ಮೊನ್ನೆ ಪಾಕ್‌ನಿಂದ 400 ಡ್ರೋನ್‌ ದಾಳಿ : ಎಲ್ಲ ಛಿದ್ರ - ಮೂರೂವರೆ ತಾಸಿನಲ್ಲಿ 36 ಸ್ಥಳಗಳು ಗುರಿ

Sujatha NRPublished : May 10, 2025 5:10 AM

ಗುರುವಾರ ರಾತ್ರಿ ಭಾರತದ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಿದ್ದ ಪಾಕಿಸ್ತಾನ, ಈ ವೇಳೆ 3 ತಾಸಿನ ಅವಧಿಯಲ್ಲಿ ಟರ್ಕಿ ನಿರ್ಮಿತ 300-400 ಡ್ರೋನ್‌ಗಳನ್ನು ಭಾರತದತ್ತ ಹಾರಿಬಿಟ್ಟಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

 ನವದೆಹಲಿ : ಗುರುವಾರ ರಾತ್ರಿ ಭಾರತದ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಿದ್ದ ಪಾಕಿಸ್ತಾನ, ಈ ವೇಳೆ 3 ತಾಸಿನ ಅವಧಿಯಲ್ಲಿ ಟರ್ಕಿ ನಿರ್ಮಿತ 300-400 ಡ್ರೋನ್‌ಗಳನ್ನು ಭಾರತದತ್ತ ಹಾರಿಬಿಟ್ಟಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ರಾತ್ರಿ 8 ರಿಂದ 11.30ರ ನಡುವೆ ಏಕಕಾಲದಲ್ಲಿ ಭಾರತದ 36 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿಗೆ ಯತ್ನಿಸಲಾಗಿತ್ತು. ಆದರೆ ಈ ಪೈಕಿ 50ಕ್ಕೂ ಹೆಚ್ಚು ಡ್ರೋನ್‌ಗಳನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿದ್ದರೆ, ಉಳಿದ ಮತ್ತೊಂದಿಷ್ಟನ್ನು ಜ್ಯಾಮರ್‌ ಬಳಸುವ ಮೂಲಕ ನಿಷ್ಕ್ರಿಯಗೊಳಿಸಲಾಗಿತ್ತು.

ಉಳಿದ ಡ್ರೋನ್‌ಗಳೆಲ್ಲಾ ಬಹುತೇಕ ನಿಗಾ ಮತ್ತು ಮಾಹಿತಿ ಕಲೆಹಾಕುವ ಉದ್ದೇಶದಿಂದ ಬಂದಿದ್ದವು ಎಂದು ಭಾರತ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ. ಜೊತೆಗೆ, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಹಾರಿಸಿ ಪಾಕಿಸ್ತಾನದ 4 ವಾಯುರಕ್ಷಣಾ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದೂ ತಿಳಿಸಿದೆ.

ಶುಕ್ರವಾರ ರಕ್ಷಣಾ ಇಲಾಖೆ ಹಾಗೂ ವಿದೇಶಾಂಗ ಇಲಾಖೆಯ ಜಂಟಿ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹಾಗೂ ಕರ್ನಲ್ ಸೋಫಿಯಾ ಖುರೇಷಿ ಜತೆ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ ಈ ಸ್ಫೋಟಕ ಮಾಹಿತಿ ನೀಡಿದರು.

ಪಾಕ್‌ ದಾಳಿ ಮಾಡಿದ್ದು ಹೇಗೆ?:

ದಾಳಿಯ ತೀವ್ರತೆಯ ಮಾಹಿತಿ ನೀಡಿದ ಅವರು, ಲಡಾಖ್‌ನ ಸಿಯಾಚಿನ್ ಹಿಮನದಿ ಬೇಸ್ ಕ್ಯಾಂಪ್ ಮತ್ತು ಗುಜರಾತ್‌ನ ಕಚ್ ಪ್ರದೇಶದಲ್ಲಿ ಪಾಕ್ ಡ್ರೋನ್‌ಗಳು ಕಂಡುಬಂದವು. ಇವೆರಡೂ ಸುಮಾರು 1,400 ಕಿ.ಮೀ ಅಂತರದಲ್ಲಿವೆ, ಇದು ದಾಳಿಯ ವ್ಯಾಪಕ ಹರಡುವಿಕೆಯನ್ನು ಒತ್ತಿಹೇಳುತ್ತದೆ. ಐವತ್ತು ಡ್ರೋನ್‌ಗಳನ್ನು ವಾಯು ರಕ್ಷಣಾ ಗನ್‌ನಿಂದ ಹೊಡೆದುರುಳಿಸಲಾಗಿದೆ. ಉಳಿದವನ್ನು ರೇಡಿಯೋ ಫ್ರೀಕ್ವೆನ್ಸಿ ಗನ್ ಬಳಸಿ ಹೊಡೆದುರುಳಿಸಲಾಗಿದೆ’ ಎಂದರು.

