ಕರ್ನೂಲ್ (ಆಂಧ್ರಪ್ರದೇಶ)ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಹವಾನಿಯಂತ್ರಿತ ಸ್ಲೀಪರ್ ಬಸ್ಸೊಂದು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಇದರ ಪರಿಣಾಮ ದೀಪಾವಳಿ ಮುಗಿಸಿ ಬೆಂಗಳೂರಿಗೆ ಬಸ್ಸಿನಲ್ಲಿ ಮರಳುತ್ತಿದ್ದವರು ಸೇರಿದಂತೆ 20 ಜನರು ಸಜೀವ ದಹನವಾಗಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶುಕ್ರವಾರ ನಸುಕಿನ ಜಾವ (ಗುರುವಾರ ತಡರಾತ್ರಿ) 2.40ರ ಸುಮಾರಿಗೆ ನಡೆದಿದೆ.
ಬಸ್‌ನಲ್ಲಿದ್ದ 43 ಜನರ ಪೈಕಿ 19 ಜನ ದಾರುಣವಾಗಿ ಸಾವನ್ನಪ್ಪಿದ್ದು, ಬೈಕರ್ ಕೂಡ ಸಾವನ್ನಪ್ಪಿದ್ದಾನೆ. ಬಸ್ಸಲ್ಲಿದ್ದ 24 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಲ್ಲಿ 22 ಪ್ರಯಾಣಿಕರು ಕಿಟಕಿಯಿಂದ ಹಾರಿ ಬಚಾವಾಗಿದ್ದರೆ, ಮಿಕ್ಕ ಇಬ್ಬರು ಬಸ್ಸಿನ ಚಾಲಕರು ಬಸ್ಸಿನಿಂದ ಜಿಗಿದು ಪರಾರಿಯಾಗಿದ್ದಾರೆ. ಮೃತರಲ್ಲಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶದ ಒಂದೇ ಕುಟುಂಬದ ನಾಲ್ವರು ಹಾಗೂ ಒಬ್ಬ ಟೆಕ್ಕಿ ಇದ್ದಾರೆ. ಮಿಕ್ಕವರಲ್ಲಿ 6 ಜನ ತೆಲಂಗಾಣದವರು ಹಾಗೂ 9 ಜನ ಆಂಧ್ರದವರು. ಆಂಧ್ರದವರಲ್ಲಿ ಬೈಕ್ ಸವಾರ ಪಾಂಚಾಲ ಶಿವಶಂಕರ ಕೂಡ ಸೇರಿದ್ದಾನೆ.
ಘಟನೆ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರವು ಸಾರಿಗೆ, ಕಂದಾಯ ಅಧಿಕಾರಿಗಳುಳ್ಳ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಆದಿಯಾಗಿ ಅನೇಕರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಆಗಿದ್ದೇನು?: 43 ಜನರನ್ನು ಹೊತ್ತಿದ್ದ ದಿಯು-ದಮನ್ ನೋಂದಾಯಿತ ‘ವೆಮೂರಿ ಕಾವೇರಿ ಟ್ರಾವೆಲ್ಸ್’ ಸ್ಲೀಪರ್ ಬಸ್ ಗುರುವಾರ ಬೆಳಗಿನ ಜಾವ 2:30ರ ಸುಮಾರಿಗೆ ಕರ್ನೂಲ್ ಬಳಿ ಸಾಗಿಬರುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ 400 ಮೀ. ದೂರದವರೆಗೂ ಬೈಕ್ ಅನ್ನು ಬಸ್ ತಳ್ಳಿಕೊಂಡು ಹೋಗಿದೆ. ಈ ವೇಳೆ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನಿಂದ ಇಂಧನ ಸೋರಿಕೆಯಾಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ವೈರ್ ತುಂಡಾಗಿ ಶಾರ್ಟ್ ಸರ್ಕೀಟ್ ಉಂಟಾದ ಕಾರಣ ಬಸ್‌ನ ಬಾಗಿಲು ಲಾಕ್ ಆಗಿದೆ. ಕೆಲವೇ ಕ್ಷಣಗಳಲ್ಲಿ ಧಗಧಗಿಸಿದ ಬೆಂಕಿಯಿಂದ ಎಚ್ಚರಗೊಂಡ ಪ್ರಯಾಣಿಕರು ಬಾಗಿಲು ತೆರೆಯಲು ಪ್ರಯತ್ನಿಸಿದರೂ ತೆರೆಯದ ಕಾರಣ ತುರ್ತುನಿರ್ಗಮನ ದ್ವಾರ ಮತ್ತು ಕಿಟಕಿ ಗಾಜುಗಳನ್ನು ಒಡೆದು ಹೊರಜಿಗಿದಿದ್ದಾರೆ. 19 ಪ್ರಯಾಣಿಕರು ಮಾತ್ರ ಹೊರಬರಲಾರದೆ ಬಸ್‌ನಲ್ಲಿಯೇ ಕರಕಲಾಗಿ ದಾರುಣ ಅಂತ್ಯ ಕಂಡಿದ್ದಾರೆ. ಬೈಕರ್ ಕೂಡ ಮೃತಪಟ್ಟಿದ್ದಾನೆ.
