ಒಟ್ಟಾವಾ: 1985ರಲ್ಲಿ 329 ಪ್ರಯಾಣಿಕರನ್ನು ಬಲಿ ಪಡೆದ ಏರ್ ಇಂಡಿಯಾ ಬಾಂಬ್ ಸ್ಫೋಟಕ್ಕೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರೇ ಕಾರಣ ಎಂದು ಇದೇ ಮೊದಲ ಬಾರಿ ಕೆನಡಾ ಸರ್ಕಾರ ಒಪ್ಪಿಕೊಂಡಿದೆ. ಈ ಮೂಲಕ 4 ದಶಕಗಳಿಂದ ಭಾರತ ಹೇಳುತ್ತಿದ್ದ ವಿಷಯವನ್ನು ಕೆನಡಾ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ.
1985ರ ಜೂ.23ರಂದು ಟೊರೊಂಟೋದಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 747 ವಿಮಾನದಲ್ಲಿ ಬಾಂಬ್ ಸ್ಫೋಟವಾಗಿ 329 ಜನ ಮೃತಪಟ್ಟಿದ್ದರು. ಇದು ಕೆನಡಾದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಭಯೋತ್ಪಾದಕ ದಾಳಿಯಾಗಿತ್ತು.
ಘಟನೆಯ ಸ್ಮರಣಾರ್ಥ ಕೆನಡಾ ಗುಪ್ತಚರ ಸಂಸ್ಥೆ ಸಿಎಸ್‌ಐಎಸ್ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಕೆನಡಾ ಮೂಲದ ಖಲಿಸ್ತಾನಿ ಉಗ್ರರು ಇಟ್ಟ ಬಾಂಬ್ ವಿಮಾನವನ್ನು ನಾಶಗೊಳಿಸಿತು’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಭಾರತ ಕಳೆದ 40 ವರ್ಷಗಳಿಂದ ಇದೇ ಆರೋಪ ಮಾಡುತ್ತಾ ಬಂದಿತ್ತು. ಆದರೆ ಕೆನಡಾ ಸರ್ಕಾರಗಳು ಖಲಿಸ್ತಾನಿ ಚಳವಳಿಯನ್ನು ನೇರವಾಗಿ ದೂಷಿಸಲು ಹಿಂದೇಟು ಹಾಕುತ್ತಿದ್ದವು. ಆದರೆ ಈಗ ಸಿಎಸ್‌ಐಎಸ್ ಖಲಿಸ್ತಾನಿಗಳನ್ನು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಗುರುತಿಸುತ್ತಿದೆ. ಇದರಿಂದ ಜಸ್ಟಿನ್ ಟ್ರೂಡೋ ಅವಧಿಯಲ್ಲಿ ಹದಗೆಟ್ಟಿದ್ದ ಭಾರತ-ಕೆನಡಾ ಸಂಬಂಧ ಪುನಃ ಸುಧಾರಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.