ನವದೆಹಲಿ: ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 7 ಉಚಿತ ಕೊಡುಗೆಗಳನ್ನು ಆಮ್ ಆದ್ಮಿ ಸಂಚಾಲಕ, ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಘೋಷಣೆ ಮಾಡಿದ್ದಾರೆ.
ಶುಕ್ರವಾರ ರೇವ್ಡಿ ಪರ್ ಚರ್ಚಾ (ಉಚಿತ ಕೊಡುಗೆಗಳು) ಅಭಿಯಾನಕ್ಕೆ ಚಾಲನೆ ನೀಡಿದ ಅವರು, ‘ಉಚಿತ ವಿದ್ಯುತ್, ನೀರು, ಶಿಕ್ಷಣ, ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವೃದ್ಧರಿಗೆ ತೀರ್ಥಯಾತ್ರೆಗೆ ಯೋಜನೆ, ಮಹಿಳೆಯರಿಗೆ ಮಾಸಿಕ 1,000 ಆರ್ಥಿಕ ನೆರವು ನೀಡುವುದಾಗಿ’ ಹೇಳಿದರು.
ಈ ಪೈಕಿ ಈಗಾಗಲೇ 6 ಉಚಿತ ಯೋಜನೆ ಜಾರಿಯಲ್ಲಿದ್ದು, ಮಹಿಳೆಯರಿಗೆ ಮಾಸಿಕ 1000 ರು. ನೀಡುವುದು ಹೊಸ ಯೋಜನೆಯಾಗಿದೆ. ಈ 6 ಯೋಜನೆಗಳನ್ನು ಮುಂದುವರಿಸಿ ಹೊಸ ಯೋಜನೆ ಸೇರಿಸಲಾಗಿತ್ತಿದೆ.
ಜಿಲ್ಲಾ ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಸಭೆಗಳು, ಕರಪತ್ರಗಳ ಮೂಲಕ ಎಎಪಿ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ತಿಳಿಸಲಿದ್ದಾರೆ. ಕಳೆದ 10 ವರ್ಷಗಳಲ್ಲಿ ದೆಹಲಿಗೆ ಬಿಜೆಪಿಯ ಕೊಡುಗಳೇನು ಎಂದು ನಮ್ಮ ಕಾರ್ಯಕರ್ತರು ಮತದಾರರಿಗೆ ಕೇಳಿಲಿದ್ದಾರೆ. 20 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದು, ಯಾವುದಾದರೂ ಉಚಿತ ಕೊಡುಗೆ ನೀಡಿದ್ದಾರೆಯೇ? ಇದನ್ನು ಅವರು ಆಲೋಚನೆಯೂ ಮಾಡಲ್ಲ. ಆದರೆ ಎಎಪಿ ಅಷ್ಟೆ ಇದನ್ನು ನೀಡುತ್ತದೆ ಎಂದು ಅವರು ಹೇಳಿದರು.
ಕಳೆದ ಚುನಾವಣೆಯಲ್ಲಿ ಅಮಿತ್ ಶಾ, ಹರ್‌ದೀಪ್ ಪುರಿ ಅವರು, ಪೂರ್ವಂಚಲಿ ಸಮುದಾಯಕ್ಕೆ ನೀಡಿದ್ದ ನಕಲಿ ಭರವಸೆಗಳನ್ನು ಪ್ರಶ್ನಿಸಿದ ಅವರು, ಅನಧಿಕೃತ ಕಾಲೋನಿಗಳಲ್ಲಿ ಸಮರ್ಪಕ ನೋಂದಣಿ ಭರವಸೆ ನೀಡಿದ್ದ ಅವರು, ಕಳೆದ 5 ವರ್ಷಗಳಲ್ಲಿ ಮಾಡಿಲ್ಲ. ಆದರೆ ನಾವು ಅವರಿಗೆ ಘನತೆಯ ಬದುಕು ನೀಡಿದ್ದೇವೆ ಎಂದು ಹೇಳಿದರು. ಇದೇ ವೇಳೆ ದೆಹಲಿ ವಿಧಾನಸಭೆ ಚುನಾವಣೆ 11 ಅಭ್ಯರ್ಥಿಗಳ ಹೆಸರು ಘೋಷಿಸಲಾಯಿತು.