ಪ್ರಧಾನಿಗೇ ಪತ್ರ ಬರೆದು ಗಡ್ಕರಿ ಬಗ್ಗೆ ದೂರಿತ್ತ ಸಿಎಂ : ಸಿಗಂದೂರು ಶಿಷ್ಟಾಚಾರ ಸಮರ

KannadaprabhaNewsNetwork |  
Published : Jul 15, 2025, 01:01 AM ISTUpdated : Jul 15, 2025, 04:36 AM IST
Karnataka Chief Minister Siddaramaiah (Photo/ANI)

ಸಾರಾಂಶ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅಂಬಾರಗೊಂಡ್ಲು ಮತ್ತು ಕಳಸವಳ್ಳಿ ಗ್ರಾಮಗಳ ನಡುವೆ ಶರಾವತಿ ಹಿನ್ನೀರಿಗೆ ನಿರ್ಮಿಸಲಾಗಿರುವ ಸೇತುವೆ ಉದ್ಘಾಟನೆ ಸೇರಿ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಶಿಷ್ಟಾಚಾರ ಉಲ್ಲಂಘನೆ ತಿಕ್ಕಾಟ ಆರಂಭವಾಗಿದೆ.

 ಬೆಂಗಳೂರು :  ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅಂಬಾರಗೊಂಡ್ಲು ಮತ್ತು ಕಳಸವಳ್ಳಿ ಗ್ರಾಮಗಳ ನಡುವೆ ಶರಾವತಿ ಹಿನ್ನೀರಿಗೆ ನಿರ್ಮಿಸಲಾಗಿರುವ ಸೇತುವೆ ಉದ್ಘಾಟನೆ ಸೇರಿ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಶಿಷ್ಟಾಚಾರ ಉಲ್ಲಂಘನೆ ತಿಕ್ಕಾಟ ಆರಂಭವಾಗಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಂಬಾರಗೊಂಡ್ಲು ಮತ್ತು ಕಳಸವಳ್ಳಿ ಗ್ರಾಮಗಳ ನಡುವೆ ಶರಾವತಿ ಹಿನ್ನೀರಿಗೆ 472 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದ್ದು, ಸೋಮವಾರ ಅದರ ಉದ್ಘಾಟನೆ ಮಾಡಲಾಗಿದೆ. ಅದರ ಜತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯನ್ನೂ ಮಾಡಲಾಗಿದೆ. ಆದರೆ, ಈ ಕಾರ್ಯಕ್ರಮಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದೊಂದಿಗೆ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದರು. ಜತೆಗೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಧಾನಿಗೆ ಪತ್ರ ಬರೆದ ಸಿಎಂ:

ಕೇಂದ್ರ ಸರ್ಕಾರದ ಅಧಿಕಾರಿಗಳ ಶಿಷ್ಟಾಚಾರ ಉಲ್ಲಂಘನೆ ಮತ್ತು ರಾಜ್ಯ ಸರ್ಕಾರವನ್ನು ಕಡೆಗಣಿಸಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜು.14ರ ಕಾರ್ಯಕ್ರಮ ನಿಗದಿಗೂ ಮುನ್ನ ನನಗೆ ತಿಳಿಸಿಲ್ಲ. ಹಾಗೆಯೇ, ಜು.14ರ ಕಾರ್ಯಕ್ರಮ ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮೊದಲೇ ತಿಳಿಸಿದ್ದೆ. ಆದರೂ, ಕಾರ್ಯಕ್ರಮ ಆಯೋಜಿಸಲಾಗಿದೆ.

ಅಲ್ಲದೆ ಆಹ್ವಾನ ಪತ್ರಿಕೆಯಲ್ಲೂ ಸಾಕಷ್ಟು ಲೋಪ ಮಾಡಿ, ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗಿಂತ ಮೇಲೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಹೆಸರು ನಮೂದಿಸಲಾಗಿದೆ. ಹೀಗೆ ಹಲವು ಲೋಪಗಳಾಗಿವೆ. ರಾಜ್ಯ ಸರ್ಕಾರ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಕುರಿತು ತೀವ್ರ ಖಂಡಿಸುತ್ತೇನೆ. ಮುಂದೆ ಈ ರೀತಿಯ ಲೋಪಗಳಾಗದಂತೆ, ಅಸಹಕಾರದ ಸ್ಥಿತಿ ಸೃಷ್ಟಿಸದಂತೆ ಎಲ್ಲ ಕೇಂದ್ರ ಸಚಿವರಿಗೆ ಸೂಚಿಸಬೇಕು ಎಂದು ಹೇಳಿದ್ದಾರೆ.