ಗುರುತು ಸಿಗದಷ್ಟು ಕರಕಲು : ಅನೇಕ ಮೃತದೇಹಗಳು ಗುರುತು ಸಿಗಲಾರದಷ್ಟು ಸುಟ್ಟುಹೋಗಿವೆ. ಶವಗಳನ್ನು ಬಸ್‌ನಿಂದ ಹೊರತೆಗೆಯಲಾಗಿದೆ. ಬೈಕ್ ಸವಾರನ ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ವೈದ್ಯಕೀಯ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹಗಳ ಡಿಎನ್ಎ ಮಾದರಿ ಸಂಗ್ರಹಿಸುತ್ತಿದ್ದು, ಶವಗಳ ಪತ್ತೆ ಕಾರ್ಯ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬ ಚಾಲಕರು ಪರಾರಿ, ತನಿಖೆ ಶುರು:ಬಸ್‌ನಲ್ಲಿ ಇಬ್ಬರು ಚಾಲಕರು ಸೇರಿದಂತೆ ಒಟ್ಟು 43 ಜನ ಇದ್ದರು. ಬೈಕ್ ಡಿಕ್ಕಿ ಹೊಡೆದ ಬಳಿಕ ಚಾಲಕ ಬಸ್ ಅನ್ನು ನಿಲ್ಲಿಸಲೇ ಇಲ್ಲ. ಚಾಲನೆ ಮಾಡುತ್ತಿದ್ದ ಚಾಲಕ ಹಾಗೂ ಸಹ ಚಾಲಕ- ಇಬ್ಬರೂ ಜಿಗಿದು ಪರಾರಿಯಾಗಿದ್ದಾರೆ. ಬಳಿಕ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನೊಬ್ಬನಿಗೆ ಶೋಧ ನಡೆದಿದೆ.
ಬೆಂಕಿ ಅವಘಡದ ನಂತರ ಕಿಟಕಿ ಗಾಜು ಒಡೆಯಲು ಯಾವುದೇ ಸುರಕ್ಷತಾ ಸುತ್ತಿಗೆಗಳು ಇರಲಿಲ್ಲ. ಹೀಗಾಗಿ ಇಡೀ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರಗಳಿಂದ 12 ಲಕ್ಷ ರು. ಪರಿಹಾರದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 12 ಲಕ್ಷ ರು. ಪರಿಹಾರ ಪ್ರಕಟಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರು. ಹಾಗೂ ಗಾಯಾಳುಗಳಿಗೆ 50,000 ರು. ಪರಿಹಾರಧನ ನೀಡುವುದಾಗಿ ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಹಾಗೂ ಗಾಯಗೊಂಡವರಿಗೆ ತಲಾ 2 ಲಕ್ಷ ರು. ಪರಿಹಾರ ನೀಡುವುದಾಗಿ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸರ್ಕಾರಗಳೂ ಘೋಷಣೆ ಮಾಡಿವೆ.
ಸಹಾಯವಾಣಿ ಸಂತ್ರಸ್ತರಿಗಾಗಿ ತೆಲಂಗಾಣ ಸರ್ಕಾರ ಸಹಾಯವಾಣಿ ತೆರೆದಿದ್ದು, ತುರ್ತು ಅಗತ್ಯಗಳಿಗಾಗಿ ಎಂ. ಶ್ರೀರಾಮಚಂದ್ರ (9912919545) ಹಾಗೂ ಇ. ಚಿಟ್ಟಿಬಾಬು (9440854433) ಅವರನ್ನು ಸಂಪಕಿರ್ಸುವಂತೆ ತಿಳಿಸಿದೆ.
ಎಲ್ಲಿ?: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಚಿನ್ನತೇಕೂರು ಸನಿಹಎಷ್ಟೊತ್ತಿಗೆ: ಶುಕ್ರವಾರ ನಸುಕಿನ 2.40ರ ಸುಮಾರಿಗೆಏನಾಯ್ತು?: ಬೈಕ್‌ಗೆ ಗುದ್ದಿದ, ಅದನ್ನು 400 ಮೀ. ಎಳೆದೊಯ್ದ ಬಸ್. ಆಗ ಬೈಕ್ ಪೆಟ್ರೋಲ್ ಟ್ಯಾಂಕ್ ಸೋರಿಕೆ ಆಗಿ ಬಸ್ಸಿಗೆ ಬೆಂಕಿಪರಿಣಾಮ: ಬಸ್ಸಿನಲ್ಲಿದ್ದ 19 ಜನರ ಸಜೀವ ದಹನ, ಬೈಕರ್ ಸಾವು, 22 ಜನರು ಕಿಟಕಿ ಒಡೆದು ಪಾರು, ಚಾಲಕರಿಬ್ಬರು ಪರಾರಿ, ಒಬ್ಬನ ಬಂಧನ--