಿ ಜನರಲ್ ಆರ್‌. ವೆಂಕಟ್ರಮಣಿ ಅವರು ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್, ನ್ಯಾ।.ಬಿ. ಪರ್ದಿವಾಲಾ ಮತ್ತು ನ್ಯಾ। ಮನೋಜ್ ಮಿಶ್ರಾ ಅವರ ಪೀಠಕ್ಕೆ ವಿವರ ನೀಡಿ, ‘ನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರ ಬಗ್ಗೆ ಕೆಲವು ಸೂಕ್ಷ್ಮ ವಿಚಾರಗಳನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ’ ಎಂದರು.

ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರನ್ನು ಹೈಕೋರ್ಟ್‌ಗಳಿಗೆ ನೇಮಕ ಮಾಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಅನೇಕ ಬಾರಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

==

ಕಾಶ್ಮೀರದ ಬಾರಾಮುಲ್ಲಾದಲ್ಲಿ ಎನ್‌ಕೌಂಟರ್‌: 3 ಉಗ್ರರ ಹತ್ಯೆ

ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.ಶುಕ್ರವಾರ ತಡರಾತ್ರಿ ಉತ್ತರ ಕಾಶ್ಮೀರ ಜಿಲ್ಲೆಯ ಪಟ್ಟಾನ್ ಪ್ರದೇಶದ ಚಕ್ ಟಪ್ಪರ್‌ ಕ್ರೀರಿಯಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು.

ಈ ವೇಳೆ ಉಗ್ರರು, ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಪ್ರತಿದಾಳಿ ಮಾಡಿವೆ. ಶನಿವಾರ ಬೆಳಗ್ಗೆ ವರೆಗೂ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಸಾವನ್ನಪ್ಪಿದ್ದಾರೆ. ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶುಕ್ರವಾರ ಇಬ್ಬರು ಉಗ್ರರು ಹಾಗೂ ಇಬ್ಬರು ಯೋಧರು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದರು.

==

ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಬಳಿಕ ಬೆಲೆ ಕೊಂಚ ಇಳಿಕೆ

ಪಿಟಿಐ ನವದೆಹಲಿ: ಕೇಂದ್ರ ಸರ್ಕಾರವು, ತೀವ್ರ ಬೆಲೆ ಏರಿಕೆ ಕಂಡಿದ್ದ ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ಮಾರಾಟ ಪ್ರಾರಂಭಿಸಿದ ನಂತರ ಕೆಲವೇ ದಿನಗಳಲ್ಲಿ ಅದರ ದರ ಇಳಿಕೆಯಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಶನಿವಾರ ಹೇಳಿದೆ.ಕೇಂದ್ರ ಸರ್ಕಾರ ಸೆ.5 ರಂದು ದೆಹಲಿ, ಮುಂಬೈನಲ್ಲಿ ಕೆಜಿಗೆ 35 ರು. ಈರುಳ್ಳಿಯ ಸಬ್ಸಿಡಿ ಮಾರಾಟ ದರ ಪ್ರಾರಂಭಿಸಿತ್ತು. ಬಳಿಕ ದೆಹಲಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆಜಿಗೆ 60 ರು.ನಿಂದ 55 ರು.ಗೆ ಇಳಿಕೆಯಾಗಿದೆ. ಮುಂಬೈನಲ್ಲಿ 61 ರು.ನಿಂದ 56 ರು., ಚೆನ್ನೈನಲ್ಲಿ 65 ರು.ನಿಂದ 58 ರು. ಕಡಿಮೆಯಾಗಿದೆ ಎಂದು ಹೇಳಿದೆ.‘ಸದ್ಯ 4.7 ಲಕ್ಷ ಟನ್‌ ಈರುಳ್ಳಿ ದಾಸ್ತಾನಿದೆ. ಮುಂದೆ ಈರುಳ್ಳಿ ದರ ನಿಯಂತ್ರಣದಲ್ಲಿರುತ್ತದೆ ಎಂದು ಸರ್ಕಾರ ಅಂದಾಜಿಸಿದೆ’ ಎಂದು ಅದು ವಿಶ್ವಾಸ ವ್ಯಕ್ತಪಡಿಸಿದೆ.

==

ಉದ್ಘಾಟನೆಗೂ ಮುನ್ನವೇ ವಂದೇ ಭಾರತ್‌ಗೆ ಕಲ್ಲು: ಐವರ ಸೆರೆ

ದುರ್ಗ್‌: ಛತ್ತೀಸ್‌ಗಢದ ದುರ್ಗ್‌ನಿಂದ ಆಂಧ್ರಪ್ರದೇಶದ ವಿಶಾಖಪಟ್ಟಣದವರೆಗೆ ಸಂಚರಿಸಲಿರುವ ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೋಮವಾರ ಉದ್ಘಾಟನೆ ಆಗಲಿದೆ. ಆದರೆ ಉದ್ಘಾಟನೆಗೂ ಮುನ್ನ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.ದುರ್ಗ್‌ನಿಂದ ವಿಶಾಖಪಟ್ಟಣಕ್ಕೆ ಪ್ರಾಯೋಗಿಕ ಪರೀಕ್ಷೆ ನಡೆಸುವ ವೇಳೆ ಶುಕ್ರವಾರ ಬೆಳಗ್ಗೆ ವಿಶಾಖಪಟ್ಟಣದಿಂದ ವಾಪಸಾಗುತ್ತಿದ್ದ ರೈಲಿಗೆ ಬಾಗ್‌ಬಹರಾ ರೈಲು ನಿಲ್ದಾಣದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಈ ಕೃತ್ಯದಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದರೆ ಸಿ2-10, ಸಿ4-1 ಹಾಗೂ ಸಿ9-78 ಎಂಬ ಮೂರು ಕೋಚ್‌ಗಳ ಕಿಟಕಿಗಳಿಗೆ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article