ಪ್ರತಿ ವರ್ಷ 40 ಲಕ್ಷ ಜನರಿಗೆ ಹಾವು ಕಡಿತ, 50,000 ಸಾವು: ಕ್ರಮಕ್ಕೆ ಬಿಜೆಪಿ ರಾಜೀವ್‌ ಪ್ರತಾಪ್‌ ಒತ್ತಾಯ

KannadaprabhaNewsNetwork | Updated : Jul 30 2024, 05:37 AM IST

ಸಾರಾಂಶ

‘ದೇಶದಲ್ಲಿ ಪ್ರತಿವರ್ಷ 50 ಸಾವಿರ ಮಂದಿ ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದು,ಇದಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು’ ಎಂದು ಬಿಜೆಪಿ ಸಂಸದ ರಾಜೀವ್‌ ಪ್ರತಾಪ್‌ ರೂಡಿ ಸಂಸತ್‌ನಲ್ಲಿ ಒತ್ತಾಯಿಸಿದರು.

ನವದೆಹಲಿ:‘ದೇಶದಲ್ಲಿ ಪ್ರತಿವರ್ಷ 50 ಸಾವಿರ ಮಂದಿ ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದು,ಇದಕ್ಕೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು’ ಎಂದು ಬಿಜೆಪಿ ಸಂಸದ ರಾಜೀವ್‌ ಪ್ರತಾಪ್‌ ರೂಡಿ ಸಂಸತ್‌ನಲ್ಲಿ ಒತ್ತಾಯಿಸಿದರು. 

‘ಹಾವು ಕಡಿತದಿಂದ ಸಾವನ್ನಪ್ಪುವವರ ಪಟ್ಟಿಯಲ್ಲಿ ಪ್ರಪಂಚದಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ. ಪ್ರತಿ ವರ್ಷ 30-40 ಲಕ್ಷ ಜನರು ದೇಶದಲ್ಲಿ ಹಾವು ಕಡಿತಕ್ಕೆ ಒಳಗಾಗುತ್ತಾರೆ. 50 ಸಾವಿರ ಜನರು ಸಾವನ್ನಪ್ಪುತ್ತಾರೆ. ಹವಾಮಾನ ಬದಲಾವಣೆಯ ಪ್ರಭಾವದಿಂದ ಸಾವು ಕಡಿತದ ಪ್ರಮಾಣ ಹೆಚ್ಚುತ್ತಿದೆ. ಸೂಕ್ತ ಕ್ರಮದ ಮೂಲಕ ಹಾವು ಕಡಿತ ಮತ್ತು ಸಾವಿನ ಪ್ರಮಾಣ ತಗ್ಗಿಸಬಹುದು’ ಎಂದು ರೂಢಿ ಹೇಳಿದರು.

ಚಿನ್ನದ ಬೆಲೆ ನಿನ್ನೆ ಮತ್ತೆ ₹950 ಕುಸಿತ : ವಾರದಲ್ಲಿ ಭರ್ಜರಿ ₹4500 ಇಳಿಕೆ

ನವದೆಹಲಿ: ಕಳೆದ ವಾರ ಕೇಂದ್ರ ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.15ರಿಂದ 6ಕ್ಕೆ ಇಳಿಸಿದ ಬಳಿಕ ಆರಂಭವಾಗಿರುವ ಬೆಲೆ ಕುಸಿತ ಮುಂದುವರೆದಿದೆ. ಸೋಮವಾರವೂ ದೆಹಲಿ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ 950 ರು. ಕಡಿಮೆಯಾಗಿ 10 ಗ್ರಾಂಗೆ 71,050 ರು.ಗೆ ತಲುಪಿದೆ. 22 ಕ್ಯಾರೆಟ್‌ ಚಿನ್ನ ಗ್ರಾಮ್‌ಗೆ 1,650 ರು. ಕಡಿಮೆಯಾಗಿ 70,700 ರು.ಗೆ ತಲುಪಿದೆ. ಒಂದೇ ವಾರದಲ್ಲಿ 4500 ರು. ಇಳಿದಿದೆ. ಮತ್ತೊಂದೆಡೆ ಬೆಳ್ಳಿ ಬೆಲೆ ಕೇಜಿಗೆ 4500 ರು. ಕಡಿಮೆಯಾಗಿ 84,500 ರು.ಗೆ ಕುಸಿತಕಂಡಿದೆ. ಇದು ಈ ವರ್ಷದಲ್ಲಿ ಒಂದೇ ದಿನ ಅತಿ ಹೆಚ್ಚು ಪ್ರಮಾಣದ ಕುಸಿತದ ದಾಖಲೆಯಾಗಿದೆ.

