ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶಕ್ಕೆ ಅರ್ಹ

ಸಾರಾಂಶ

‘ವಿಚ್ಛೇದಿತ ಮುಸ್ಲಿಂ ಮಹಿಳೆಯು 1973ರಲ್ಲಿ ರೂಪಿಸಲಾಗಿದ್ದ ‘ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125’ರ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು

ನವದೆಹಲಿ :  ‘ವಿಚ್ಛೇದಿತ ಮುಸ್ಲಿಂ ಮಹಿಳೆಯು 1973ರಲ್ಲಿ ರೂಪಿಸಲಾಗಿದ್ದ ‘ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125’ರ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು’ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದೆ. ‘ಜಾತ್ಯತೀತ ಮತ್ತು ಧರ್ಮ ತಟಸ್ಥ’ ನಿಬಂಧನೆಯು ಧರ್ಮಾತೀತವಾಗಿ ಎಲ್ಲ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.

‘ವಿಚ್ಛೇದಿತ ಮುಸ್ಲಿಂ ಮಹಿಳೆ ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶಕ್ಕೆ ಅರ್ಹರಲ್ಲ ಮತ್ತು ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆ- 1986 ನಿಬಂಧನೆಗಳನ್ನು ಆಕೆಗೆ ಅನ್ವಯಿಸಬೇಕು’ ಎಂಬ ಅರ್ಜಿ ಸಲ್ಲಿಕೆ ಆಗಿತ್ತು. ಈ ಅರ್ಜಿ ತಿರಸ್ಕರಿಸಿದ ನ್ಯಾ। ಬಿ.ವಿ. ನಾಗರತ್ನ ಹಾಗೂ ನ್ಯಾ। ಆಗಸ್ಟೀನ್‌ ಜಾರ್ಜ್‌ ಮಸೀಹ್‌ ಅವರಿದ್ಧ ಪೀಠ, ‘ಹಿಂದಿನ ಸಿಆರ್‌ಪಿಸಿಯ ಸೆಕ್ಷನ್ 125, ಜೀವನಾಂಶಕ್ಕಾಗಿ ಹೆಂಡತಿಯ ಕಾನೂನುಬದ್ಧ ಹಕ್ಕಿಗೆ ಸಂಬಂಧಿಸಿದ್ದಾಗಿದೆ. ಇದು ಮುಸ್ಲಿಂ ಮಹಿಳೆಯರನ್ನೂ ಒಳಗೊಂಡಿದೆ. ಸೆಕ್ಷನ್ 125 ಧರ್ಮಾತೀತವಾಗಿ ಎಲ್ಲ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ. 1986ರ ಕಾಯ್ದೆಯು ಸೆಕ್ಷನ್‌ 125ಕ್ಕಿಂತ ಮಿಗಿಲಲ್ಲ’ ಎಂದು ಹೇಳಿತು.

‘ಭಾರತೀಯ ವಿವಾಹಿತ ಪುರುಷನು ಆರ್ಥಿಕವಾಗಿ ಸ್ವತಂತ್ರಳಲ್ಲದ ತನ್ನ ಹೆಂಡತಿಗೆ ತಾನು ಆಧಾರವಾಗಿರಬೇಕು ಎಂಬ ಸಂಗತಿಯನ್ನು ಅರಿತಿರಬೇಕು. ಜೀವನಾಂಶವನ್ನು ನೀಡುವುದು ದಾನವಲ್ಲ ಆದರೆ ಎಲ್ಲಾ ವಿವಾಹಿತ ಮಹಿಳೆಯರ ಹಕ್ಕು’ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.

ಶಾ ಬಾನೋ ತೀರ್ಪು ಈಗಲೂ ಅನ್ವಯ:

1985ರಲ್ಲಿ ಶಾ ಬಾನೋ ವಿಚ್ಛೇದನ ಹಾಗೂ ಜೀವನಾಂಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟು, ‘ಸೆಕ್ಷನ್‌ 125 ಮುಸ್ಲಿಂ ಮಹಿಳೆಯರು ಸೇರಿದಂತೆ ಎಲ್ಲ ಮಹಿಳೆಯರಿಗೆ ಅನ್ವಯಿಸುತ್ತದೆ’ ಎಂದು ತೀರ್ಪು ನೀಡಿ, ‘ಶಾ ಬಾನೋಗೆ ವಿಚ್ಛೇದಿತ ಪತಿ ಜೀವನಾಂಶ ಕೊಡಬೇಕು’ ಎಂದು ಆದೇಶಿಸಿತ್ತು. ಆದರೆ, ತೀರ್ಪಿಗೆ ಮುಸ್ಲಿಂ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಮುಸ್ಲಿಂ ಮಹಿಳೆಯರಿಗೆ ಅನ್ವಯ ಆಗದಂತೆ 1986ರಲ್ಲಿ ರಾಜೀವ್‌ ಗಾಂಧಿ ಸರ್ಕಾರ ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆ- 1986 ಜಾರಿಗೆ ತಂದಿತ್ತು. ಹೀಗಾಗಿ ಜೀವನಾಂಶ ಕೊಡುವ ಹೊಣೆಗಾರಿಕೆಯಿಂದ ಪತಿ ಮುಕ್ತನಾಗಿದ್ದ. 2001ರಲ್ಲಿ ಸುಪ್ರೀಂ ಕೋರ್ಟು ಕಾಯ್ದೆಯನ್ನು ಎತ್ತಿ ಹಿಡಿದಿತ್ತು.

