ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿ ಮತ್ತು ರಾಜಕೀಯ ಪಕ್ಷವೊಂದರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ದಾಖಲಿಸಿದೆ.
ನವದೆಹಲಿ: ದೆಹಲಿ ಮದ್ಯ ಲೈಸೆನ್ಸ್ ಹಂಚಿಕೆ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅವರು ಅಧ್ಯಕ್ಷರಾಗಿರುವ ಆಮ್ ಆದ್ಮಿ ಪಾರ್ಟಿ (ಆಪ್) ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ಜಾರ್ಜ್‌ಶೀಟ್ ದಾಖಲಿಸಿದೆ.
ಹಾಲಿ ಮುಖ್ಯಮಂತ್ರಿಯೊಬ್ಬರು ಹಾಗೂ ಇಡೀ ರಾಜಕೀಯ ಪಕ್ಷವೊಂದು ಚಾರ್ಜ್‌ಶೀಟ್‌ಗೆ ಒಳಗಾಗಿದ್ದು ಇದೇ ಮೊದಲ ಬಾರಿಯಾಗಿದೆ. ಅಂದಹಾಗೆ ಕೇಜ್ರಿವಾಲ್ ವಿರುದ್ಧ ಈ ಪ್ರಕರಣದಲ್ಲಿ ವೈಯಕ್ತಿಕವಾಗಿ ಆರೋಪಪಟ್ಟಿ ಇದೇ ಮೊದಲ ಬಾರಿ ದಾಖಲಾಗಿದೆ.
ಇದರೊಂದಿಗೆ ಇ.ಡಿ. ಇದುವರೆಗೆ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕವಿತಾ ಅವರದ್ದೂ ಸೇರಿದಂತೆ ಒಟ್ಟು 8 ಚಾರ್ಜ್‌ಶೀಟ್‌ಗಳನ್ನು ದಾಖಲಿಸಿದಂತಾಗಿದೆ. ಜೊತೆಗೆ ಪ್ರಕರಣದಲ್ಲಿ ಇದುವರೆಗೆ 18 ಮಂದಿಯನ್ನು ಇ.ಡಿ. ಬಂಧಿಸಿದೆ. ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಿತ್ತಾದರೂ ಸುಪ್ರೀಂಕೋರ್ಟ್ ನೀಡಿದ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಪಕ್ಷ ಏಕೆ ಆರೋಪಿ?:
ದಿಲ್ಲಿ ಮದ್ಯ ಲೈಸೆನ್ಸ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಮೂಲಕ ಪಡೆಯಲಾದ ಹಣವನ್ನು ಗೋವಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಳಸಿಕೊಂಡಿರುವ ಕುರಿತು ಆರೋಪವಿದೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷವನ್ನೂ ಸಹ ಚಾರ್ಜ್‌ಶೀಟ್‌ನಲ್ಲಿ ಆರೋಪಿಯನ್ನಾಗಿ ನಮೂದಿಸಲಾಗಿದೆ. ಇನ್ನು ಹಗರಣದ ಮುಖ್ಯ ಸಂಚುಗಾರನೇ ಕೇಜ್ರಿವಾಲ್ ಎಂದು ಈ ಹಿಂದೆ ಇ.ಡಿ. ಆರೋಪಿಸಿತ್ತು. ಹೀಗಾಗಿ ಅವರ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.ಹವಾಲಾಕೋರರ ಜತೆ ಕೇಜ್ರಿ ಚಾಟ್ಸ್ ಪತ್ತೆ: ಇಡಿ ಹೇಳಿಕೆ
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ‘ಹವಾಲಾ ಆಪರೇಟರ್‌ಗಳ’ ನಡುವಿನ ಚಾಟ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.
ಕೇಜ್ರಿವಾಲ್ ಅವರನ್ನು ಇ.ಡಿ. ಆರೋಪಿ ಎಂದು ಹೆಸರಿಸಿದ್ದು, ಅವರು ತಮ್ಮ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಇ.ಡಿ. ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಕೇಜ್ರಿವಾಲ್ ತಮ್ಮ ಮೊಬೈಲ್ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಲು ನಿರಾಕರಿಸಿದ ನಂತರ ಕೆಲವು ಬಂಧಿತ ಹವಾಲಾ ಆಪರೇಟರ್‌ಗಳ ಸಾಧನಗಳಿಂದ ಚಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಅವರು ಹವಾಲಾ ನಂಟು ಹೊಂದಿದ್ದು ಗೊತ್ತಾಗಿದೆ’ ಎಂದಿದ್ದಾರೆ. ಆದರೆ ಇದು ಸುಳ್ಳು ಎಂದು ಕೇಜ್ರಿ ಪರ ವಕೀಲ ಅಭಿಷೇಕ್ ಸಿಂಘ್ವಿ ತಿರುಗೇಟು ನೀಡಿದ್ದಾರೆ.