ವಿಶ್ವಸಂಸ್ಥೆ: ಭಾರತ ಸರ್ಕಾರ ತನ್ನ ದೇಶಕ್ಕೆ ಸರಾಗವಾಗಿ ಹರಿಯುತ್ತಿದ್ದ ಸಿಂಧೂ ನದಿಯ ಹರಿವಿಗೆ ತಡೆಯೊಡ್ಡಿದ ಕಾರಣ, ದೇಶದಲ್ಲಿ ಕಂಡುಕೇಳರಿಯದ ಬಿಕ್ಕಟ್ಟು ಎದುರಾಗಿದೆ. ದೇಶದ 24 ಕೋಟಿ ಜನರು ನಾನಾ ರೀತಿಯ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ವಿಶ್ವಸಂಸ್ಥೆಯಲ್ಲಿ ಗೋಳಿಟ್ಟಿದೆ.
ಪಾಕ್ ಮೂಲದ ಉಗ್ರರು ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಬಳಿಕ, ಶತ್ರು ದೇಶದ ಮೇಲೆ ಆಪರೇಷನ್ ಸಿಂದೂರದ ಮೂಲಕ ಪ್ರತೀಕಾರ ಕೈಗೊಂಡಿದ್ದ ಭಾರತ ಮತ್ತೊಂದೆಡೆ ರಾಜತಾಂತ್ರಿಕ ಮತ್ತು ಇತರೆ ಕ್ರಮಗಳ ಮೂಲಕ ಪಾಕಿಸ್ತಾನಕ್ಕೆ ಏಟು ನೀಡಿತ್ತು. ಅದರಲ್ಲಿ ಪಾಕ್ ಜೊತೆಗಿನ ಸಿಂಧೂ ನದಿ ಒಪ್ಪಂದ ತಡೆ ಹಿಡಿಯುವ ಅಂಶ ಸೇರಿದ್ದು. ಇದರಿಂದ ಆಗ ಪೆಟ್ಟಿನ ಬಗ್ಗೆ ಇದೇ ಮೊದಲ ಬಾರಿಗೆ ಪಾಕಿಸ್ತಾನ ಬಹಿರಂಗವಾಗಿ ಮಾತನಾಡಿದೆ.
ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರತಿನಿಧಿ ಉಸ್ಮಾನ್ ಜಾದೂನ್, ‘ಸಿಂಧೂ ನದಿ ಪಾಕಿಸ್ತಾನದ ಶೇ.80ರಷ್ಟು ನೀರಿನ ಅಗತ್ಯವನ್ನು ಪೂರೈಸುತ್ತದೆ. 24 ಕೋಟಿ ಜನರಿಗೆ ಇದೇ ಜೀವನಾಧಾರ. ಆದರೆ ಭಾರತ ಸರ್ಕಾರ ಸಿಂಧೂ ನದಿಯ ಹರಿವಿಗೆ ಅಡ್ಡಿ ಮಾಡಿದ ಬಳಿಕ ಈಗ ಪಾಕಿಸ್ತಾನದ ಪ್ರಜೆಗಳಿಗೆ ನೀರಿನ ಅಭದ್ರತೆ ಎದುರಾಗುತ್ತಿದೆ.
ದೇಶವು ಈಗಾಗಲೇ ಪ್ರವಾಹ, ಬರಗಾಲ, ಹಿಮನದಿ ಕರಗುವಿಕೆ, ಅಂತರ್ಜಲ ಕುಸಿತ ಮತ್ತು ತ್ವರಿತ ಜನಸಂಖ್ಯಾ ಬೆಳವಣಿಗೆಯೊಂದಿಗೆ ಹೋರಾಡುತ್ತಿದೆ. ಇದರ ಜೊತೆ ಸಿಂಧೂ ನೀರಿನ ಸ್ಥಗಿತ ನೀರಿನ ವ್ಯವಸ್ಥೆಗಳ ಮೇಲೆ ಅಪಾರ ಒತ್ತಡವನ್ನುಂಟುಮಾಡುತ್ತಿದೆ. ಭಾರತದ ಈ ನಿರ್ಧಾರವು ಜಲ ಶಸ್ತ್ರೀಕರಣವಾಗಿದ್ದು, 1960ರ ಒಪ್ಪಂದವನ್ನು ಉಲ್ಲಂಘಿಸುತ್ತದೆ’ ಎಂದಿದ್ದಾರೆ.