ನಿತಿನ್‌ ಗಡ್ಕರಿ ಸ್ಪಷ್ಟನೆ:

ಈ ವಿವಾದಕ್ಕೆ ಸಂಬಂಧಿಸಿ ಸೋಮವಾರ ತಮ್ಮ ಎಕ್ಸ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದ ನಿತಿನ್‌ ಗಡ್ಕರಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜು.11ರಂದು ಅಧಿಕೃತ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಅವರನ್ನು ಆಹ್ವಾನಿಸಲಾಗಿತ್ತು. ಒಂದು ವೇಳೆ ಭೌತಿಕವಾಗಿ ಸಾಧ್ಯವಾಗದಿದ್ದರೆ ವರ್ಚ್ಯುವಲ್‌ ಮೂಲಕ ಉಪಸ್ಥಿತರಿರುವಂತೆ ಕೋರಿ ಪತ್ರವನ್ನೂ ಬರೆಯಲಾಗಿದೆ. ಕೇಂದ್ರ ಸರ್ಕಾರ ಶಿಷ್ಟಾಚಾರ ಎತ್ತಿ ಹಿಡಿಯುತ್ತದೆ. ಅಲ್ಲದೆ, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಅವರ ಕೊಡುಗೆ ಮತ್ತು ಸಹಕಾರವನ್ನು ನಿರಂತರವಾಗಿ ಶ್ಲಾಘಿಸುತ್ತದೆ. ಒಕ್ಕೂಟ ವ್ಯವಸ್ಥೆ ಮತ್ತು ಎಲ್ಲ ರಾಜ್ಯಗಳೊಂದಿಗೆ ಸಮನ್ವಯಕ್ಕೆ ಬದ್ಧವಾಗಿದೆ ಎಂದು ತಿಳಿಸಿದ್ದರು.

ಸಿದ್ದರಾಮಯ್ಯ ತಿರುಗೇಟು:

ನಿತಿನ್‌ ಗಡ್ಕರಿ ಪ್ರತಿಕ್ರಿಯೆಗೆ ಎಕ್ಸ್ ಖಾತೆ ಮೂಲಕವೇ ಉತ್ತರಿಸಿರುವ ಸಿದ್ದರಾಮಯ್ಯ, ಸಾಗರ ಕಾರ್ಯಕ್ರಮ ನಿಗದಿ ಅಥವಾ ಆಹ್ವಾನ ಪತ್ರಿಕೆ ಮುದ್ರಿಸುವುದಕ್ಕೂ ಮುನ್ನ ನನ್ನನ್ನು ಅಥವಾ ನನ್ನ ಸಚಿವಾಲಯವನ್ನು ಸಂಪರ್ಕಿಸಿಲ್ಲ. ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜು.11ರಂದು ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲಾಗಿದ್ದು, ಆಗ ನನ್ನ ಸಚಿವಾಲಯ ಜು.14ರಂದು ವಿಜಯಪುರದಲ್ಲಿ ಕಾರ್ಯಕ್ರಮ ನಿಗದಿಯಾಗಿದೆ ಎಂದು ತಿಳಿಸಿದೆ. ನಿಜವಾದ ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಮಹತ್ವದ ಸಾರ್ವಜನಿಕ ಕಾರ್ಯಕ್ರಮಗಳನ್ನು ಅಂತಿಮಗೊಳಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಬೇಕಾಗುತ್ತದೆ. ಆದರೆ, ಅದಾಗಿಲ್ಲ. ಕರ್ನಾಟಕ ಜನರ ಸೇವೆಯಲ್ಲಿ ಕೇಂದ್ರ ಸರ್ಕಾರದ ಪಾಲುದಾರಿಕೆ ಹೊಂದಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಸಿದ್ದು ವಾದವೇನು? 

ಸೇತುವೆ ಉದ್ಘಾಟನೆ ಕಾರ್ಯಕ್ರಮ ನಿಗದಿಯಾಗಿರುವುದು ಜು.14ಕ್ಕೆ. ಜು.11ರಂದು ಆಹ್ವಾನಿಸಲಾಗಿದೆ

ಪೂರ್ವನಿಗದಿತ ಕಾರ್ಯಕ್ರಮ ಕಾರಣ ಸೇತುವೆ ಉದ್ಘಾಟನೆ ಮುಂದೂಡಲು ಕೇಳಿದ್ದರೂ ನಡೆಸಲಾಗಿದೆ

ಆಹ್ವಾನಪತ್ರಿಕೆಯಲ್ಲಿ ಡಿಸಿಎಂ, ಸ್ಪೀಕರ್‌, ಸಭಾಪತಿಗಳ ಹೆಸರಿಗಿಂತ ಮೇಲೆ ಯಡಿಯೂರಪ್ಪ ಹೆಸರಿದೆ

ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಕಾರ್ಯಕ್ರಮ ಅಂತಿಮಗೊಳಿಸುವಾಗ ರಾಜ್ಯದ ಸಹಮತ ಬೇಕು

ಆದರೆ ಸಿಗಂದೂರು ಸೇತುವೆ ವಿಷಯದಲ್ಲಿ ಹಾಗಾಗಿಲ್ಲ. ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