ದೇಶದ ಈಶಾನ್ಯದಲ್ಲಿ ಮಳೆಯಬ್ಬರ - ಪ್ರವಾಹ, ಭೂಕುಸಿತ : ಸಾವು 30ಕ್ಕೇರಿಕೆ

KannadaprabhaNewsNetwork |  
Published : Jun 02, 2025, 12:12 AM ISTUpdated : Jun 02, 2025, 04:49 AM IST
ಪ್ರವಾಹ | Kannada Prabha

ಸಾರಾಂಶ

ದೇಶದ ಈಶಾನ್ಯ ರಾಜ್ಯಗಳಲ್ಲಿ ಮಳೆರಾಯ ತನ್ನ ಅಬ್ಬರವನ್ನು ಇನ್ನಷ್ಟು ಹೆಚ್ಚಿಸಿದ್ದು, ನದಿಗಳೆಲ್ಲಾ ಉಕ್ಕಿ ಹರಿದು, ಪ್ರವಾಹ, ಭೂಕುಸಿತಗಳಂತಹ ಘಟನೆಗಳಿಂದ ಸಾವಿರಾರು ಜನರ ಜೀವನ ಅಸ್ತವ್ಯಸ್ತವಾಗಿದೆ. 

ಇಂಫಾಲ್‌/ಅಗರ್ತಲಾ: ದೇಶದ ಈಶಾನ್ಯ ರಾಜ್ಯಗಳಲ್ಲಿ ಮಳೆರಾಯ ತನ್ನ ಅಬ್ಬರವನ್ನು ಇನ್ನಷ್ಟು ಹೆಚ್ಚಿಸಿದ್ದು, ನದಿಗಳೆಲ್ಲಾ ಉಕ್ಕಿ ಹರಿದು, ಪ್ರವಾಹ, ಭೂಕುಸಿತಗಳಂತಹ ಘಟನೆಗಳಿಂದ ಸಾವಿರಾರು ಜನರ ಜೀವನ ಅಸ್ತವ್ಯಸ್ತವಾಗಿದೆ. ಮಳೆ ಸಂಬಂಧಿತ ಅವಘಡಗಳಿಗೆ ಬಲಿಯಾದವರ ಸಂಖ್ಯೆ 30 ತಲುಪಿದೆ. ಜನ ಜೀವ ಉಳಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅರುಣಾಚಲ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಭೂಕುಸಿತದಲ್ಲಿ 2 ಪರಿವಾರದ 7 ಜನ ಮತ್ತು 2 ಕಾರ್ಮಿಕರು ಸಾವನ್ನಪ್ಪಿದರು.

ಅಸ್ಸಾಂನಲ್ಲಿ ಉಕ್ಕಿದ 10 ನದಿ:  ಅಸ್ಸಾಂನಲ್ಲಿ 10 ನದಿಗಳು ಉಕ್ಕೇರಿ 10 ಜಿಲ್ಲೆಗಳ ಬಹುತೇಕ ಪ್ರದೇಶಗಳು ಈಗಾಗಲೇ ಜಲಾವೃತವಾಗಿವೆ. ಭೂಕುಸಿತದಿಂದ 5, ಪ್ರವಾಹಕ್ಕೆ ಸಿಲುಕಿ 3 ಮಂದಿ ಅಸುನೀಗಿದ್ದಾರೆ. ಲಖಿಂಪುರ ಜಿಲ್ಲೆಗೆ ಅತಿ ಹೆಚ್ಚು ಹಾನಿಯಾಗಿದೆ. 78,000 ಜನರಿಗೆ ಅಪಾಯ ಎದುರಾಗಿದೆ. ನದಿಗಳೆಲ್ಲಾ ಉಕ್ಕಿ ಹರಿಯುತ್ತಿದ್ದು, ಸಾಲದ್ದಕ್ಕೆ ಅರುಣಾಚಲ ಮತ್ತು ಮೇಘಾಲಯದಿಂದಲೂ ಪ್ರವಾಹ ನುಗ್ಗಿ ಬರುತ್ತಿದೆ.

