ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರ ಮುಖ, ತುಟಿ, ಅವು ಚಲಿಸುವ ರೀತಿಯನ್ನು ವರ್ಣಿಸಿ ಸುದ್ದಿಯಾದ ಬೆನ್ನಲ್ಲೇ, ಅಮೆರಿಕದ ಹಿರಿಯ ನಟಿಯೊಬ್ಬರು, ‘ನಾನು ವಿಚ್ಚೇದನ ಪಡೆದ ದಿನವೇ ನನ್ನನ್ನು ಖಾಸಗಿ ಭೇಟಿಗೆ ಆಹ್ವಾನಿಸಿದ್ದರು‘ ಎಂಬ ವಿಷಯ ಬಹಿರಂಗಪಡಿಸಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ಹಿರಿಯ ನಟಿ ಎಮ್ಮಾ ಥಾಂಪ್ಸನ್ (66) ಸ್ವಿಜರ್ಲೆಂಡ್‌ನಲ್ಲಿ ನಡೆದ ಲೊಕಾರ್ನೊ ಚಲನಚಿತ್ರೋತ್ಸವದಲ್ಲಿ ಮಾತನಾಡಿ, ‘1998ರಲ್ಲಿ ಪ್ರೈಮರಿ ಕಲರ್ಸ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಟ್ರಂಪ್ ನನಗೆ ಕರೆ ಮಾಡಿ, ನೀವು ನನ್ನ ಸುಂದರವಾದ ಸ್ಥಳಗಳಲ್ಲಿ ಒಂದಕ್ಕೆ ಬಂದು ಉಳಿಯುವುದನ್ನು ನಾನು ಇಷ್ಟಪಡುತ್ತೇನೆ. ಬಹುಶಃ ನಾವು ಒಟ್ಟಿಗೆ ಊಟ ಮಾಡಬಹುದು ಎಂದು ಆಹ್ವಾನಿಸಿದರು. ನಾನು ನಿಮ್ಮನ್ನು ಪುನಃ ಸಂಪರ್ಕಿಸುತ್ತೇನೆ ಎಂದು ತಿಳಿಸಿ ಕರೆ ಕಟ್ ಮಾಡಿದೆ. ನನ್ನ ವಿವಾಹ ವಿಚ್ಛೇದನ ನಡೆದ ದಿನವೇ ಅವರು ಕರೆ ಮಾಡಿದ್ದರು. ನನ್ನ ಟ್ರೈಲರ್‌ನಿಂದ ಅವರು ನನ್ನ ಸಂಪರ್ಕ ಸಂಖ್ಯೆ ಹುಡುಕಿದ್ದರು. ನಾನು ಅವರೊಂದಿಗೆ ಹೋಗಿದ್ದರೆ ಅಮೆರಿಕದ ಇತಿಹಾಸವನ್ನು ಬದಲಿಸಬಹುದಿತ್ತು’ ಎಂದಿದ್ದಾರೆ.
ಈ ಹಿಂದೆ ನಟಿ ಸಲ್ಮಾ ಹಯೆಕ್, ‘ನಾನು ನನ್ನ ಗೆಳೆಯನ ಜೊತೆಯಿರುವಾಗಲೇ ಟ್ರಂಪ್, ತನ್ನ ಜೊತೆ ಬಾ ಎಂದು ಆಹ್ವಾನಿಸಿದ್ದರು’ ಎಂದಿದ್ದರು.
ವಾಯುವಲಯ ನಿರ್ಬಂಧದಿಂದ ಪಾಕ್‌ಗೆ 127 ಕೋಟಿ ರು. ನಷ್ಟ
ಇಸ್ಲಾಮಾಬಾದ್: ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಕೈಗೊಂಡ ಪ್ರತೀಕಾರ ಕ್ರಮಗಳಿಂದ ಕುಪಿತಗೊಂಡು ಪಾಕಿಸ್ತಾನ ತನ್ನ ವಾಯುಸೀಮೆ ಬಂದ್ ಮಾಡಿದ ಫಲವಾಗಿ ನೆರೆದೇಶ 2 ತಿಂಗಳಲ್ಲಿ 127 ಕೋಟಿ ರು. ನಷ್ಟ ಅನುಭವಿಸಿದೆ.
