ಚಂದ್ರಾಪುರ (ಮಹಾರಾಷ್ಟ್ರ): ನೀಟ್ ಪರೀಕ್ಷೆಯಲ್ಲಿ ಶೇ. 99.99ರಷ್ಟು ಅಂಕ ಪಡೆದಿದ್ದರೂ ವೈದ್ಯನಾಗುವುದಕ್ಕೆ ಇಷ್ಟವಿರದ ಯುವಕನೊಬ್ಬ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುವ ದಿನವೇ ಡೆತ್‌ನೋಟ್ ಬರೆದಿಟ್ಟು ಆತ್ಮ* ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.
19 ವರ್ಷದ ಅನುರಾಗ್ ಬೋರ್ಕರ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತ ಇತ್ತೀಚೆಗೆ ನೀಟ್ ಯುಜಿ 2025 ಪರೀಕ್ಷೆಯಲ್ಲಿ ಶೇ.99.99 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದ. ಒಬಿಸಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 1475ನೇ ರ್‍ಯಾಂಕ್ ಗಳಿಸಿದ್ದ. ಬಳಿಕ ಗೋರಖ್‌ಪುರದಲ್ಲಿ ಎಂಬಿಬಿಎಸ್ ಕೋರ್ಸ್‌ಅಡ್ಮಿಷನ್‌ಗೆ ಸಿದ್ಧತೆ ನಡೆಸುತ್ತಿದ್ದ ಯುವಕ ಪ್ರವೇಶ ಪಡೆಯುಲು ಹೋಗುವ ದಿನವೇ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ‘ನನಗೆ ಡಾಕ್ಟರ್ ಆಗಲು ಇಷ್ಟವಿಲ್ಲ’ ಎಂದು ಮರಣಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸಿಬಿಎಸ್‌ಇ 10, 12ನೇ ಕ್ಲಾಸ್ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ನವದೆಹಲಿ: 2025- 26ನೇ ಸಾಲಿನ ಶೈಕ್ಷಣಿಕ ವರ್ಷದ ಸಿಬಿಎಸ್‌ಇ 10 ಹಾಗೂ 12ನೇ ತರಗತಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. 10ನೇ ತರಗತಿ ಮೊದಲ ಆವೃತ್ತಿ ಪರೀಕ್ಷೆ ಮುಂದಿನ ವರ್ಷದ ಫೆ. 17 ರಿಂದ ಮಾರ್ಚ್ 6 ತನಕ ಹಾಗೂ 2ನೇ ಆವೃತ್ತಿ ಪರೀಕ್ಷೆ ಮೇ 15ರಿಂದ ಜೂ.1ರವರೆಗೆ ನಡೆಯಲಿದೆ. 12ನೇ ತರಗತಿ ಬೋರ್ಡ್ ಪರೀಕ್ಷೆ ಫೆ.17 ರಿಂದ ಏ.9ರವರೆಗೆ ನಡೆಯಲಿದೆ.
ಭಾರತ ನಮ್ಮ ಜತೆಗೆ: ಜೆಲೆನ್ಸ್ಕಿ ವಿಶ್ವಾಸ
ಆದರೆ ರಷ್ಯಾ ಜತೆ ತೈಲ ಖರೀದಿಗೆ ಆಕ್ಷೇಪ
ವಾಷಿಂಗ್ಟನ್ : ‘ಭಾರತ ಬಹುತೇಕ ನಮ್ಮ ಜೊತೆಗಿದೆ. ಆದರೆ ರಷ್ಯಾದಿಂದ ಭಾರತ ತೈಲ ಖರೀದಿಸುವ ವಿಚಾರವಾಗಿ ನಮಗೆ ಪ್ರಶ್ನೆಗಳಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಿಂದಾಗಿ ಭಾರತದ ನಿಲುವು ಬದಲಾಗುತ್ತದೆ ಎಂದು ಭಾವಿಸುತ್ತೇನೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮೊನ್ನೆಯಷ್ಟೇ ಟ್ರಂಪ್, ರಷ್ಯಾ ತೈಲ ಖರೀದಿ ಮೂಲಕ ರಷ್ಯಾ-ಉಕ್ರೇನ್ ಯುದ್ಧಕ್ಕೆ ಭಾರತ ಮತ್ತು ಚೀನಾ ದೇಣಿಗೆ ಸುರಿಯುತ್ತಿವೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ಜೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ.