ಏಲೂರು (ಆಂಧ್ರಪ್ರದೇಶ): ಖ್ಯಾತ ಚಿತ್ರನಟಿ ಸಮಂತಾ ಅವರ ಅಭಿಮಾನಿಯೊಬ್ಬ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಅಲ್ಲಪಡು ಗ್ರಾಮದಲ್ಲಿ ಸಮಂತಾ ಅವರಿಗಾಗಿ ದೇಗುಲ ನಿರ್ಮಿಸಿದ್ದಾನೆ. ಸಂದೀಪ್ ಎಂಬ ಅಭಿಮಾನಿ ತನ್ನ ಮನೆಯ ಮುಂದೆಯೇ ಗುಡಿ ಕಟ್ಟಿ, ಸಮಂತಾರ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದು, ನಿತ್ಯ ಪೂಜೆಯನ್ನೂ ಮಾಡುತ್ತಾರೆ. ಈ ಬಗ್ಗೆ ಮಾತನಾಡಿದ ಅವರು, ‘ಸಮಂತಾ ಬಹಳ ಒಳ್ಳೆಯ ನಟಿ. ಕಷ್ಟದಲ್ಲಿರುವ ಹಲವರಿಗೆ ಸಹಾಯ ಮಾಡಿದ್ದಾರೆ. ತಮಿಳು ನಟಿಯರಿಗೆ ದೇವಾಲಯ ನಿರ್ಮಿಸಲಾಗಿದೆ. ಆದರೆ ತೆಲುಗು ನಟಿಯರಿಗೆ ದೇವಾಲಯ ನಿರ್ಮಿಸಿರಲಿಲ್ಲ. ಹಾಗಾಗಿ ಅವರಿಗಾಗಿ ನಾನು ದೇವಾಲಯ ನಿರ್ಮಿಸಿದ್ದೇನೆ’ ಎಂದಿದ್ದಾರೆ. ಚಿತ್ರನಟಿಯರಾದ ಖುಷ್ಬೂ, ನಮಿತಾ, ಹನ್ಸಿಕಾ ಅವರಿಗೂ ಈ ಹಿಂದೆ ಗುಡಿ ಕಟ್ಟಿ ಜನ ಅಭಿಮಾನ ಮೆರೆದಿದ್ದರು.
ಟ್ರಂಪ್ ದಾಳಿಗೆ 322 ಅಂಕ ಕುಸಿದ ಸೆನ್ಸೆಕ್ಸ್: ಐಟಿ ಇಳಿಕೆ, ಫಾರ್ಮಾ ಏರಿಕೆ
ಮುಂಬೈ: ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಶೇ.27ರಷ್ಟು ತೆರಿಗೆ ವಿಧಿಸಿದ ಬೆನ್ನಲ್ಲೇ ಗುರುವಾರ ಷೇರುಮಾರುಕಟ್ಟೆಯೂ ಕುಸಿತ ಕಂಡಿದೆ. ಬಾಂಬೆ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ 322 ಅಂಕ ಕುಸಿದು 76295 ಅಂಕಗಳಲ್ಲಿ ಮುಕ್ತಾಯವಾಯಿತು.ನಿಫ್ಟಿ 82 ಅಂಕ ಇಳಿಕೆ ಕಂಡು 23250 ರಲ್ಲಿ ಮುಕ್ತಾಯವಾಯಿತು. ಟ್ರಂಪ್ ತೆರಿಗೆ ನೀತಿ ನೇರವಾಗಿ ಮಾಹಿತಿ ತಂತ್ರಜ್ಞಾನ ವಲಯಗಳ ಮೇಲೆ ಪರಿಣಾಮ ಬೀರುವುದರಿಂದ ಐಟಿ ಕ್ಷೇತ್ರದ ಷೇರುಗಳು ಶೇ.10ರಷ್ಟು ಕುಸಿತ ಕಂಡರೆ, ತೆರಿಗೆ ವಿನಾಯಿತಿ ಪಡೆದ ಔಷಧ ವಲಯಗಳ ಮೇಲಿನ ಷೇರು ಶೇ.7ರಷ್ಟು ಏರಿವೆ.
ಟ್ರಂಪ್ ಶಾಕ್‌ಗೆ ಅಮೆರಿಕ ಷೇರುಪೇಟೆಯೂ ಕುಸಿತ
ವಾಷಿಂಗ್ಟನ್: ವಿದೇಶಿ ವಸ್ತುಗಳ ಆಮದಿನ ಮೇಲೆ ತೆರಿಗೆ ಹೇರುವ ಅಧ್ಯಕ್ಷ ಟ್ರಂಪ್ ನಿರ್ಧಾರ, ವಿದೇಶಗಳಲ್ಲಿ ಮಾತ್ರವಲ್ಲದೇ ಅಮೆರಿಕದ ಷೇರುಪೇಟೆಗೂ ಭರ್ಜರಿ ಹೊಡೆತ ನೀಡಿದೆ. ತೆರಿಗೆ ನೀತಿ ಪ್ರಕಟಗೊಂಡ ಬೆನ್ನಲ್ಲೇ ಗುರುವಾರ ಅಮೆರಿಕದ ಷೇರುಪೇಟೆ ಭಾರೀ ಕುಸಿತ ಕಂಡಿದೆ. ಡೌಜೋನ್ಸ್ ಸೂಚ್ಯಂಕ 1400 ಅಂಕಗಳ ಭಾರೀ ಕುಸಿತ ಕಂಡರೆ ಎಸ್‌ಆ್ಯಂಡ್‌ಪಿ 500 ಸೂಚ್ಯಂಕ ಶೇ.4ರಷ್ಟು ಮತ್ತು ನಾಸ್ಡಾಕ್ ಕಾಂಪೋಸಿಟ್ ಇಂಡೆಕ್ಸ್ ಶೇ.5.1ರಷ್ಟು ಭಾರೀ ಕುಸಿತ ಕಂಡಿದೆ. ಅಮೆರಿಕದ ಪ್ರತಿತೆರಿಗೆ ಪರಿಣಾಮ ಅಮೆರಿಕಕ್ಕೆ ಆಮದು ದುಬಾರಿಯಾಗಿ ಹಣದುಬ್ಬರ ಏರಬಹುದು, ಆರ್ಥಿಕ ಪ್ರಗತಿ ಕುಂಠಿತ ಆಗಬಹುದು. ಇದರ ಪರಿಣಾಮ ದೇಶ ಆರ್ಥಿಕ ಹಿಂಜರಿತಕ್ಕೆ ತುತ್ತಾಗಬಹುದು ಎಂಬ ಭೀತಿ ಹೂಡಿಕೆದಾರರಲ್ಲಿ ಕಾಡಿದ ಕಾರಣ ಷೇರುಪೇಟೆ ಭಾರೀ ಕುಸಿತ ಕಂಡಿದೆ.
ಪಿಪಿಎಫ್ ನಾಮಿನಿಗಳ ನವೀಕರಣಕ್ಕೆ ಶುಲ್ಕವಿಲ್ಲ: ಸಚಿವೆ ನಿರ್ಮಲಾ ಸ್ಪಷ್ಟನೆ
ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆದಾರರು ನಾಮಿನಿಗಳ ನವೀಕರಣಕ್ಕೆ ಅಥವಾ ಸೇರ್ಪಡೆಗೆ ಯಾವುದೇ ರೀತಿಯ ಶುಲ್ಕವನ್ನು ನೀಡಬೇಕಾಗಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪಿಎಫ್ ನಾಮಿನಿಗಳ ನವೀಕರಣ ಅಥವಾ ಸೇರ್ಪಡೆಗೆ ಹಣಕಾಸು ಸಂಸ್ಥೆಗಳು 50 ರು. ಶುಲ್ಕವನ್ನು ವಿಧಿಸುತ್ತಿದ್ದವು. ಆದರೆ ಇದೀಗ ಆ ನಿಯಮ ರದ್ದುಗೊಳಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಜೊತೆಗೆ ‘ ಇತ್ತೀಚೆಗಷ್ಟೇ ಅಂಗೀಕರಿಸಲಾದ ಬ್ಯಾಂಕ್ ತಿದ್ದುಪಡಿ ಮಸೂದೆ 2025 ಪ್ರಕಾರ ಠೇವಣಿದಾರರ ಹಣ, ಸುರಕ್ಷಿತ ಲಾಕರ್‌ಗಳಗಾಗಿ ನೀವು ಗರಿಷ್ಠ ನಾಲ್ವರನ್ನು ನಾಮಿನಿ ಮಾಡಬಹುದು’ ಎಂದಿದ್ದಾರೆ.
ಬಾವಿ ಸ್ವಚ್ಛಗೊಳಿಸಲು ಇಳಿದಿದ್ದ 8 ಜನ ಸಾವು
ಖಾಂಡ್ವಾ: ಬಾವಿಯನ್ನು ಸ್ವಚ್ಛಗೊಳಿಸಲು ನೀರಿಗಿಳಿದಾಗ ಶಂಕಿತ ವಿಷಕಾರಿ ಅನಿಲವನ್ನು ಉಸಿರಾಡಿದ 8 ಮಂದಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. ‘ಗಣಗೌರ್ ಹಬ್ಬದ ಹಿನ್ನೆಲೆ ಬಾವಿಯಲ್ಲಿ ವಿಗ್ರಹಗಳನ್ನು ವಿಸರ್ಜಿಸಲು ನೀರನ್ನು ಸ್ವಚ್ಛಗೊಳಿಸುವ ಸಲುವಾಗಿ 8 ಜನ ನೀರಿಗಿಳಿದಿದ್ದರು. ಈ ವೇಳೆ ಬಾವಿಯಿಂದ ಹೊರಸೂಸುತ್ತಿದ್ದ ಅಪಾಯಕಾರಿ ಅನಿಲ ಸೇವಿಸಿ ಅವರು ಸಾವನ್ನಪ್ಪಿರುವ ಶಂಕೆಯಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.