ಸಿಎಂ ನಿವಾಸ ಮುಂದೆಯೂ ನೆರೆ:

ಮಿಜೋರಂನಲ್ಲಿ ಮ್ಯಾನ್ಮಾರ್‌ನ 3 ನಿರಾಶ್ರಿತರು ಸೇರಿದಂತೆ 6 ಜನ ಸಾವನ್ನಪ್ಪಿದ್ದಾರೆ. ತ್ರಿಪುರದಲ್ಲಿ 16 ವರ್ಷದ ಬಾಲಕ ಮೃತಪಟ್ಟಿದ್ದಾನೆ. ರಾಜಧಾನಿ ಅಗರ್ತಲದಲ್ಲಿ 3 ಗಂಟೆಯಲ್ಲಿ 200 ಎಂ.ಎಂ. ಮಳೆಯಾಗಿದ್ದು, ಸಿಎಂ ನಿವಾಸದ ಮುಂದೆಯೂ ಮೊಣಕಾಲು ಮುಳುಗುವಷ್ಟು ನೀರು ನಿಂತಿದೆ.

ಸಿಕ್ಕಿಂನಲ್ಲಿ ಅನೇಕರು ಅತಂತ್ರ :ಅತ್ತ ಸಿಕ್ಕಿಂನಲ್ಲಿ ಒಡಿಶಾ, ತ್ರಿಪುರ ಮತ್ತು ಉತ್ತರ ಪ್ರದೇಶದ 11 ಪ್ರವಾಸಿಗರಿದ್ದ ವಾಹನವೊಂದು ತೀಸ್ತಾ ನದಿಗೆ ಬಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, 8 ಮಂದಿ ಕಾಣೆಯಾಗಿದ್ದಾರೆ. ವಿವಿಧೆಡೆಗಳಲ್ಲಿ ಸಿಲುಕಿರುವ ಪ್ರವಾಸಿಗರು ಅತಂತ್ರರಾಗಿದ್ದಾರೆ.

ಮಣಿಪುರದಲ್ಲಿ 883 ಮನೆಗೆ ಹಾನಿ:

ಮಣಿಪುರದ ಮಳೆಗೆ 883 ಮನೆಗಳಿಗೆ ಹಾನಿಯಾಗಿದ್ದು, 3,802 ಜನರಿಗೆ ತೊಂದರೆಯಾಗಿದೆ. ರಾಜ್ಯದಲ್ಲಿ ಈವರೆಗೆ 12 ಭೂಕುಸಿತಗಳು ಸಂಭವಿಸಿವೆ.

 ಮಳೆ ಪೀಡಿತ ರಾಜ್ಯಗಳ ಸಿಎಂ ಜತೆ ಶಾ ಮಾತು

ಈಶಾನ್ಯ ರಾಜ್ಯಗಳಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಸಾವುನೋವುಗಳು ಸಂಭವಿಸುತ್ತಿರುವ ನಡುವೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಸ್ಸಾಂ, ಅರುಣಾಚಲ, ಸಿಕ್ಕಿಂನ ಮುಖ್ಯಮಂತ್ರಿಗಳು ಮತ್ತು ಮಣಿಪುರದ ರಾಜ್ಯಪಾಲರ ಜತೆ ಆ ಕುರಿತು ಸಂಭಾಷಿಸಿದ್ದಾರೆ. ಈ ವೇಳೆ, ಸಾಧ್ಯವಿರುವ ಎಲ್ಲಾ ನೆರವು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆರೆ ಪುನರುಜ್ಜೀವನಗೈದ ಬೆಂಗ್ಳೂರಿಗಗೆ ಮನ್‌ ಕಿ ಬಾತ್‌ಲ್ಲಿ ಮೋದಿ ಭೇಷ್‌