;Resize=(412,232))
ಬೆಂಗಳೂರು : ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಗ್ಯಾಸ್ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಹೀಗಾಗಿ ಬುಧವಾರದಿಂದಲೇ ಬೆಂಗಳೂರಿನಲ್ಲಿ ಶೇ.30ರಷ್ಟು ಸೇರಿದಂತೆ ರಾಜ್ಯವ್ಯಾಪಿ ಹೋಟೆಲ್‌ಗಳು ಬಂದ್ ಆಗುವ ಆತಂಕ ಎದುರಾಗಿದೆ. ಹೋಟೆಲ್‌ಗಳು ಮಾತ್ರವಲ್ಲದೇ ವಾಣಿಜ್ಯ ಬಳಕೆ ಸಿಲಿಂಡರ್ ಅವಲಂಬಿಸಿರುವ ಕಲ್ಯಾಣ ಮಂಟಪಗಳು, ಪಿಜಿಗಳು ಹಾಗೂ ಕ್ಯಾಟರಿಂಗ್‌ನವರೂ ಸಮಸ್ಯೆಗೆ ಸಿಲುಕಿದ್ದಾರೆ.
ಇನ್ನು ಗ್ಯಾಸ್ ಚಾಲಿತ ಆಟೋಗಳ ಸಂಚಾರದಲ್ಲೂ ವ್ಯತ್ಯಯ ಕಂಡುಬಂದಿದ್ದು, ನಗರದ ಕೆಲ ಆಟೋ ಎಲ್ಪಿಜಿ ಕೇಂದ್ರಗಳು ಮಂಗಳವಾರ ಮುಚ್ಚಿದ್ದು, ಮುಂದಿನ ದಿನಗಳಲ್ಲಿ ಆಟೋ ಎಲ್ಪಿಜಿ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದ್ ಆಗುವ ಸಾಧ್ಯತೆಗಳಿವೆ.
ಸೋಮವಾರವೇ ಸಮರ್ಪಕವಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಸರಬರಾಜು ಮಾಡಿಲ್ಲ ಎಂದು ಬೆಂಗಳೂರು ಹೋಟೆಲುಗಳ ಸಂಘವು ಆಕ್ರೋಶ ವ್ಯಕ್ತಪಡಿಸಿತ್ತು. ಆದರೂ ಮಂಗಳವಾರವೂ ಸಿಲಿಂಡರ್ ಸರಬರಾಜು ಆಗದೇ ಇರುವುದರಿಂದ ಬುಧವಾರದಿಂದ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಹೋಟೆಲ್ ಉದ್ಯಮ ಆತಂಕ ವ್ಯಕ್ತಪಡಿಸಿದೆ.
ಮತ್ತೊಂದೆಡೆ, ಕಲ್ಯಾಣ ಮಂಟಪಗಳು, ಕ್ಯಾಟರಿಂಗ್‌ನವರು, ಪಿಜಿಗಳನ್ನು ನಡೆಸುವವರೂ ವಾಣಿಜ್ಯ ಅನಿಲ ಸಿಲಿಂಡರ್ ಪೂರೈಕೆಯಾಗದೆ ಸಂಕಷ್ಟ ಅನುಭವಿಸಿದ್ದಾರೆ. ಕೆಲ ಹೋಟೆಲ್‌ನವರು ಸಿಲಿಂಡರ್ ಕೊರತೆಯಿಂದಾಗಿ ಸೌಧೆ ಒಲೆಯಲ್ಲೇ ತಿನಿಸುಗಳನ್ನು ತಯಾರಿಸಿದ್ದು ಕಂಡುಬಂತು. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವಾಗುತ್ತಿದ್ದು, ತಿಂಡಿ ತಿನಿಸುಗಳ ಬೆಲೆಯೂ ಮುಂದಿನ ದಿನಗಳಲ್ಲಿ ಅಧಿಕವಾಗುವ ಸಂಭವವಿದೆ.
ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬೆಂಗಳೂರು ಹೋಟೆಲುಗಳ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್, ‘ಸೋಮವಾರವೇ ವಾಣಿಜ್ಯ ಬಳಕೆ ಸಿಲಿಂಡರ್ ಸಮರ್ಪಕವಾಗಿ ಸರಬರಾಜು ಮಾಡಿರಲಿಲ್ಲ. ಮಂಗಳವಾರ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವಿತ್ತು. ಆದರೆ ಮಂಗಳವಾರ ಸಿಲಿಂಡರ್ ಪೂರೈಕೆ ಆಗದಿರುವ ಕಾರಣ ಬುಧವಾರ ಬೆಂಗಳೂರಿನ ಶೇ.30 ರಷ್ಟು ಹೋಟೆಲ್‌ಗಳು ಬಂದ್ ಆಗಲಿವೆ’ ಎಂದು ಸ್ಪಷ್ಟಪಡಿಸಿದರು.
ನಗರದ ಒಂದಷ್ಟು ಹೋಟೆಲ್‌ಗಳಲ್ಲಿ ಸೌಧೆ ಬಳಸಿ ಅಡುಗೆ ತಯಾರಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಇನ್ನು ಎರಡ್ಮೂರು ದಿನದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿರುವ ಹೋಟೆಲ್‌ಗಳೂ ಬಂದ್ ಆಗಲಿವೆ. 1,900 ರು. ಮೌಲ್ಯದ ವಾಣಿಜ್ಯ ಬಳಕೆ ಸಿಲಿಂಡರ್ ಅನ್ನು ಕೆಲವೆಡೆ ಕಾಳಸಂತೆಯಲ್ಲಿ ನಾಲ್ಕರಿಂದ ಐದು ಸಾವಿರ ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ವಿವರಿಸಿದರು.ರಾಜ್ಯವ್ಯಾಪಿ ಸಮಸ್ಯೆ:
25 ಕೆಜಿಯ ಕಮರ್ಷಿಯಲ್ ಸಿಲಿಂಡರ್ ಸಿಗದ ಕಾರಣ ಬಳ್ಳಾರಿಯಲ್ಲಿ ಹೋಟೆಲ್‌ಗಳಲ್ಲಿ 5 ಕೆಜಿಯ ಸಣ್ಣ ಕಮರ್ಷಿಯಲ್ ಸಿಲಿಂಡರ್ ಬಳಸಲಾಗುತ್ತಿದೆ.
ಕೋಲಾರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ರಾಯಚೂರಿನಲ್ಲೂ ವಾಣಿಜ್ಯ ಬಳಕೆಯ ಅಡುಗೆ ಸಿಲಿಂಡರ್ ಸಿಗದೇ ಹೋಟೆಲ್ ಉದ್ಯಮಿಗಳು ಪರದಾಡುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಹೋಟೆಲ್ ಮಾಲೀಕರು ಕೆಲ ತಿಂಡಿಗಳಿಗೆ ಬ್ರೇಕ್ ಹಾಕಿದ್ದಾರೆ. ಮಸಾಲಾ ದೋಸೆ, ಸೆಟ್ ದೊಸೆ ಸೇರಿ 10ಕ್ಕೂ ಹೆಚ್ಚು ತಿಂಡಿಗಳನ್ನು ಬಂದ್ ಮಾಡಿದ್ದಾರೆ. ಬೀದರ್ ಜಿಲ್ಲೆಯ ಏಜೇನ್ಸಿಗಳಲ್ಲಿ ಗ್ಯಾಸ್ ಇಲ್ಲದೇ ಗೋದಾಮುಗಳು ಖಾಲಿ ಹೊಡೆಯುತ್ತಿವೆ.
ಯಾದಗಿರಿಯಲ್ಲಿ ಮೂರು ದಿನಕ್ಕೆ ಆಗುವಷ್ಟು ಮಾತ್ರ ವಾಣಿಜ್ಯ ಸಿಲಿಂಡರ್ ಸ್ಟಾಕ್ ಇದ್ದು, ಆತಂಕಕ್ಕೆ ಕಾರಣವಾಗಿದೆ. ಬೀದರ್‌ನಲ್ಲಿ ಹೋಟೆಲ್‌ನವರು ಸೌದೆ ಒಲೆ ಹಚ್ಚಿ ಊಟ-ಉಪಹಾರ ತಯಾರಿಸುತ್ತಿದ್ದಾರೆ. ಸಿಲಿಂಡರ್ ಸ್ಟಾಕ್ ಬದಲು, ಸೌದೆ ಸ್ಟಾಕ್ ಮಾಡಿಕೊಳ್ಳುತ್ತಿದ್ದಾರೆ. ಕಲಬುರಗಿಯಲ್ಲಿ 300ಕ್ಕೂ ಹೆಚ್ಚು ಹೋಟೆಲ್‌ಗಳು ಸಿಲಿಂಡರ್ ಸಪ್ಲೈ ಇಲ್ಲದಕ್ಕೆ ಬಂದ್ ಮಾಡುವ ಸ್ಥಿತಿ ಎದುರಿಸುತ್ತಿವೆ. ಕೊಡಗಿನಲ್ಲಿ ನಾಲ್ಕು ದಿನಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಬರದೆ ಪರದಾಡುವಂತಾಗಿದೆ.