ಆದರೆ ಈಗ ನ್ಯಾ। ನಾಗರತ್ನ ಅವರ ಪೀಠ, ‘1986ರ ಕಾಯ್ದೆಯು ಸಿಆರ್‌ಪಿಸಿ ಸೆಕ್ಷನ್‌ 125ರ ಜಾತ್ಯತೀತ ಹಾಗೂ ಧರ್ಮ ತಟಸ್ಥ ನಿಬಂಧನೆಗಿಂತ ಮಿಗಿಲಲ್ಲ’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಏನಿದು ಪ್ರಕರಣ?:

ತೆಲಂಗಾಣದ ಮೊಹಮ್ಮದ್‌ ಅಬ್ದುಲ್‌ ಸಮದ್‌ ಎಂಬಾತ ಪತ್ನಿಗೆ 2017ರಲ್ಲಿ ವಿಚ್ಛೇದನ ನೀಡಿದ ಬಳಿಕ ಕೌಟುಂಬಿಕ ನ್ಯಾಯಾಲಯವು ಆತನಿಗೆ ಮಾಸಿಕ 20 ಸಾವಿರ ರು. ಜೀವನಾಂಶವನ್ನು ವಿಚ್ಛೇದಿತ ಪತ್ನಿಗೆ ನೀಡಬೇಕು ಎಂದು ಸೂಚಿಸಿತ್ತು. ಆದರೆ ತಾನು ಮುಸ್ಲಿಂ ವೈಯಕ್ತಿಕ ಕಾಯ್ದೆ ಪ್ರಕಾರ ವಿಚ್ಛೇದನ ನೀಡಿದ್ದೇನೆ. ಹೀಗಾಗಿ ಸೆಕ್ಷನ್‌ 125ರ ಪ್ರಕಾರ ಆಕೆ ಜೀವನಾಂಶಕ್ಕೆ ಅರ್ಹಳಲ್ಲ ಎಂದು ವಾದಿಸಿ ತೆಲಂಗಾಣ ಹೈಕೋರ್ಟ್‌ಗೆ ಹೋಗಿದ್ದ.

ಆದರೆ, ಜೀವನಾಂಶವನ್ನು 20 ಸಾವಿರ ರು.ನಿಂದ 10 ಸಾವಿರ ರು.ಗೆ ಇಳಿಸಿದ್ದ ತೆಲಂಗಾಣ ಹೈಕೋರ್ಟ್, ‘ಮಾಜಿ ಪತ್ನಿಗೆ ಸೆಕ್ಷನ್‌ 125ರ ಪ್ರಕಾರ ಮಧ್ಯಂತರ ಜೀವನಾಂಶ ನೀಡಬೇಕು’ ಎಂದು ನಿರ್ದೇಶಿಸಿತ್ತು. ಆದರೆ ಆತ ತೆಲಂಗಾಣ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ‘ಸೆಕ್ಷನ್‌ 125ಕ್ಕಿಂತ 1986ರ ಕಾಯ್ದೆಯು ಮುಸ್ಲಿಂ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿ’ ಎಂದು ವಾದಿಸಿದ್ದ.

ಪತ್ನಿಗೆ ಎಟಿಎಂ ಪಿನ್‌ ಶೇರ್‌ ಮಾಡಿ, ಪತಿ-ಪತ್ನಿ ಜಂಟಿ ಖಾತೆ ತೆರೆಯಿರಿ

ನವದೆಹಲಿ: ಮುಸ್ಲಿಂ ವಿಚ್ಛೇದಿತೆಯರ ಪ್ರಕರಣದ ತೀರ್ಪು ಪ್ರಕಟಣೆ ವೇಳೆ ಕುಟುಂಬದಲ್ಲಿ ಗೃಹಿಣಿಯರ ಪ್ರಮುಖ ಪಾತ್ರವನ್ನು ಒತ್ತಿಹೇಳಿರುವ ಸುಪ್ರೀಂ ಕೋರ್ಟ್‌, ‘ಗಂಡಂದಿರು ತಮ್ಮ ಆರ್ಥಿಕವಾಗಿ ಸ್ವತಂತ್ರರಲ್ಲದ ಹೆಂಡತಿಯರಿಗೆ ಆರ್ಥಿಕ ನೆರವು ನೀಡುವುದು ಅಗತ್ಯ. ಪತ್ನಿಯ ಜತೆಗೂಡಿ ಪತಿ ಜಂಟಿ ಬ್ಯಾಂಕ್ ಖಾತೆಗಳನ್ನು ತೆರೆಯಬೇಕು ಮತ್ತು ಮನೆಯೊಳಗಿನ ಮಹಿಳೆಯರಿಗೆ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಎಟಿಎಂ ಪಿನ್‌ ಹಂಚಿಕೊಳ್ಳಬೇಕು’ ಎಂದು ಸಲಹೆ ನೀಡಿತು.

Share this article