ಕೇಜ್ರಿವಾಲ್‌ ಬಂಧನ ಖಂಡಿಸಿ ದಿಲ್ಲಿಯಲ್ಲಿ ಆಪ್‌ ಪ್ರತಿಭಟನೆ

KannadaprabhaNewsNetwork | Updated : Mar 27 2024, 08:55 AM IST

ಸಾರಾಂಶ

ಅಬಕಾರಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಆಧಾರರಹಿತವಾಗಿ ಬಂಧಿಸಿದೆ ಎಂದು ಆಪ್‌ ಕಾರ್ಯಕರ್ತರು ದೆಹಲಿಯ ಪಟೇಲ್‌ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ನವದೆಹಲಿ: ಅಬಕಾರಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಆಧಾರರಹಿತವಾಗಿ ಬಂಧಿಸಿದೆ ಎಂದು ಆಪ್‌ ಕಾರ್ಯಕರ್ತರು ದೆಹಲಿಯ ಪಟೇಲ್‌ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು. 

ಇದೇ ವೇಳೆ ಜಾರಿ ನಿರ್ದೇಶನಾಲಯದ ವಶದಲ್ಲಿದ್ದರೂ ಕೇಜ್ರಿವಾಲ್‌ ನಿಯಮಬಾಹಿರವಾಗಿ ಕಾನೂನಾತ್ಮಕ ಆದೇಶ ಹೊರಡಿಸುತ್ತಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕರೂ ಪ್ರತಿಭಟನಾ ಮೆರವಣಿಗೆ ನಡೆಸಿದರು. 

ಈ ವೇಳೆ ಪ್ರತಿಭಟನೆ ತಾರಕಕ್ಕೇರಿದ ಪರಿಣಾಮ ಆಪ್‌ ಮುಖಂಡರಾದ ಪಂಜಾಬ್‌ ಸಚಿವ ಹರ್ಜೋತ್‌ ಸಿಂಗ್‌ ಬೈನ್ಸ್‌, ಸೋಮನಾಥ್‌ ಭಾರ್ತಿ ಹಾಗೂ ದೆಹಲಿ ವಿಧಾನಸಭೆ ಉಪಸಭಾಪತಿ ರಾಖಿ ಬಿರ್ಲಾ ಅವರನ್ನು ದದೆಹಲಿ ಪೊಲೀಸ್‌ ವಶಕ್ಕೆ ಪಡೆಯಿತು.

ಈ ಕುರಿತು ಟ್ವೀಟ್‌ ಮಾಡಿದ ಸೋಮನಾಥ್‌ ಭಾರ್ತಿ, ‘ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಆಪ್‌ ಕಾರ್ಯಕರ್ತರನ್ನೂ ಪೊಲೀಸರು ಬಂಧಿಸಿರುವುದು ಅಚ್ಚರಿ ತಂದಿದೆ.

 ಬಿಜೆಪಿಯು ಇದಕ್ಕೆ ಬೆಂಬಲಿಸುತ್ತಿದ್ದು, ಪ್ರಾಮಾಣಿಕರನ್ನು ಜೈಲಿಗಟ್ಟಿ ಭ್ರಷ್ಟರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಮತ್ತೊಂದೆಡೆ ಬಿಜೆಪಿಯು ದೆಹಲಿಯ ಫಿರೋಜ್‌ ಷಾ ಕೋಟ್ಲಾ ಮೈದಾನದಿಂದ ಕೇಂದ್ರೀಯ ಸಚಿವಾಲಯದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜೈಲಿನಲ್ಲಿರುವ ಅರವಿಂದ್‌ ಕೇಜ್ರಿವಾಲ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

Share this article