ಮುಂಬೈ : ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೀನಾಯ ಸೋಲು ಅನುಭವಿಸಿದ ಮಹಾ ವಿಕಾಸ ಅಘಾಡಿ (ಎಂವಿಎ), ತನ್ನ ಪರಾಜಿತ ಅಭ್ಯರ್ಥಿಗಳಿಗೆ ವಿವಿಪ್ಯಾಟ್ ಮತಚೀಟಿಗಳ ಪರಿಶೀಲನೆಗೆ ಕೋರಿಕೆ ಸಲ್ಲಿಸಲು ಸೂಚಿಸಿದೆ. ಈ ಮೂಲಕ ಮತ ಎಣಿಕೆಯಲ್ಲಿ ಏನಾದರೂ ವ್ಯತ್ಯಾಸ ಮಾಡಲಾಗಿದೆಯೇ ಎಂಬುದನ್ನು ಅರಿಯಲು ಅದು ಉದ್ದೇಶಿಸಿದೆ.
ಇದೇ ವೇಳೆ, ಇವಿಎಂ ವಿರುದ್ಧ ಪ್ರತಿಭಟನೆ ನಡೆಸಲು ಅದು ಉದ್ದೇಶಿಸಿದೆ ಹಾಗೂ ಮತ್ತೆ ಬ್ಯಾಲೆಟ್ ಪೇಪರ್ ಪದ್ಧತಿಯನ್ನೇ ಜಾರಿಗೊಳಿಸಿ ಎಂದು ಕೋರ್ಟ್‌ಗೆ ಹೋಗಲು ಮುಂದಾಗಿದೆ ಎಂದು ಹೇಳಿದೆ.
ಎಂವಿಎ ನಾಯಕರಾದ ಶಿವಸೇನೆ (ಯುಬಿಟಿ) ನಾಯಕ ಉದ್ಧವ ಠಾಕ್ರೆ ಹಾಗೂ ಎನ್‌ಸಿಪಿ (ಎಸ್ಪಿ) ನಾಯಕ ಶರದ್ ಪವಾರ್ ಅವರು ಬುಧವಾರ ಪರಾಜಿತ ಅಭ್ಯರ್ಥಿಗಳನ್ನು ಭೇಟಿಯಾದರು. ಆಗ ಪರಾಜಿತರು, ‘ಇವಿಎಂ ತಿರುಚಿದ್ದೇ ನಮ್ಮ ಸೋಲಿಗೆ ಕಾರಣ’ ಎಂದು ಸಂದೇಹ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಠಾಕ್ರೆ ಹಾಗೂ ಪವಾರ್, ‘ಪರಾಜಿತರು ವಿವಿಪ್ಯಾಟ್ (ಮತ ತಾಳೆ ಯಂತ್ರ) ಪರಿಶೀಲನೆಗೆ ಅರ್ಜಿ ಹಾಕಿ ಎಂದು ಸೂಚಿಸಿದರು’ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆರಿಫ್ ನಸೀಂ ಖಾನ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಒಂದು ಕ್ಷೇತ್ರದ ಶೇ.5ರಷ್ಟು ಇವಿಎಂಗಳಲ್ಲಿನ ಮತಗಳನ್ನು ಮತ ತಾಳೆ ವ್ಯವಸ್ಥೆ (ವಿವಿಪ್ಯಾಟ್) ಮೂಲಕ ಪರಿಶೀಲನೆ ನಡೆಸಬಹುದಾಗಿದೆ. ಇದಕ್ಕಾಗಿ 2ನೇ ಹಾಗೂ 3ನೇ ಸ್ಥಾನ ಪಡೆದ ಅಭ್ಯರ್ಥಿಗಳು ಮತ ಎಣಿಕೆ ನಡೆದ 1 ವಾರದೊಳಗೆ ಅರ್ಜಿ ಸಲ್ಲಿಸಬೇಕು ಹಾಗೂ 41 ಸಾವಿರ ರು. ಶುಲ್ಕ ಕಟ್ಟಬೇಕು. ಇವಿಎಂ ಟ್ಯಾಂಪರಿಂಗ್ ಆಗಿದ್ದು ಸಾಬೀತಾದರೆ ಈ ಶುಲ್ಕ ಮರಳಿಸಲಾಗುತ್ತದೆ.
- ಮಹಾರಾಷ್ಟ್ರದಲ್ಲಿ ಸೋಲೊಪ್ಪದ ವಿಪಕ್ಷಗಳು
3 ಹಂತದ ಹೋರಾಟ
1. ವಿವಿಪ್ಯಾಟ್ ಚೀಟಿಗಳ ಎಣಿಕೆಗೆ ಕೋರಲು ಪರಾಜಿತರಿಗೆ ಠಾಕ್ರೆ, ಪವಾರ್ ಸೂಚನೆ
2. ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಾರ3. ಇವಿಎಂ ಬಳಕೆ ಕೈಬಿಟ್ಟು ಮತ್ತೆ ಬ್ಯಾಲೆಟ್ ಪೇಪರ್ ಜಾರಿಗಾಗಿ ಕೋರ್ಟ್‌ಗೆ ಮೊರೆ