ಲೋಕಸಭಾ ಚುನಾವಣೆಯ ಕಳಪೆ ಸಾಧನೆ: ಅಜಿತ್‌ ಬಣಕ್ಕೆ 28 ನಾಯಕರು ಗುಡ್‌ಬೈ: ಶರದ್‌ ಬಣಕ್ಕೆ ಜಂಪ್‌

KannadaprabhaNewsNetwork | Updated : Jul 18 2024, 05:16 AM IST

ಸಾರಾಂಶ

ಇತ್ತೀಚಿನ ಲೋಕಸಭಾ ಚುನಾವಣೆಯ ಕಳಪೆ ಸಾಧನೆ ಬೆನ್ನಲ್ಲೇ ಮಹಾರಾಷ್ಟ್ರದ ಪಿಂಪ್ರಿ ಚಿಚ್ವಾಡದ ಅಜಿತ್‌ ಪವಾರ್‌ ಬಣದ ಎನ್‌ಸಿಪಿಯ 28 ನಾಯಕರು ಬುಧವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ, ಶರದ್‌ ಪವಾರ್ ಬಣದ ಎನ್‌ಸಿಪಿ ಸೇರಿದ್ದಾರೆ. ಸ್ವತಃ ಶರದ್‌, ಈ ನಾಯಕರನ್ನು ಸ್ವಾಗತಿಸಿದರು.

ಮುಂಬೈ: ಇತ್ತೀಚಿನ ಲೋಕಸಭಾ ಚುನಾವಣೆಯ ಕಳಪೆ ಸಾಧನೆ ಬೆನ್ನಲ್ಲೇ ಮಹಾರಾಷ್ಟ್ರದ ಪಿಂಪ್ರಿ ಚಿಚ್ವಾಡದ ಅಜಿತ್‌ ಪವಾರ್‌ ಬಣದ ಎನ್‌ಸಿಪಿಯ 28 ನಾಯಕರು ಬುಧವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ, ಶರದ್‌ ಪವಾರ್ ಬಣದ ಎನ್‌ಸಿಪಿ ಸೇರಿದ್ದಾರೆ. ಸ್ವತಃ ಶರದ್‌, ಈ ನಾಯಕರನ್ನು ಸ್ವಾಗತಿಸಿದರು.

ಈ ವೇಳೆ ಅಜಿತ್‌ ಕೂಡ ಮರಳುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶರದ್, ‘ಈ ವಿಷಯ ನಿರ್ಣಯಿಸುವವ ನಾನಲ್ಲ. ಪಕ್ಷ’ ಎಂದರು.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಬಣ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿ ಕೇವಲ 1 ಸ್ಥಾನ ಗೆದ್ದಿತ್ತು. ಆದರೆ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ಶರದ್‌ ಪವಾರ್‌ ಬಣದ 8 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಬಿಜೆಪಿ ಕಳಪೆ ಸಾಧನೆಗೆ ಅಜಿತ್‌ ಎನ್‌ಸಿಪಿ ಮೈತ್ರಿ ಕಾರಣ: ಅರೆಸ್ಸೆಸ್‌ ಪತ್ರಿಕೆ

ಮುಂಬೈ: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ಕಳಪೆ ಸಾಧನೆಗೆ ಅದು ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಕಾರಣ ಎಂದು ಆರ್‌ಎಸ್‌ಎಸ್‌ ನಂಟಿನ ಮರಾಠಿ ವಾರಪತ್ರಿಕೆ ‘ವಿವೇಕ’ ಆಕ್ಷೇಪಿಸಿದೆ. ಮೈತ್ರಿಗೆ ಸ್ಥಳೀಯರ ಕಾರ್ಯಕರ್ತರು, ನಾಯಕರ ವಿರೋಧವಿದ್ದರೂ ಬಿಜೆಪಿ ಮೈತ್ರಿ ಮಾಡಿಕೊಂಡಿತು. ಇದು ಮತದಾರರ ಭಾವನೆಗಳಿಗೆ ವಿರುದ್ಧವಾಗಿತ್ತು. ಹೀಗಾಗಿ ಕಳೆದ ಬಾರಿ 23 ಸ್ಥಾನ ಗೆದ್ದಿದ್ದ ಪಕ್ಷ ಈ ಬಾರಿ 8ಕ್ಕೆ ಇಳಿಯಿತು. ಇನ್ನೊಂದೆಡೆ ಮಧ್ಯಪ್ರದೇಶದಲ್ಲಿ ಕಾರ್ಯಕರ್ತರು, ಸ್ಥಳೀಯರ ನಾಯಕರಿಗೆ ಮಾತಿಗೆ ಬೆಲೆ ಕೊಟ್ಟಿದ್ದಕ್ಕೆ ಮಧ್ಯಪ್ರದೇಶದಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್‌ ಮಾಡಿತು ಎಂದು ಪತ್ರಿಕೆ ಹೇಳಿದೆ.