ಪಾಕಿಸ್ತಾನ ತನ್ನ ವಾಯುಸೀಮೆ ಬಂದ್ ಮಾಡಿದ್ದರಿಂದ ಭಾರತದ ವಿಮಾನಗಳು ಪಾಕ್ ಮೇಲೆ ಹಾರದೆ ಅನ್ಯ ಮಾರ್ಗದ ಮೂಲಕ ಹೋಗುತ್ತಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಭಾರತದ ವಾಯುಯಾನ ಕಂಪನಿಗಳು ನೀಡುತ್ತಿದ್ದ ವಾಯುಸೀಮೆ ಬಳಕೆ ಶುಲ್ಕ ನಿಂತುಹೋಗಿದೆ. ಹೀಗಾಗಿ ಅಲ್ಲಿನ ವಿಮಾನ ನಿಲ್ದಾಣ ಪ್ರಾಧಿಕಾರದ ಆದಾಯ ಕುಸಿದಿದೆ ಎಂದು ಪಾಕಿಸ್ತಾನದ್ದೇ ಆದ ‘ಡಾನ್’ ಪತ್ರಿಕೆ ವರದಿ ಮಾಡಿದೆ.ವಾಯುಸೀಮೆ ಬಂದ್ ಆಗುವ ಮುನ್ನ ದಿನಂಪ್ರತಿ ಸರಿಸುಮಾರು 150 ಭಾರತೀಯ ವಿಮಾನಗಳು ಪಾಕಿಸ್ತಾನದ ವಾಯುಸೀಮೆ ಬಳಸಿ ಹಾರಾಟ ನಡೆಸುತ್ತಿದ್ದವು. ಇದರಿಂದ ಪಾಕಿಸ್ತಾನಕ್ಕೆ ಆದಾಯ ಬರುತ್ತಿತ್ತು. ಈಗ ಅದಕ್ಕೆ ಮಣ್ಣು ಬಿದ್ದಿದೆ. ಪಾಕ್ ವಾಯುಸೀಮೆ ಬಳಕೆಯಲ್ಲಿ ಶೇ.20ರಷ್ಟು ಕಡಿಮೆಯಾಗಿದೆ. ಆ.24ರ ಬೆಳಗ್ಗೆ 4.59ರವರೆಗೆ ಭಾರತೀಯ ವಿಮಾನಗಳಿಗೆ ಪಾಕ್ ವಾಯುಸೀಮೆ ಬಂದ್ ಆಗಿರಲಿದೆ.
ಸ್ವಾತಂತ್ರ್ಯ ದಿನದಂದು ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಘೋಷಣೆ?