‘ಪಾಕ್‌ ಬಳಸಿದ ಹಲವು ಡ್ರೋನ್‌ಗಳಲ್ಲಿ ಸ್ಫೋಟಕ ಇರಲಿಲ್ಲ. ಬದಲಾಗಿ ಕ್ಯಾಮರಾ ಇದ್ದವು. ನಮ್ಮ ಮಿಲಿಟರಿ ಬೇಸ್‌ಗಳನ್ನು ಗುರಿಯಾಗಿಸಿಕೊಡು ಗುಪ್ತಚರ ಮಾಹಿತಿ ಸಂಗ್ರಹಕ್ಕೆ ನಡೆಸಿದ ದಾಳಿಯೂ ಅದಾಗಿತ್ತು’ ಎಂದರು.

‘ಹಮಾಸ್‌ ಮಾದರಿಯಲ್ಲಿ ಕಡಿಮೆ ವೆಚ್ಚದ ಡ್ರೋನ್‌ಗಳನ್ನು ಬಳಸಿ ಭಾರತದ ಮೇಲೆ ದಾಳಿ ನಡೆಸಲಾಗಿದೆ. ಈ ರೀತಿ ಭಾರೀ ಡ್ರೋನ್‌ಗಳನ್ನು ಹಾರಿಬಿಡುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸುವ ಉದ್ದೇಶವೂ ಪಾಕಿಸ್ತಾನಕ್ಕಿತ್ತು. ಪಾಕ್‌ ಗಡಿಯ ಅತಿ ಸನಿಹದಿಂದಲೇ ಡ್ರೋನ್ ಹಾರಿಸಿದೆ. ಏಕೆಂದರೆ ಅವು ಕೇವಲ 5 ಕಿ.ಮೀ. ವ್ಯಾಪ್ತಿಯ ಡ್ರೋನ್‌ಗಳು. ಟರ್ಕಿ ನಿರ್ಮಿತ ಡ್ರೋನ್‌ ಇವಾಗಿದ್ದು, ‘ಸೋಂಗರ್ ಡ್ರೋನ್‌’ ಎಂದು ಕರೆಯಲಾಗುತ್ತದೆ’ ಎಂದು ವ್ಯೋಮಿಕಾ ಸಿಂಗ್‌ ಹೇಳಿದರು.

‘ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ 36 ಸ್ಥಳಗಳು ಪಾಕಿಸ್ತಾನದ ಗುರಿ ಆಗಿದ್ದವು. ಭಾರತದ ಕ್ಷಿಪಣಿ ನಿರೋಧಕ ವ್ಯವಸ್ಥೆಯಾದ ಎಲ್‌70, ಝಯು-23 ಮತ್ತು ಆಕಾಶ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಈ ಡ್ರೋನ್‌ಗಳನ್ನೆಲ್ಲ ಹೊಡೆದುರುಳಿಸಿವೆ’ ಎಂದು ಮೂಲಗಳು ಹೇಳಿವೆ.

8 ಕ್ಷಿಪಣಿ ನಾಶ:

ಡ್ರೋನ್‌ಗಳಲ್ಲದೆ ಪಾಕಿಸ್ತಾನವು ಹಲವು ಕ್ಷಿಪಣಿಗಳನ್ನೂ ಹಾರಿಬಿಟ್ಟಿದೆ. ಇವುಗಳನ್ನೂ ಏರ್‌ಡಿಫೆನ್ಸ್‌ ವ್ಯವಸ್ಥೆ ಹೊಡೆದುರುಳಿಸಿದೆ.

