ರಾಜ್ಯದಲ್ಲಿ ಯೂರಿಯಾ ಕಿಚ್ಚು- ಗೊಬ್ಬರಕ್ಕೆ ರಾತ್ರಿ ಇಡೀ ಕ್ಯೂ । ಆದರೂ ಸಿಗುತ್ತಿಲ್ಲ ಗೊಬ್ಬರ

KannadaprabhaNewsNetwork |  
Published : Jul 26, 2025, 12:30 AM ISTUpdated : Jul 26, 2025, 04:15 AM IST
ಹಾವೇರಿ ಗದಗ ಗೊಬ್ಬರ ಪ್ರತಿಭಟನೆ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಖಾರಿಫ್‌ ಅವಧಿಗೆ ರಾಜ್ಯಕ್ಕೆ ಹಂಚಿಕೆ ಮಾಡಿದ್ದ ರಸಗೊಬ್ಬರವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸದ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ.

 ಬೆಂಗಳೂರು :  ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ದೊರೆಯದ್ದರಿಂದ ರೈತರು ಕಂಗಾಲಾಗಿದ್ದು, ಗೊಬ್ಬರಕ್ಕಾಗಿ ಕೃಷಿ ಚಟುವಟಿಕೆ ಬಿಟ್ಟು ಅಂಗಡಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಗದಗ, ಹಾವೇರಿ, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದ್ದು, ಶುಕ್ರವಾರ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಇನ್ನೂ ಕೆಲವು ಕಡೆ ಪೊಲೀಸ್‌ ಭದ್ರತೆಯಲ್ಲಿ ಗೊಬ್ಬರ ವಿತರಿಸಲಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ರೈತರು ಚಳಿ, ಮಳೆ ಲೆಕ್ಕಿಸದೆ ಗೊಬ್ಬರದ ಅಂಗಡಿಗಳ ಮುಂದೆ ರಾತ್ರಿಯಿಡೀ ಟ್ರ್ಯಾಕ್ಟರ್‌ನಲ್ಲಿ ವಾಸ್ತವ್ಯ ಹೂಡಿ ಮುಂಜಾನೆ ಸರದಿಯಲ್ಲಿ ನಿಂತು ಒಬ್ಬರಿಗೆ ಎರಡು ಚೀಲ ಮಾತ್ರ ಗೊಬ್ಬರ ಪಡೆದಿದ್ದಾರೆ. ಗದಗ ಜಿಲ್ಲೆಯ ಹಲವೆಡೆಎ ಪೊಲೀಸ್‌ ಭದ್ರತೆಯಲ್ಲಿ ಗೊಬ್ಬರ ವಿತರಿಸಲಾಗಿದೆ. ಸರದಿಯಲ್ಲಿ ನಿಂತರೂ ಗೊಬ್ಬರ ಸಿಗದೆ ನಿರಾಶರಾದ ಹಲವು ರೈತರು ಅಧಿಕಾರಿಗಳು, ಅಂಗಡಿಯವರ ಜೊತೆ ವಾಗ್ವಾದ ನಡೆಸಿದ್ದಾರೆ. ಹಾವೇರಿ ಜಿಲ್ಲೆಯ ಹರನಗಿರಿ ಸೊಸೈಟಿ ಎದುರು ಗುರುವಾರ ಸಂಜೆಯಿಂದ ಕಾಯುತ್ತಿದ್ದ ನೂರಾರು ರೈತರು, ಗೊಬ್ಬರ ಬರುತ್ತಿದ್ದಂತೆ ಮುಗಿಬಿದ್ದಿದ್ದು, ನೂಕುನುಗ್ಗಲು ಉಂಟಾಗಿ ವಿತರಕರ ಜತೆಗೆ ಮಾತಿನ ಚಕಮಕಿ ನಡೆದಿದೆ.

ನಮ್ಮಲ್ಲಿ ಯೂರಿಯಾ ಇಲ್ಲ, ಕೇಳಬೇಡಿ ಕೊಪ್ಪಳದಲ್ಲಿ ಹಲವಾರು ಗೊಬ್ಬರದ ಅಂಗಡಿಗಳ ಮುಂದೆ, ‘ನಮ್ಮಲ್ಲಿ ಯೂರಿಯಾ ಗೊಬ್ಬರ ಇಲ್ಲ, ದಯಮಾಡಿ ಕೇಳಬೇಡಿ’ ಎಂದು ಬೋರ್ಡ್‌ ಹಾಕಿದ್ದು, ರೈತರು ಪರದಾಡುತ್ತಿದ್ದಾರೆ. ಕೊಪ್ಪಳ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಯ ಮಳಿಗೆಯಲ್ಲಿಯೂ ಸಹ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ.

ಅಣಜಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ:

ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಯೂರಿಯಾ ಗೊಬ್ಬರ ಅಸಮರ್ಪಕ ಪೂರೈಕೆ ಖಂಡಿಸಿ ಹೋರಾಟ ಮುಂದುವರಿದಿದ್ದು, ಅಣಜಿ ಗ್ರಾಮದಲ್ಲಿ ರೈತರು ಹಳೇ ಟೈರ್‌ಗಳನ್ನು ಸುಟ್ಟು, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಳೆಯಾಶ್ರಿತ ಪ್ರದೇಶದಲ್ಲಿ ಮೆಕ್ಕೆಜೋಳ ಇತರೆ ಬೆಳೆಗಳನ್ನು ಬೆಳೆದಿದ್ದು, ಸತತ ಜಿಟಿಜಿಟಿ ಮಳೆಗೆ ಬೆಳೆ ಹಾಳಾಗುವ ಸ್ಥಿತಿ ತಲುಪುತ್ತಿದೆ. ತಕ್ಷ‍ಣವೇ ಯೂರಿಯಾ ಗೊಬ್ಬರ ಹಾಕದಿದ್ದರೆ ಬೆಳೆಯೇ ಕೈ ತಪ್ಪುವ ಅಪಾಯವಿದೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.

ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ:

ಜಗಳೂರು ತಾಲೂಕು ಕಚೇರಿ ಮುಂಭಾಗ ಮಳೆ ನಡುವೆಯೂ ಪ್ರತಿಭಟನೆ ನಡೆಸಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ತಾಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆದಿದ್ದು, ಉತ್ತಮ ಮಳೆಯಾಗುತ್ತಿದೆ. ಆದರೆ, ಅಂಗಡಿಯವರು ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಯೂರಿಯಾ ಮಾರುತ್ತಿದ್ದಾರೆ ಎಂದು ಆರೋಪಿಸಿದರು.

ಬೆಳೆಗೆ ಅಗತ್ಯಕ್ಕಿಂತ ಹೆಚ್ಚು ಬಳಕೆ ಬೇಡ: ಜಿಯಾವುಲ್ಲಾ

ಬೆಳೆಗಳಿಗೆ ರಸಗೊಬ್ಬರದ ಅಭಾವ ತಲೆದೋರಲು ರೈತರು ಅಗತ್ಯಕ್ಕಿಂತ ಹೆಚ್ಚಿನ ಯೂರಿಯಾ ಬಳಸುತ್ತಿರುವುದೇ ಕಾರಣ. ದಾವಣಗೆರೆ ಜಿಲ್ಲೆಯಲ್ಲಿ ಸದ್ಯ 1.20 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 53500 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಮೆಕ್ಕೆಜೋಳಕ್ಕೆ 1 ಅಥವಾ 2 ಸಲ ಮಾತ್ರ ಮೇಲುಗೊಬ್ಬರ ಕೊಟ್ಟರೆ ಸಾಕು. ಆದರೆ, ರೈತರು ಹೆಚ್ಚು ಯೂರಿಯಾ ಹಾಕುತ್ತಿದ್ದು, ಇದು ಒಳ್ಳೆಯದಲ್ಲ. ದಾವಣಗೆರೆ ಜಿಲ್ಲೆಗೆ ಏಪ್ರಿಲ್‌ನಿಂದ ಜುಲೈವರೆಗೆ 33 ಸಾವಿರ ಮೆಟ್ರಿಕ್‌ ಟನ್ ಯೂರಿಯಾ ಬೇಕಾಗಿತ್ತು. ಈಗಾಗಲೇ 36 ಸಾವಿರ ಮೆ.ಟನ್ ಯೂರಿಯಾ ಮಾರಾಟವೂ ಆಗಿದೆ. ಸದ್ಯಕ್ಕೆ 6,000 ಮೆಟ್ರಿಕ್ ಟನ್ ದಾಸ್ತಾನಿದ್ದು, ಜು.26ಕ್ಕೆ 2,050 ಮೆಟ್ರಿಕ್ ಟನ್ ಯೂರಿಯಾ ಬರಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ತಿಳಿಸಿದ್ದಾರೆ.

ರಸಗೊಬ್ಬರ ಕೊಡಿ: ನಡ್ಡಾಗೆ ಸಿದ್ದು ಪತ್ರಬೆಂಗಳೂರು: ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಖಾರಿಫ್‌ ಅವಧಿಗೆ ರಾಜ್ಯಕ್ಕೆ ಹಂಚಿಕೆ ಮಾಡಿದ್ದ ರಸಗೊಬ್ಬರವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸದ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ಕೂಡಲೇ ಬಾಕಿ ಇರುವ 1.65 ಲಕ್ಷ ಟನ್‌ ಯೂರಿಯಾ ಪೂರೈಸುವಂತೆ ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.ಬೇಡಿಕೆ ಕಡಿಮೆ ಇರುವ

ಕಡೆಯಿಂದ ಕೊಡುತ್ತೇವರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ. ಆದರೂ, ಬೇಡಿಕೆ ಕಡಿಮೆಯಿರುವ ಜಿಲ್ಲೆಗಳಿಂದ ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಗೊಬ್ಬರ ವರ್ಗಾವಣೆ ಮಾಡಿ ಸರಿದೂಗಿಸಲಾಗುತ್ತಿದೆ. ಹೀಗಾಗಿ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ.- ಚಲುವರಾಯಸ್ವಾಮಿ, ಕೃಷಿ ಸಚಿವ

PREV
Read more Articles on

Recommended Stories

ಫೇಸ್‌ಬುಕ್ಕಲ್ಲಿ ರಾಜಕೀಯ ಜಾಹೀರಾತು ಸ್ಥಗಿತ: ಯುರೋಪ್‌ನಲ್ಲಿ ಜಾರಿ
ರಾಹುಲ್‌ ಗಾಂಧಿ 2ನೇ ಅಂಬೇಡ್ಕರ್‌: ಕಾಂಗ್ರೆಸ್‌ ನಾಯಕ ಉದಿತ್‌ ರಾಜ್