ಅಮೆರಿಕದಲ್ಲಿ ಸ್ಥಾಪಿತ ನಟ ಬಚ್ಚನ್‌ ಪ್ರತಿಮೆ ಸ್ಥಳ ಈಗ ಪ್ರವಾಸಿ ತಾಣದ ಘೋಷಣೆ

ವಾಷಿಂಗ್ಟನ್‌: ಅಮೆರಿಕದ ನ್ಯೂಜೆರ್ಸಿಯಲ್ಲಿ ಸ್ಥಾಪಿತವಾಗಿರುವ ನಟ ಅಮಿತಾಭ್ ಬಚ್ಚನ್ ಪ್ರತಿಮೆ ಸ್ಥಳವನ್ನು ಗೂಗಲ್ ಮ್ಯಾಪ್‌ ಇದೀಗ ಪ್ರವಾಸಿ ಆಕರ್ಷಣೆಯ ತಾಣಗಳ ಪಟ್ಟಿಗೆ ಸೇರಿಸಿದೆ. 2022ರಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಗೋಪಿ ಸೇಥ್‌ ತಮ್ಮ ನಿವಾಸದೆದುರು ಬಚ್ಚನ್ ಪ್ರತಿಮೆಯೊಂದನ್ನು ನಿರ್ಮಿಸಿದ್ದರು. ನಿರ್ಮಾಣವಾಗಿ 2 ವರ್ಷದಲ್ಲಿ ಅಮಿತಾಭ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆ ಜಾಗಕ್ಕೆ ಭೇಟಿ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪರಿಣಾಮ, ಅಮಿತಾಭ್ ಪ್ರತಿಮೆ ಇರುವ ಗೋಪಿ ಅವರ ನಿವಾಸ ಒಂದು ರೀತಿಯಲ್ಲಿ ಪ್ರವಾಸಿ ತಾಣವಾಗಿ ಬದಲಾಗಿದೆ. ಗೂಗಲ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಆ ಜಾಗವನ್ನು ಹುಡುಕಾಡಿದ ಕಾರಣ ಗೂಗಲ್ ಮ್ಯಾಪ್‌ನ ಪ್ರವಾಸಿ ತಾಣದ ಪಟ್ಟಿಗೆ ಸೇರಿದೆ.

ರಷ್ಯಾ- ಉಕ್ರೇನ್ ಯುದ್ಧದಲ್ಲಿ ಹರ್ಯಾಣದ ಯುವಕ ಸಾವು

ಮಾಸ್ಕೋ: ರಷ್ಯಾ ಯುದ್ಧಭೂಮಿಯಲ್ಲಿ ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿದ್ದ ಹರ್ಯಾಣ ಮೂಲದ 22 ವರ್ಷದ ರವಿ ಮೌನ್‌ ಎಂಬ ಯುವಕ ಸಾವನ್ನಪ್ಪಿದ್ದಾನೆ. ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ, ರವಿ ಸಾವನ್ನು ಖಚಿತಪಡಿಸಿದೆ. ಮೃತ ರವಿ ಹರಿರ್ಯಾಣದ ಖೈತಾಲ್ ಜಿಲ್ಲೆಯವರು. ಜ.13 ರಂದು ಏಜೆಂಟ್‌ ಮೂಲಕ ಸಾರಿಗೆ ಕೆಲಸಕ್ಕೆಂದು ರಷ್ಯಾಗೆ ತೆರಳಿದ್ದರು. ಆದರೆ ಅಲ್ಲಿ ಅವರನ್ನು ವಂಚಿಸಿ ಸೇನೆಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಇದೀಗ ರಷ್ಯಾದಲ್ಲಿ ಉಕ್ರೇನ್ ಸೇನೆಗೆ ಬಲಿಯಾಗಿದ್ದಾರೆ. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ರಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಷ್ಯಾ ಸೇನೆಯಲ್ಲಿರುವ ಎಲ್ಲ ಭಾರತೀಯರನ್ನು ಬಿಡುಗಡೆ ಮಾಡುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದರು. ಈ ಬೆನ್ನಲ್ಲೇ ಈ ಘಟನೆ ನಡೆದಿದೆ.

ಭಾರೀ ಉದ್ಯೋಗದ ಆಫರ್‌ ನೀಡಿದ್ದ ಹಿನ್ನೆಲೆಯಲ್ಲಿ ರವಿ ಕುಟುಂಬ ತಮ್ಮ ಬಳಿ ಇದ್ದ ಒಂದು ಎಕರೆ ಜಮೀನು ಮಾರಾಟ ಮಾಡಿ 11.50 ಲಕ್ಷ ರು. ಹಣ ಹೊಂದಿಸಿ ರಷ್ಯಾಕ್ಕೆ ಕಳುಹಿಸಿಕೊಟ್ಟಿತ್ತು. ಇದೀಗ ಶವವನ್ನು ಮರಳಿ ತರಲೂ ತಮ್ಮ ಬಳಿ ಹಣ ಇಲ್ಲ. ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬ ಒತ್ತಾಯಿಸಿದೆ.

ಕಾಶ್ಮೀರ ಗುಜರಿ ಅಂಗಡೀಲಿ ಸ್ಫೋಟ: 4 ಕಾರ್ಮಿಕರು ಬಲಿ

ಶ್ರೀನಗರ: ಗುಜರಿ ಅಂಗಡಿಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್‌ನಲ್ಲಿ ನಡೆದಿದೆ. ಸೋಮವಾರ ಸೊಪೋರ್‌ನಲ್ಲಿನ ಶೇರ್‌ ಕಾಲೋನಿಯಲ್ಲಿದ್ದ ಸ್ಕ್ರಾಪ್‌ ಅಂಗಡಿಯಲ್ಲಿ ಕಾರ್ಮಿಕರು ವಾಹನದಿಂದ ಗುಜರಿ ಪದಾರ್ಥಗಳನ್ನು ಇಳಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅಂಗಡಿ ಒಳಗೆ ಸ್ಫೋಟ ಸಂಭವಿಸಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಅಸುನೀಗಿದ್ದಾರೆ. ಮಿಕ್ಕ ಇಬ್ಬರು ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ. ಘಟನೆಯನ್ನು ವಿಧಿವಿಜ್ಞಾನ ತಂಡ ತನಿಖೆ ನಡೆಸುತ್ತಿದೆ.

Share this article