ಆಟೋ ಗ್ಯಾಸ್ ಸಪ್ಲೈ ಕೂಡ ಸಂಪೂರ್ಣ ಬಂದ್ ಆಗಿದ್ದು, ಹಾವೇರಿ, ಧಾರವಾಡ, ವಿಜಯಪುರದಲ್ಲಿ ಎಲ್‌ಪಿಜಿ ಗ್ಯಾಸ್ ಬಳಕೆ ಮಾಡುವ ಆಟೋ ಚಾಲಕರು ತೊಂದರೆಗೆ ಸಿಲುಕಿದ್ದಾರೆ. ಸಾಲ-ಸೋಲ ಮಾಡಿ ಆಟೋ ಖರೀದಿ ಮಾಡಿರುವ ಚಾಲಕರ ಪರಿಸ್ಥಿತಿ ಅಯೋಮಯವಾಗುತ್ತಿದೆ.
ಆಟೋ ಗ್ಯಾಸ್ ದುಬಾರಿ:
ಮತ್ತೊಂದೆಡೆ, ಯುದ್ಧದ ಪರಿಣಾಮದಿಂದಾಗಿ ಆಟೋ ಎಲ್ಪಿಜಿ ಪೂರೈಕೆಯಲ್ಲೂ ವ್ಯತ್ಯಯವಾಗಿದ್ದು, ಕೆಲ ಬಂಕ್‌ಗಳು ಮುಚ್ಚಿವೆ. ಭವಿಷ್ಯದಲ್ಲಿ ದರವೂ ದುಬಾರಿಯಾಗುವ ಲಕ್ಷಣಗಳಿವೆ. ನಗರದ ಗ್ಯಾಸ್ ಬಂಕ್ ಉದ್ಯೋಗಿಯೊಬ್ಬರ ಮಾಹಿತಿ ಪ್ರಕಾರ ಮಾ.1 ರಂದು ಒಂದು ಲೀಟರ್ ಆಟೋ ಅನಿಲ ಬೆಲೆ (ಸಾಮಾನ್ಯವಾಗಿ ಬಂಕ್‌ನವರು ಕೆಜಿಗೆ ಬದಲು ಲೀಟರ್ ಪ್ರಕಾರ ದರ ಲೆಕ್ಕ ಹಾಕುತ್ತಾರೆ) 59.74 ರುಪಾಯಿ ಇತ್ತು. ಆದರೆ ಪ್ರಸಕ್ತ 69.74 ರುಪಾಯಿಗೆ ಬಂದು ಮುಟ್ಟಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಆಟೋ ಅನಿಲವೂ ದುಬಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.
ಬಂಕ್‌ಗಳೂ ಬಂದ್:
ಎಚ್‌ಪಿ ಸೇರಿ ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ಆಟೋ ಎಲ್‌ಪಿಜಿ ಸರಬರಾಜು ಮಾಡುತ್ತಿವೆ. ಈ ಕಂಪೆನಿಗಳಿಂದ ಕೆಲವರು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿ ಇನ್ನುಳಿದವರಿಗೆ ಮಾರಾಟ ಮಾಡುತ್ತಾರೆ. ಬೆಲೆ ಹೆಚ್ಚಳವಾಗುತ್ತಿದ್ದಂತೆ ಕೆಲ ಬಂಕ್‌ಗಳೂ ಈಗಾಗಲೇ ಮುಚ್ಚಿವೆ ಎಂದು ವಿವರಿಸಿದರು.