ಪತಿ ಮೇಲೆ ಕಿಡಿಕಾರಿ ದುಬೈ ಅರಸನ ಪುತ್ರಿ ಮಹ್ರಾ ವಿಚ್ಧೇದನ

ದುಬೈ: ದುಬೈ ರಾಜನ ಪುತ್ರಿ ಶೇಖಾ ಮಹ್ರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ತಮ್ಮ ಪತಿ ಮಾನಾ ಬಿನ್‌ ಮೊಹಮ್ಮದ್ ಬಿನ್‌ ರಶೀದ್ ಬಿನ್ ಅಲ್ ಮಕ್ತೌಮ್‌ ಅವರಿಂದ ವಿಚ್ಛೇದನ ಪಡೆದಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಪ್ರಿಯ ಪತಿ, ನೀವು ನಿಮ್ಮ ಅನ್ಯ ಸಂಗಾತಿಗಳೊಂದಿಗೆ ವ್ಯಸ್ತವಾಗಿರುವ ಕಾರಣ ನಿಮಗೆ ವಿಚ್ಛೇದನ ಕೊಡುತ್ತಿದ್ದೇನೆ- ಐ ಡಿವೋರ್ಸ್‌ ಯು, ಐ ಡಿವೋರ್ಸ್‌ ಯು, ಐ ಡಿವೋರ್ಸ್‌ ಯು. ನಿಮ್ಮ ಮಾಜಿ ಪತ್ನಿ’ ಎಂದು ಬರೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ ಅವರಿಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಜೊತೆಗಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಮಹ್ರಾ ಅವರ ಖಾತೆ ಹ್ಯಾಕ್‌ ಆಗಿರುವ ಬಗ್ಗೆಯೂ ಅನೇಕರು ಸಂಶಯ ವ್ಯಕ್ತಪಡಿಸುತ್ತಿದ್ದು, ಆಕೆಯ ಈ ನಿರ್ಧಾರಕ್ಕೆ ಶ್ಲಾಘನೆಯೂ ವ್ಯಕ್ತವಾಗುತ್ತಿದೆ.ಕಳೆದ ವರ್ಷ ಮದುವೆಯಾದ ದಂಪತಿಗೆ ಒಂದು ಹೆಣ್ಣುಮಗುವಿದೆ.

ಮಹಿಳಾ ಸಬಲೀಕರಣವನ್ನು ಪ್ರತಿಪಾದಿಸುವ ಮಹ್ರಾ, ಯುಎಇಯ ಸ್ಥಳೀಯ ವಿನ್ಯಾಸಕರೂ ಆಗಿದ್ದಾರೆ.

ಒಮಾನ್‌ ಕರಾವಳಿಯಲ್ಲಿ ಮಗುಚಿದ್ದ ಹಡಗಲ್ಲಿನ 8 ಭಾರತೀಯರ ರಕ್ಷಣೆ

ಮಸ್ಕತ್: ಒಮಾನ್ ಕರಾವಳಿಯಲ್ಲಿ ಕೊಮೊರಿಯನ್ ಧ್ವಜದ ತೈಲ ಟ್ಯಾಂಕರ್ ಮಗುಚಿದ ಕಾರಣ ನಾಪತ್ತೆ ಆಗಿದ್ದ 16 ನೌಕಾ ಸಿಬ್ಬಂದಿ ಪೈಕಿ ಬುಧವಾರ 9 ಮಂದಿಯನ್ನು ರಕ್ಷಿಸಲಾಗಿದೆ. ಇವರಲ್ಲಿ 8 ಭಾರತೀಯರು ಹಾಗೂ ಒಬ್ಬ ಶ್ರೀಲಂಕಾ ನಾಗರಿಕ ಇದ್ದಾರೆ. ಇನ್ನು 5 ಭಾರತೀಯರು ಹಾಗೂ 2 ಶ್ರೀಲಂಕನ್ನರು ಪತ್ತೆ ಆಗಬೇಕಿದೆ. ಮಂಗಳವಾರ ಮಗುಚಿಚ್ದ ಹಡಗಿನಲ್ಲಿ 13 ಭಾರತೀಯರು ಹಾಗೂ 3 ಲಂಕನ್ನರು ನಾಪತ್ತೆ ಆಗಿದ್ದರು. ಇವರ ರಕ್ಷಣೆಗೆ ನೌಕಾಪಡೆ ಕಾರ್ಯಾಚರಣೆ ನಡೆಸುತ್ತಿದೆ.

ತೆಲಂಗಾಣ: ಇಂದು ₹1 ಲಕ್ಷದ ವರೆಗಿನ ಕೃಷಿ ಸಾಲ ಮನ್ನಾ

ಹೈದರಾಬಾದ್: ಚುನಾವಣಾ ಭರವಸೆಯಂತೆ 1 ಲಕ್ಷದ ರು.ವರೆಗಿನ ಕೃಷಿ ಸಾಲಗಳನ್ನು ಗುರುವಾರ ಮನ್ನಾ ಮಾಡುತ್ತದೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಬುಧವಾರ ಘೋಷಿಸಿದ್ದಾರೆ.ಕಾಂಗ್ರೆಸ್‌ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ‘ರೈತರ ಮೇಲಿನ ಸಾಲದ ಹೊರೆಯನ್ನು ತಗ್ಗಿಸಲು ₹2 ಲಕ್ಷ ಕೃಷಿ ಸಾಲ ಮನ್ನಾ ಮಾಡುವ ಸರ್ಕಾರದ ಭರವಸೆಯಂತೆ ಗುರುವಾರ 7,000 ಕೋಟಿ ರು. ಬಿಡುಗಡೆ ಮಾಡಲಾಗುತ್ತದೆ. ಹಂತಹಂತವಾಗಿ ₹1 ಲಕ್ಷ ಸಾಲ ಮಾಡಿರುವ ರೈತರ ಖಾತೆಗೆ ಸೇರಲಿದೆ’ ಎಂದರು.

Share this article