ಸತ್ವಾರಿ, ಸಾಂಬಾ, ಆರ್‌.ಎಸ್‌.ಪುರ. ಅರ್ನಿಯಾವನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನವು 8 ಕ್ಷಿಪಣಿಗಳನ್ನು ಹಾರಿಸಿತ್ತು. ಅಷ್ಟೂ ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಗುಲ, ಗುರುದ್ವಾರ, ಚರ್ಚ್‌ಗೆ ಕ್ಷಿಪಣಿ:

‘ಪಾಕಿಸ್ತಾನ ದಾಳಿ ನಡೆಸುವಾಗ ತೀರಾ ಕೆಳಮಟ್ಟಕ್ಕಿಳಿದಿದೆ. ಗುರುದ್ವಾರಗಳು, ಕಾನ್ವೆಂಟ್‌ಗಳು ಮತ್ತು ದೇವಾಲಯಗಳ ಮೇಲೆ ಪಾಕಿಸ್ತಾನದ ಶೆಲ್ ದಾಳಿ ನಡೆಸಿದೆ’ ಎಂದು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕಿಡಿಕಾರಿದರು.

ಇದೇ ವೇಳೆ, ಪಾಕಿಸ್ತಾನ ತಾನು ದಾಳಿ ಮಾಡಿಲ್ಲ. ಭಾರತವೇ ಮಾಡಿಕೊಂಡು ಕತೆ ಕಟ್ಟಿದೆ ಎಂದು ನೀಡಿದ್ದ ಹೇಳಿಕೆಗೆ ಕಿಡಿಕಾರಿದ ಮಿಸ್ರಿ, ‘ಕೇವಲ ಪಾಕಿಸ್ತಾನದಿಂದ ಇಂಥ ಹೇಳಿಕೆ ಬರಲು ಸಾಧ್ಯ. ಯಾರಾದರೂ ತಮ್ಮ ದೇಶ ಮೇಲೆ ತಾವೇ ದಾಳಿ ಮಾಡಿಕೊಳ್ಳುತ್ತಾರೆಯೇ?’ ಎಂದು ಪ್ರಶ್ನಿಸಿದರು.

ಜನರಿದ್ದ ವಿಮಾನವನ್ನೇತಡೆಗೋಡೆ ಆಗಿ ಬಳಸಿ ಪಾಕಿಸ್ತಾನ ಹೇಡಿತನ

ನವದೆಹಲಿ: ಒಂದೆಡೆ ಭಾರತದ ಮೇಲೆ ದಾಳಿಗೆ ವಿಫಲ ಯತ್ನ ನಡೆಸುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ಭಾರತದ ಪ್ರತಿದಾಳಿ ತಡೆಯಲು ನಾಗರಿಕ ವಿಮಾನಗಳನ್ನು ಮಾನವ ಗುರಾಣಿಯಾಗಿ ಬಳಸಿ ಹೇಡಿತನ ಮೆರೆದ ವಿಷಯ ಬೆಳಕಿಗೆ ಬಂದಿದೆ.

ವಿದೇಶಾಂಗ ಹಾಗೂ ರಕ್ಷಣಾ ಲಾಖೆಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್‌ ವ್ಯೋಮಿಕಾ ಸಿಂಗ್, ‘ಪಾಕಿಸ್ತಾನವು ಮೇ 7 ರಂದು ರಾತ್ರಿ 8.30ರ ಸುಮಾರಿಗೆ ಭಾರತೀಯ ಪ್ರದೇಶವನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ವೈಮಾನಿಕ ದಾಳಿ ನಡೆಸಿತು. ಈ ವೇಳೆ ಭಾರತ ತನ್ನ ವಾಯುಸೀಮೆಯನ್ನು ಬಂದ್ ಮಾಡಿತ್ತು. ಆದರೆ ಇನ್ನೊಂದೆಡೆ ಪಾಕಿಸ್ತಾನ ದಾಳಿ ನಡೆಯುತ್ತಿದ್ದರೂ ತನ್ನ ನಾಗರಿಕ ವಾಯುಪ್ರದೇಶವನ್ನು ಮುಚ್ಚದಿರಲು ನಿರ್ಧರಿಸಿತು.ಇದು ದಾಳಿಗೆ ನಾಗರಿಕ ವಿಮಾನಗಳನ್ನು ಮಾನವ ಗುರಾಣಿಯಾಗಿ ಬಳಸುವ ಉದ್ದೇಶಪೂರ್ವಕ ತಂತ್ರ. ಅವರು ನಾಗರಿಕ ವಿಮಾನಗಳನ್ನು ಮಾನವ ಗುರಾಣಿಯಾಗಿ ಬಳಸುತ್ತಿದ್ದಾರೆ. ನಾಗರಿಕ ವಿಮಾನಗಳ ಬಳಸುವದರಿಂದ ಭಾರತದ ಪ್ರತಿಕ್ರಿಯೆ ತಡೆಯುವುದು ಅವರ ಉದ್ದೇಶ’ ಎಂದರು.