ಮುಂಬೈ: ವಿಮಾನ ಡಿಕ್ಕಿಯಾಗಿ 40 ಫ್ಲೆಮಿಂಗೋ ಹಕ್ಕಿಗಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಸೋಮವಾರ ಸಂಜೆ ಇಲ್ಲಿನ ಘಾಟ್ಕೋಪರ್ ಪ್ರದೇಶದಲ್ಲಿ ನಡೆದಿದೆ. ಘಟನೆ ಕುರಿತು ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.
ಮುಂಬೈನಿಂದ ಗುಜರಾತ್‌ನತ್ತ ತೆರಳುತ್ತಿದ್ದ ಪ್ಲೆಮಿಂಗೋಗಳ ಗುಂಪಿಗೆ ಸೋಮವಾರ ಸಂಜೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದ ಎಮಿರೇಟ್ಸ್ ಸಂಸ್ಥೆಯ ವಿಮಾನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ವಿಮಾನಕ್ಕೆ ಯಾವುದೇ ತೊಂದರೆಯಾಗದೇ ಸುರಕ್ಷಿತವಾಗಿ ನಿಲ್ದಾಣದಲ್ಲಿ ಬಂದಿಳಿಯಿತಾದರೂ, ಕನಿಷ್ಠ 40 ಹಕ್ಕಿಗಳು ಡಿಕ್ಕಿಯ ರಭಸಕ್ಕೆ ಸಾವನ್ನಪ್ಪಿ ಕೆಳಗೆ ಉರುಳಿಬಿದ್ದಿವೆ. ಘಾಟ್ಕೋಪರ್‌ನ ಲಕ್ಷ್ಮೀನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಹಕ್ಕಿಗಳು ಕೆಳಗೆ ಉರುಳಿ ಬಿದ್ದಿದ್ದನ್ನು ಸ್ಥಳೀಯರು ಪತ್ತೆ ಹಚ್ಚಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ವಿಮಾನಗಳನ್ನು ಪರಿಶೀಲಿಸಿದಾಗ ಎಮಿರೇಟ್ಸ್ ವಿಮಾನ ಡಿಕ್ಕಿ ಹೊಡೆದಿದ್ದು ಪತ್ತೆಯಾಗಿದ್ದು, ಅದನ್ನು ಮುಂದಿನ ಸಂಚಾರ ಮಾಡದಂತೆ ತಡೆಹಿಡಿಯಲಾಗಿದೆ. ಆದರೆ ವಿಮಾನ ಪ್ರಯಾಣಿಕರಿಗೆ ಏನೂ ಆಗಿಲ್ಲ.