ಫಾಕ್ಸ್ ನ್ಯೂಸ್‌ಗೆ ಸಂದರ್ಶನ ನೀಡಿದ ಜೆಲೆನ್ಸ್ಕಿ, ‘ಭಾರತವು ಬಹುತೇಕ ನಮ್ಮೊಂದಿಗಿದೆ ಎಂದು ಭಾವಿಸುತ್ತೇನೆ. ನಮಗೆ ತೈಲ ಖರೀದಿ ಕುರಿತು ಪ್ರಶ್ನೆಗಳಿವೆ, ಆದರೆ ಅಧ್ಯಕ್ಷ ಟ್ರಂಪ್ ಯುರೋಪಿಯನ್ನರೊಂದಿಗೆ ಅದನ್ನು ನಿರ್ವಹಿಸುತ್ತಾರೆ, ಭಾರತದೊಂದಿಗೆ ಹೆಚ್ಚು ನಿಕಟ ಮತ್ತು ಬಲವಾದ ಸಂಬಂಧಗಳನ್ನು ಹೊಂದುತ್ತಾರೆ ಎಂದು ಭಾವಿಸುತ್ತೇನೆ. ಭಾರತೀಯರು ರಷ್ಯಾದ ಇಂಧನ ಖರೀದಿಯ ಬಗ್ಗೆ ತಮ್ಮ ಮನೋಭಾವವನ್ನು ಬದಲಾಯಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
ಮುಂದಿನ ವರ್ಷ ಮಾನವರು ಚಂದ್ರನ ಅಂಗಳಕ್ಕೆ: ನಾಸಾ
ವಾಷಿಂಗ್ಟನ್: 1972ರಲ್ಲಿ ಚಂದ್ರನ ಮೇಲೆ ಕಾಲಿಟ್ಟಿದ್ದ ಅಮೆರಿಕ ಮುಂದಿನ ವರ್ಷ ಮತ್ತದೇ ಸಾಧನೆ ಮಾಡಲು ಸಜ್ಜಾಗಿದೆ. 2026ರಲ್ಲಿ 10 ದಿನಗಳ ಆರ್ಟಿಮಿಸ್-2 ಯೋಜನೆಯ ಭಾಗವಾಗಿ 4 ವಿಜ್ಞಾನಿಗಳನ್ನು ಚಂದ್ರನ ಅಂಗಳಕ್ಕೆ ಕಳಿಸುವುದಾಗಿ ನಾಸಾ ತಿಳಿಸಿದೆ. ಫೆ.5ರಿಂದ ಏ.26ರ ಒಳಗಾಗಿ ಒರಾಯನ್ ಬಾಹ್ಯಾಕಾಶ ನೌಕೆಯ ಉಡಾವಣೆ ಮಾಡಿ, 5 ದಶಕಗಳ ಬಳಿಕ ಚಂದ್ರನ ಮೇಲೆ ಕಾಲಿಡಲಿದ್ದೇವೆ ಎಂದು ನಾಸಾ ಹೇಳಿದೆ. ಇದು ಆರ್ಟಿಮಿಸ್‌ನ ಮೊದಲ ಮಾನವಸಹಿತ ಯೋಜನೆಯಾಗಿರಲಿದೆ. ಆರ್ಟಿಮಿಸ್ ಒಂದನ್ನು 2022ರ ನವೆಂಬರ್‌ನಲ್ಲಿ ಕೈಗೊಳ್ಳಲಾಗಿತ್ತು.
ಐ ಲವ್ ಮೊಹಮ್ಮದ್ ವಿರುದ್ಧ ಐ ಲವ್ ಮಹಾದೇವ್ ಅಭಿಯಾನ
ಲಖನೌ: ಉತ್ತರ ಪ್ರದೇಶದ ಬರೇಲಿಯಲ್ಲಿ ಇತ್ತೀಚೆಗೆ ಐ ಲವ್ ಮೊಹಮ್ಮದ್ ಎಂಬ ಪೋಸ್ಟರ್‌ಗಳು ಸೃಷ್ಟಿಯಾಗಿ ವಿವಾದಕ್ಕೀಡಾಗಿದ್ದವು. ಇದಕ್ಕೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದರ ಬೆನ್ನಲ್ಲೇ ವಾರಣಾಸಿಯಲ್ಲಿ ಪ್ರತಿ- ಅಭಿಯಾನ ಆರಂಭವಾಗಿದೆ. ಕೋಮು ಶಾಂತಿಯನ್ನು ಕದಡುವ ಪ್ರಚೋದನಕಾರಿ ಪ್ರಯತ್ನಗಳಿಗೆ ಪ್ರತಿಕ್ರಿಯೆಯಾಗಿ ಧಾರ್ಮಿಕ ಮುಖಂಡರು ‘ಐ ಲವ್ ಮಹಾದೇವ್’ ಎಂದು ಬರೆದ ಫಲಕಗಳನ್ನು ಹಿಡಿದು ಮಂಗಳವಾರ ಬೀದಿಗಿಳಿದರು.
ತಿರುಪತಿ ತಿಮ್ಮಪ್ಪಗೆ 3.9 ಕೋಟಿ ರು. ಮೌಲ್ಯದ ಚಿನ್ನದ ಜನಿವಾರ ದಾನ
ತಿರುಮಲ: ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ 3.86 ಕೆಜಿ ತೂಕದ ಮತ್ತು 3.86 ಕೋಟಿ ರೂ. ಮೌಲ್ಯದ ಚಿನ್ನದ ಯಜ್ಞೋಪವೀತ (ಜನಿವಾರ)ವನ್ನು ವಿಶಾಖಪಟ್ಟಣ ಮೂಲದ ದಂಪತಿಗಳು ಬುಧವಾರ ದಾನ ಮಾಡಿದ್ದಾರೆ. ಪುವ್ವಾಡ ಮಸ್ತಾನ್ ರಾವ್ ಮತ್ತು ಅವರ ಪತ್ನಿ ಕುಂಕುಮ ರೇಖಾ ದಾನ ಮಾಡಿದ ದಂಪತಿ.