ನವದೆಹಲಿ: 2019ರಲ್ಲಿ ಸಂವಿಧಾನದ 370ನೇ ಪರಿಚ್ಛೇದ ರದ್ದತಿ ಬಳಿಕ ರಾಜ್ಯ ಸ್ಥಾನಮಾನ ಕಳೆದುಕೊಂಡಿರುವ ಜಮ್ಮು- ಕಾಶ್ಮೀರಕ್ಕೆ ಆ.15ರ ಸ್ವಾತಂತ್ರ್ಯ ದಿನದಂದು ಮತ್ತೆ ಆ ಸ್ಥಾನಮಾನ ದೊರಕುವ ಸಾಧ್ಯತೆ ಇದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಆ.15ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಉಲ್ಲೇಖ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆ.5, 2019ರಂದು ಕೇಂದ್ರ ಸರ್ಕಾರ ತೆಗೆದು ಹಾಕಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿತ್ತು. ಈ ವೇಳೆ ಅಖಂಡ ಜಮ್ಮು-ಕಾಶ್ಮೀರವನ್ನು ಲಡಾಖ್ ಹಾಗೂ ಜಮ್ಮು-ಕಾಶ್ಮೀರ ಎಂಬ 2 ಪ್ರದೇಶಗಳಾಗಿ ವಿಂಗಡಿಸಿತ್ತು. ಅಂದಿನಿಂದಲೇ ರಾಜ್ಯ ಸ್ಥಾನಮಾನ ಕೊಡುವಂತೆ ಜಮ್ಮು ಕಾಶ್ಮೀರದ ನಾಯಕರ ಬೇಡಿಕೆ ಇದೆ. ಈ ಬಹುದಿನದ ಬೇಡಿಕೆಗೆ ಕೇಂದ್ರ ಸರ್ಕಾರವು ಶೀಘ್ರ ಸ್ಪಂದಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಏರ್ಪೋರ್ಟಲ್ಲಿ ಮಾಸ್ಕ್ ತೆಗೆಯಲು ಅಲ್ಲು ಹಿಂದೇಟು: ವೈರಲ್
ಮುಂಬೈ: ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್ ಅವರು ಮುಂಬೈ ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ವೇಳೆ ತಾವು ಧರಿಸಿದ್ದ ಮಾಸ್ಕ್ ತೆಗೆಯಲು ಹಿಂದೇಟು ಹಾಕಿದ್ದಅರೆ. ಅವರ ಈ ನಡೆಗೆ ನೆಟ್ಟಿಗರು ಆಕ್ಷೇಪಿಸಿದ್ದಾರೆ.ಅಲ್ಲು ಅವರು ಮುಂಬೈ ಏರ್ಪೋರ್ಟ್‌ನಲ್ಲಿ ಭದ್ರತಾ ತಪಾಸಣೆಗೆ ತೆರಳುವ ವೇಳೆ ಸಿಬ್ಬಂದಿಯು ನಟನಿಗೆ ಮಾಸ್ಕ್ ಮತ್ತು ಸನ್‌ಗ್ಲಾಸ್ ತೆರೆಯುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಕ್ಷಣ ಹೊತ್ತು ಅಸಮಾಧಾನಗೊಂಡ ಅರ್ಜುನ್, ಸಿಬ್ಬಂದಿ ಜತೆ ಚರ್ಚೆ ನಡೆಸಿ, ಬಳಿಕ ಮಾಸ್ಕ್ ತೆಗೆದು, ಮತ್ತೆ ಧರಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನಟನ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ‘ನೀವು ನಟರೇ ಆಗಿರಬಹುದು. ಮೊದಲು ನಿಯಮಗಳಿಗೆ ಬದ್ಧರಾಗಿರಿ’ ಎಂದು ಜನರು ತಿವಿದಿದ್ದಾರೆ. ‘ಭದ್ರತಾ ಸಿಬ್ಬಂದಿಯ ನಡೆ ಶೇ.100ರಷ್ಟು ಸರಿಯಿದೆ’ ಎಂದು ಬೆಂಬಲಿಸಿದ್ದಾರೆ.
ಸಿರಿಯಾ ಆಸ್ಪತ್ರೆಯಲ್ಲಿ ಮಂಡಿ ಊರದೇ ಎದ್ದು ನಿಂತವರು ಉಗ್ರರಿಂದ ಹತ್ಯೆ
ಡಮಾಸ್ಕಸ್: ಸಿರಿಯಾದಲ್ಲಿ ಆಂತರಿಕ ಸಂಘರ್ಷ ಮಿತಿ ಮೀರುತ್ತಿದ್ದು ಸರ್ಕಾರದ ನಿಯಂತ್ರಣದಲ್ಲಿದ್ದ ಆಸ್ಪತ್ರೆಯೊಂದಕ್ಕೆ ನುಗ್ಗಿದ ಉಗ್ರರು ಅಲ್ಲಿನ ಸಿಬ್ಬಂದಿಯನ್ನು ಮಂಡಿ ಊರಿ ಕೂರುವಂತೆ ಆದೇಶಿಸಿದ್ದಾರೆ. ಎದ್ದು ನಿಂತ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ.